ಚಿಕ್ಕೋಡಿ: ಚಿಕ್ಕೋಡಿ ತಾಲೂಕು ಶಿಕ್ಷಣ ಸಂಸ್ಥೆಯ ಶತಮಾನೋತ್ಸವ ಅಂಗವಾಗಿ ಅಂಗಸಂಸ್ಥೆಯಾದ ಎ.ಎ.ಪಾಟೀಲ ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯ ಆರ್.ಡಿ.ಮೈದಾನದಲ್ಲಿ ಅಂತರ್ ಮಹಾವಿದ್ಯಾಲಯ ಹಾಗೂ ರಾಷ್ಟ್ರಮಟ್ಟದ ಮುಕ್ತ ಮಹಿಳಾ ಕಬಡ್ಡಿ ಪಂದ್ಯಾವಳಿಯನ್ನು ಅ.೧೪ ಮತ್ತು ೧೫ರಂದು ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆ ನಿರ್ದೇಶಕ ಸತೀಶ ಕುಲಕರ್ಣಿ ಹೇಳಿದರು.
ತಾಲೂಕಿನ ಸಿಟಿಇ ಸಂಸ್ಥೆಯ ಸಿಬಿಎಸ್‌ಇ ಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶತಮಾನೋತ್ಸವದ ಹಿನ್ನೆಲೆ ಸಿಟಿಇ ಸಂಸ್ಥೆ ಹಾಗೂ ಅಂಗಸಂಸ್ಥೆಯಾದ ಅಹಲ್ಯಾಬಾಯಿ ಅಪ್ಪನಗೌಡ ಪಾಟೀಲ ಕಲಾ ಮತ್ತು ವಾಣಿಜ್ಯ ಮಹಿಳಾ ಪದವಿ ಮಹಾವಿದ್ಯಾಲಯದ ಸಹಯೋಗದಲ್ಲಿ ಮಹಿಳಾ ಕಬಡ್ಡಿ (ಮ್ಯಾಟ್ ಆಧಾರಿತ) ಹಾಗೂ ರಾಷ್ಟ್ರಮಟ್ಟದ ಮುಕ್ತ ಮಹಿಳಾ ಪ್ರೊ ಕಬಡ್ಡಿ ಪಂದ್ಯಾವಳಿಯನ್ನು ಅ.೧೪ರಂದು ಬೆಳಗ್ಗೆ ೮ ಗಂಟೆಗೆ ಆರ್.ಡಿ.ಪ್ರೌಢಶಾಲೆಯಲ್ಲಿ ಜರುಗುವುದು ಎಂದರು.
ಜಮಖಂಡಿ ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ವಿಜಯಪುರದ ಕುಲಪತಿ ವಿಜಯಾ ಕೋರಿಶೆಟ್ಟಿ ಹಾಗೂ ವಿಶೇಷ ಆಹ್ವಾನಿತರಾಗಿ ದೈಹಿಕ ಶಿಕ್ಷಣ ನಿರ್ದೇಶಕ ಹನುಮಂತಯ್ಯ ಪೂಜಾರಿ, ಶಿಕ್ಷಣಾಧಿಕಾರಿ ಪ್ರಭಾವತಿ ಪಾಟೀಲ ಆಗಮಿಸುವರು. ಸಿಟಿಇ ಸಂಸ್ಥೆಯ ಅಧ್ಯಕ್ಷ ಸಿ.ಬಿ.ಕುಲಕರ್ಣಿ ಅಧ್ಯಕ್ಷತೆ ವಹಿಸುವರು. ಸಂಜೆ ೫ ಗಂಟೆಗೆ ಜರುಗುವ ಕಾರ್ಯಕ್ರಮವನ್ನು ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಉದ್ಘಾಟಿಸುವರು.
ಚಿಕ್ಕೋಡಿ ಪುರಸಭೆ ಅಧ್ಯಕ್ಷೆ ವೀಣಾ ಕವಟಗಿಮಠ ಮತ್ತು ಜಿಲ್ಲಾ ಅಮೆಚೂರ್ ಕಬಡ್ಡಿ ಸಂಘದ ಅಧ್ಯಕ್ಷ ರಾಹುಲ್ ಜಾರಕಿಹೊಳಿ ಆಗಮಿಸುವರು. ಸಿಟಿಇ ಸಂಸ್ಥೆಯ ಆಡಳಿತ ಮಂಡಳಿಯವರು ಭಾಗವಹಿಸುವರು. ಕಬಡ್ಡಿ ಪಂದ್ಯಾವಳಿಗೆ ಅಂತರ್ ಮಹಾವಿದ್ಯಾಲಯಗಳ ವಿಭಾಗದಲ್ಲಿ ಸುಮಾರು ೧೫ ತಂಡಗಳು ಹಾಗೂ ಮುಕ್ತ ವಿಭಾಗದಲ್ಲಿ ಸುಮಾರು ೨೫ ತಂಡಗಳು ಪಾಲ್ಗೊಳ್ಳಲಿವೆ ಎಂದರು.