ವಿಜಯವಾಣಿ ಸುದ್ದಿಜಾಲ ಕಲಬುರಗಿ
ಕೆಕೆಆರ್‌ಡಿಬಿಯಲ್ಲಿ ಅಕ್ರಮ ನಡೆದಿದೆ. ಹಣ ದುರುಪಯೋಗ ಮಾಡಿಕೊಳ್ಳಲಾಗಿದೆ ಎಂದು ಈಗಿನ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಸೇರಿದಂತೆ ಕಾಂಗ್ರೆಸ್ ನಾಯಕರು ಭರ್ಜರಿ ಭಾಷಣ ಬಿಗಿದಿದ್ದರು. ಉನ್ನತ ಮಟ್ಟದ ತನಿಖೆ ಮಾಡಿ ತಪ್ಪು ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಗುಡುಗಿದ್ದರು. ಅಧಿಕಾರಕ್ಕೆ ಬಂದು ನಾಲ್ಕು ತಿಂಗಳಾದರೂ ನೀಡಿದ ಭರವಸೆ ಏನಾಯಿತು ?. ತನಿಖೆ ಎಲ್ಲಿವರೆಗೆ ಬಂತು ? ಯಾರ ವಿರುದ್ಧ ಕ್ರಮ ಕೈಗೊಂಡಿಲ್ಲ ಯಾಕೆ ಎಂದು ಜೆಡಿ ಎಸ್ ಕೊರ್ ಕಮೀಟಿ ಸದಸ್ಯರಾದ ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ ಖಾರವಾಗಿ ಪ್ರಶ್ನಿಸಿದರು.ತ
ನಗರದಲ್ಲಿ ಪತ್ರಕರ್ತರ ಜತೆ ಮಾತನಾಡಿ, ತನಿಖಾ ವರದಿ ಏನಾಯಿತು ಎನ್ನುವುದು ಬಹಿರಂಗಪಡಿಸಬೇಕು. ತಪ್ಪು ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಬರದಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಪಾರ ಪ್ರಮಾಣದಲ್ಲಿ ಬೆಳೆ ಹಾಳಾಗಿವೆ. ಕೂಡಲೇ ಪರಿಹಾರ ವಿತರಿಸಲು ಆರಂಭಿಸಬೇಕು. ಎಲ್ಲ ರೈತರಿಗೂ ಪರಿಹಾರ ನೀಡಬೇಕು. ನಿರಂತರವಾಗಿ ೭ ಗಂಟೆ ವಿದ್ಯುತ್ ಸರಬರಾಜು ಮಾಡಬೇಕು ಎಂದು ಒತ್ತಾಯಿಸಿದರು. ಕಳೆದ ವರ್ಷ ತೊಗರಿಗೆ ನೆಟೆ ರೋಗದಿಂದ ಹಾಳಾಗಿದ್ದು ಇನ್ನೂ ಪೂರ್ಣ ಪ್ರಮಾಣದಲ್ಲಿ ಪರಿಹಾರ ನೀಡಿಲ್ಲ. ಬಾಕಿ ಉಳಿದಿರುವ ಮೊತ್ತವನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.
ನೆಟೆ ರೋಗ ಬಂದಾಗ ಪ್ರಿಯಾಂಕ್ ಖರ್ಗೆ ನೇತೃತ್ವದಲ್ಲಿ ಕಾಂಗ್ರೆಸ್‌ನವರು ಪ್ರತಿಭಟನೆ ನಡೆಸಿ, ಪರಿಹಾರ ಸ್ವಲ್ಪ ಆಗಿದೆ. ಹೆಚ್ಚಿಗೆ ನೀಡಿ ಎಂದು ಆಗ್ರಹಿಸಿದ್ದರು. ಈಗ ಅವರದೇ ಸರ್ಕಾರವಿದ್ದರೂ ಪರಿಹಾರ ಮೊತ್ತ ಹೆಚ್ಚಿಸಲಿಲ್ಲ. ಹಿಂದಿನ ಸರ್ಕಾರ ಘೋಷಣೆ ಮಾಡಿರುವುದನ್ನು ಪೂರ್ಣ ಪ್ರಮಾಣದಲ್ಲಿ ಹಂಚಿಕೆ ಮಾಡುತ್ತಿಲ್ಲ ಎಂದು ಆರೋಪಿಸಿದರು. ಯಾಕೆ ತಡ ಮಾಡುತ್ತಿದ್ದಾರೆ ಎಂಬುದು ಸಚಿವರು ಸ್ಪಷ್ಟಪಡಿಸಲಿ ಎಂದು ಒತ್ತಾಯಿಸಿದರು.