ಜಿಲ್ಲೆ

ಮಾ.3 ರಂದು ಮುಕ್ತ ವಿವಿ ಘಟಿಕೋತ್ಸವ

ಸದೇಶ್ ಕಾರ್ಮಾಡ್

ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ 19ನೇ ವಾರ್ಷಿಕ ಘಟಿಕೋತ್ಸವ ಸಮಾರಂಭವನ್ನು ಮಾ.3 ರಂದು ಮಧ್ಯಾಹ್ನ 12ಕ್ಕೆ ಘಟಿಕೋತ್ಸವ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದು, ಸ್ನಾತಕ ಹಾಗೂ ಸ್ನಾತಕೋತ್ತರ ವಿಭಾಗ ಸೇರಿದಂತೆ ಒಟ್ಟು 7869 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುವುದು ಎಂದು ಕುಲಪತಿ ಪ್ರೊ.ಶರಣಪ್ಪ ವಿ ಹಲಸೆ ಹೇಳಿದರು.

ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅಧ್ಯಕ್ಷತೆಯಲ್ಲಿ ಹಮ್ಮಿಕೊಂಡಿರುವ ಸಮಾರಂಭದಲ್ಲಿ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ. ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ ಅತಿಥಿಯಾಗಿ ಪಾಲ್ಗೊಳ್ಳಲಿ ದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸ್ನಾತಕ ಹಾಗೂ ಸ್ನಾತಕೋತ್ತರ ವಿಭಾಗದಲ್ಲಿ ಒಟ್ಟು 10,276 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದರು. ಈ ಪೈಕಿ 7,869 (ಶೇ.76.57) ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಪರೀಕ್ಷೆ ಬರೆದ 5,652 ಮಹಿಳೆಯರ ಪೈಕಿ 4471 ಜನರು (ಶೇ.79.10) ಉತ್ತೀರ್ಣರಾಗಿದ್ದಾರೆ. ಅದೇ ರೀತಿ ಪರೀಕ್ಷೆ ಎದುರಿಸಿದ 4624 ಪುರುಷರ ಪೈಕಿ 3,398 (ಶೇ.73.48) ಮಂದಿ ತೇರ್ಗಡೆ ಹೊಂದಿದ್ದಾರೆ. ಮೂವರ ಮಹಾಪ್ರಬಂಧವನ್ನು ಪಿಎಚ್‌ಡಿ ಪದವಿಗೆ ಅಂಗೀಕರಿಸಲಾಗಿದೆ. ಒಟ್ಟು 30 ಚಿನ್ನದ ಪದಕ, 37 ನಗದು ಬಹುಮಾನ ನೀಡಲಾಗುವುದು. 5 ಪುರುಷರು, 25 ಮಹಿಳೆಯರು ಚಿನ್ನದ ಪದಕಕ್ಕೆ, 14 ಪುರುಷರು, 53 ಮಹಿಳೆಯರು ನಗದು ಬಹುಮಾನಕ್ಕೆ ಆಯ್ಕೆಗೊಂಡಿದ್ದಾರೆ ಎಂದರು.

ಚಿನ್ನದ ಪದಕ ವಿಜೇತರು: ಎಂ.ಎ. ಕನ್ನಡದ ನೀಲವ್ವ ಶಿವಪ್ಪ ಪಾಟೀಲ್, ಎಂ.ಎ. ಹಿಂದಿಯ ಗೀತಾಂಜಲಿ ರಮನ್‌ಕಟ್ಟಿ , ಎಂ.ಎ. ಸಮಾಜಶಾಸ್ತ್ರದ ಶ್ರುತಿ ಹಾಗೂ ಎಂ.ಎಸ್ಸಿ ಪರಿಸರ ವಿಜ್ಞಾನದಲ್ಲಿ ಜಿ.ಎನ್. ಭಾಗ್ಯ ತಲಾ 2 ಚಿನ್ನದ ಪದಕಕ್ಕೆ ಆಯ್ಕೆಗೊಂಡಿದ್ದಾರೆ. ಎಂ.ಎ. ಇಂಗ್ಲಿಷ್‌ನ ಎಂ. ಸಂಜನಾ, ಎಂ.ಎ. ಉರ್ದುವಿನ ಕಮೀರ್ ತಾಜ್, ಫರ್‌ಹತ್ ಜಬೀನ್ ಲಲಾವಾಲೆ, ಎಂ.ಎ. ಸಂಸ್ಕೃತದ ಅಭಿಘ್ನ, ಎಂ.ಎ. ಇತಿಹಾಸದ ಚಂದ್ರಶೇಖರ್ ಹುಣಸಿಗಿಡ್, ಅಶ್ವಿನಿ ರಾಯ್‌ಭಾಗ್, ಎಂ.ಎ. ಅರ್ಥಶಾಸ್ತ್ರದ ವಿಶ್ವನಾಥ್ ಅರಭಿ, ಎಂ.ಎ. ರಾಜ್ಯಶಾಸ್ತ್ರದ ಎಸ್. ಕಾವ್ಯ, ಎಂ.ಎ. ಪತ್ರಿಕೋದ್ಯಮ ಮತ್ತು ಸಮೂಹ ಮಾಧ್ಯಮದ ಪಿ. ಅವಿನಾಶ್ ಪ್ರಸಾದ್, ಕನ್ನಿಕಾ ಡಾಸ್, ಎಂ.ಕಾಂ. ವಾಣಿಜ್ಯಶಾಸ್ತ್ರದ ಮೇಘ ಜರಾಲೆ, ಎಂ.ಎಸ್ಸಿ. ರಸಾಯನ ಶಾಸ್ತ್ರದಲ್ಲಿ ಎ.ಎನ್.ಪೂಜಾ, ಎಸ್.ಎಂ. ರಕ್ಷಿತಾ, ಎಂ.ಎಸ್ಸಿ. ಸಿಎನ್‌ಡಿಯಲ್ಲಿ ಹರ್‌ಪೀತ್ ಕೌರ್, ಎಂ.ಎಸ್ಸಿ ಮನೋವಿಜ್ಞಾನದಲ್ಲಿ ಲತಾ ಅಂಗಡಿ, ಎಂ.ಲಿಬ್ ಐಎಸ್ಸಿಯಲ್ಲಿ ಬಿ. ನೂರಜನ್ನಿಫರ್ ಮನಸೇಹೆ, ಬಿ.ಲಿಬ್. ಐಎಸ್ಸಿಯಲ್ಲಿ ಅಕ್ಷತಾ ಮಲ್ಲೇಸಪ್ಪ ಹುರಕಡ್ಲಿ, ಬಿಎಡ್‌ನ ಸುಜಾತ ಸುಲಾಕೆ, ಬಿಎಯ ಎಂ.ಜ್ಯೋತಿ, ನಬೀಸಾಬ್ ಫೀರ್‌ಸಾಬ್ ಮುಲ್ಲಾ, ಬಿ.ಕಾಂ.ನ ನಂದಿತಾ ಪೈ, ಜಹಾಂಗೀರ್ ಮುಲ್ಲಾ ಚಿನ್ನದ ಪದಕಕ್ಕೆ ಅಯ್ಕೆಗೊಂಡಿದ್ದಾರೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮುಕ್ತ ವಿವಿ ಕುಲಸಚಿವ ಪ್ರೊ.ಕೆ.ಎಲ್.ಎನ್.ಮೂರ್ತಿ, ಡೀನ್‌ಗಳಾದ ಲಕ್ಷ್ಮೀ, ರಮಾನಾಥ್ ನಾಯ್ಡು, ಹಣಕಾಸು ಅಧಿಕಾರಿ ರಮೇಶ್ ಹಾಗೂ ಇತರರು ಇದ್ದರು.

ಮೂವರಿಗೆ ಗೌರವ ಡಾಕ್ಟರೇಟ್
ರಾಜ್ಯ ಮಾಹಿತಿ ಆಯೋಗದ ಆಯುಕ್ತ ಡಾ.ಎಚ್.ಸಿ. ಸತ್ಯನ್, ಚಿತ್ರದುರ್ಗ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಕಾರ್ಯದರ್ಶಿ ಕೆ.ಎಂ. ವೀರೇಶ್, ಮಂಡ್ಯದ ಎಸ್.ಬಿ. ಶಿಕ್ಷಣ ಟ್ರಸ್ಟ್ ಕಾರ್ಯದರ್ಶಿ ಮೀರಾ ಶಿವಲಿಂಗಯ್ಯ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುವುದು ಎಂದು ಕುಲಪತಿ ಪ್ರೊ.ಶರಣಪ್ಪ ವಿ ಹಲಸೆ ತಿಳಿಸಿದರು.

ಅಂತಾರಾಷ್ಟ್ರೀಯ ಸಮ್ಮೇಳನ
ಮುಕ್ತ ವಿವಿಯ ಡಾ.ಬಿ.ಆರ್. ಅಂಬೇಡ್ಕರ್ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ವತಿಯಿಂದ ಮಾ.2, 3 ರಂದು ಘಟಿಕೋತ್ಸವ ಭವನದಲ್ಲಿ ‘ಡಾ.ಬಿ.ಆರ್. ಅಂಬೇಡ್ಕರ್ ಅವರ ಅಭಿವೃದ್ಧಿ ದೃಷ್ಟಿಕೋನಗಳು ಹಾಗೂ ಸಮಕಾಲೀನ ಜಗತ್ತು’ ವಿಷಯದ ಕುರಿತು ಅಂತಾರಾಷ್ಟ್ರೀಯ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ ಎಂದು ಕುಲಪತಿ ಪ್ರೊ.ಶರಣಪ್ಪ ವಿ ಹಲಸೆ ತಿಳಿಸಿದರು.