ಜಿಲ್ಲೆ

ಮುಕ್ತ ವಿವಿ ಘಟಿಕೋತ್ಸವ: 17 ಸಾವಿರ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ

ಸದೇಶ್ ಕಾರ್ಮಾಡ್

ಮೈಸೂರು: ಮುಕ್ತ ಗಂಗೋತ್ರಿಯ ಘಟಿಕೋತ್ಸವ ಭವನದಲ್ಲಿ ಗುರುವಾರ ಆಯೋಜಿಸಿದ್ದ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ 20ನೇ ವಾರ್ಷಿಕ ಘಟಿಕೋತ್ಸದಲ್ಲಿ 17,348 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಚಿತ್ರದುರ್ಗದ ಐಡಿಯಲ್ ಎಜ್ಯುಕೇಷನ್ ಸೊಸೈಟಿ ಅಧ್ಯಕ್ಷ ಸಿ.ಎಂ. ಇರ್ಫಾನುಲ್ಲಾ ಷರೀಫ್ ಮತ್ತು ಕಲಬುರಗಿಯ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಡಾ. ದಾಕ್ಷಾಯಿಣಿ ಎಸ್. ಅಪ್ಪಾ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು.

ಲೋಕೋಪಯೋಗಿ ಸಚಿವ ಸತೀಶ ಎಲ್. ಜಾರಕಿಹೊಳಿ ಗೌರವ ಡಾಕ್ಟರೇಟ್‌ಗೆ ಆಯ್ಕೆಗೊಂಡಿದ್ದರು. ಆದರೆ, ಅವರು ಘಟಿಕೋತ್ಸವಕ್ಕೆ ಗೈರು ಹಾಜರಾದರು. 41 ವಿದ್ಯಾರ್ಥಿಗಳಿಗೆ ಪಿಎಚ್‌ಡಿ, 54 ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಹಾಗೂ 58 ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಲಾಯಿತು.

ಘಟಿಕೋತ್ಸವ ಭಾಷಣ ಮಾಡಿದ ಕೌಶಲ ಅಭಿವೃದ್ಧಿ ಮತ್ತು ವಾಣಿಜ್ಯೋದ್ಯಮ ಸಚಿವಾಲಯದ ಕಾರ್ಯದರ್ಶಿ ಅತುಲ್ ಕುಮಾರ್ ತಿವಾರಿ, ಸಾಂಪ್ರದಾಯಿಕ ಶೈಕ್ಷಣಿಕ ಮಾರ್ಗಗಳನ್ನು ಅನುಸರಿಸಲು ಸಾಧ್ಯವಾಗದವರಿಗೆ ಉನ್ನತ ಶಿಕ್ಷಣವನ್ನು ಪ್ರವೇಶಿಸುವಂತೆ ಮಾಡುವಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ನಿರ್ಣಾಯಕ ಪಾತ್ರ ವಹಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ದೂರಶಿಕ್ಷಣ ಮತ್ತು ಆನ್‌ಲೈನ್ ಕಲಿಕೆಗಳು ಭೌಗೋಳಿಕ ಅಡೆತಡೆಗಳನ್ನು ಮೀರಿ ಆಧುನಿಕ ವಿದ್ಯಾರ್ಥಿಗಳ ಅಗತ್ಯಗಳಿಗೆ ಅನುಗುಣವಾಗಿ ಹೊಂದಿಕೊಳ್ಳುವ ಕಲಿಕಾ ಅವಕಾಶಗಳನ್ನು ನೀಡುತ್ತವೆ. ದೇಶದಲ್ಲಿ ಆನ್‌ಲೈನ್ ಮತ್ತು ದೂರಶಿಕ್ಷಣದ ಭೂದೃಶ್ಯವು ವೇಗವಾಗಿ ವಿಕಸನಗೊಳ್ಳುತ್ತಿದೆ. ರಾಷ್ಟ್ರೀಯ ಶಿಕ್ಷಣ ನೀತಿಯು ತಂತ್ರಜ್ಞಾನ ಚಾಲಿತ ಶಿಕ್ಷಣದ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದೆ. ಹೆಚ್ಚುತ್ತಿರುವ ಇಂಟರ್‌ನೆಟ್ ಲಭ್ಯತೆ ಮತ್ತು ಇ-ಕಲಿಕಾ ವೇದಿಕೆಗಳ ಅಭಿವೃದ್ಧಿಯೊಂದಿಗೆ ದೇಶವು ದೂರಶಿಕ್ಷಣದಲ್ಲಿ ಜಾಗತಿಕ ನಾಯಕನಾಗಲು ಸಜ್ಜಾಗಿದೆ ಎಂದರು.

ಕೇಂದ್ರ ಸರ್ಕಾರ ಮುಕ್ತ ದೂರಶಿಕ್ಷಣ ಮತ್ತು ಆನ್‌ಲೈನ್ ಶಿಕ್ಷಣವನ್ನು ಬಲಪಡಿಸಲು ಹಲವಾರು ಉಪಕ್ರಮಗಳನ್ನು ಕೈಗೊಂಡಿದೆ. ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಕಲ್ಪಿಸಲಾದ ರಾಷ್ಟ್ರೀಯ ಡಿಜಿಟಲ್ ವಿಶ್ವವಿದ್ಯಾಲಯವು ತಡೆರಹಿತ ಶೈಕ್ಷಣಿಕ ಪರಿಸರ ವ್ಯವಸ್ಥೆ ರಚಿಸಲು ಆನ್‌ಲೈನ್ ಮತ್ತು ಮುಕ್ತ ಕಲಿಕಾ ಸಂಪನ್ಮೂಲಗಳನ್ನು ಸಂಯೋಜಿಸುವ ಗುರಿ ಹೊಂದಿದೆ ಎಂದು ಹೇಳಿದರು.

ಮುಕ್ತ ವಿವಿ ಕುಲಪತಿ ಪ್ರೊ.ಶರಣಪ್ಪ ವಿ. ಹಲಸೆ ಮಾತನಾಡಿ, ಮುಕ್ತ ವಿವಿಯು ಇತ್ತೀಚೆಗೆ 3.31ರ ಪ್ರಭಾವಶಾಲಿ ಸಿಜಿಪಿಎಯೊಂದಿಗೆ ನ್ಯಾಕ್ ಎಪ್ಲಸ್ ಮಾನ್ಯತೆಯನ್ನು ಪಡೆಯುವ ಮೂಲಕ ಗಮನಾರ್ಹ ಮೈಲಿಗಲ್ಲನ್ನು ಸಾಧಿಸಿದೆ. ಈ ಮಹತ್ವದ ಸಾಧನೆಯು ಶೈಕ್ಷಣಿಕ ಶ್ರೇಷ್ಠತೆಯಲ್ಲಿ ನಮ್ಮ ಅಚಲ ಬದ್ಧತೆಗೆ ಸಾಕ್ಷಿಯಾಗಿದೆ. ಇದರ ಪರಿಣಾಮ ವಿಶ್ವವಿದ್ಯಾಲಯದ ಪ್ರವೇಶಾತಿಯಲ್ಲಿ ಗಣನೀಯ ಪ್ರಮಾಣ ಏರಿಕೆ ಕಂಡಿದೆ ಎಂದು ಹೇಳಿದರು.

ನಮ್ಮ ವಿಶ್ವವಿದ್ಯಾಲಯಕ್ಕೆ ಯುಜಿಸಿ 47 ಆಫ್‌ಲೈನ್ ಶೈಕ್ಷಣಿಕ ಕಾರ್ಯಕ್ರಮಗಳು ಹಾಗೂ 10 ಆನ್‌ಲೈನ್ ಶೈಕ್ಷಣಿಕ ಕಾರ್ಯಕ್ರಮಗಳನ್ನು ಅನುಮೋದಿಸಿದೆ. ಇದು ದೇಶದ ಯಾವುದೇ ಮುಕ್ತ ವಿಶ್ವವಿದ್ಯಾಲಯಕ್ಕೆ ಮಂಜೂರಾದ ಶೈಕ್ಷಣಿಕ ಕಾರ್ಯಕ್ರಮಗಳ ಅತ್ಯಧಿಕ ಸಂಖ್ಯೆಯಾಗಿದೆ. ದೂರ ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸಲು ಸಲುವಾಗಿ ನಮ್ಮ ಪ್ರಾದೇಶಿಕ ಕೇಂದ್ರಗಳು ಹಾಗೂ ಕಲಿಕಾರ್ಥಿ ಸಹಾಯ ಕೇಂದ್ರಗಳ ಜಾಲವನ್ನು ಬಲಪಡಿಸಿದ್ದೇವೆ ಎಂದರು.

ಸಮಾರಂಭದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಕುಲಸಚಿವ ಪ್ರೊ.ಕೆ.ಬಿ. ಪ್ರವೀಣ, ಪರೀಕ್ಷಾಂಗ ಕುಸಲಚಿವ ಡಾ.ಎಚ್. ವಿಶ್ವನಾಥ್, ಅಕಾಡೆಮಿಕ್ ಡೀನ್ ಡಾ.ಎನ್. ಲಕ್ಷ್ಮೀ ಇದ್ದರು.