ಜಿಲ್ಲೆ

ಚೆಕ್‌ಪೋಸ್ಟ್ ತೆರೆದು ತಪಾಸಣೆಗೊಳಪಡಿಸಿ

Hassan

ಹಾಸನ: ಜಿಲ್ಲೆಯ ಗಡಿ ಭಾಗಗಳಲ್ಲಿ ಚೆಕ್‌ಪೋಸ್ಟ್ ತೆರೆದು ಒಳಬರುವ ಎಲ್ಲರನ್ನೂ ಸೂಕ್ತ ತಪಾಸಣೆಗೆ ಒಳಪಡಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಭವಾನಿ ರೇವಣ್ಣ ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಹೊಯ್ಸಳ ಸಭಾಂಗಣದಲ್ಲಿ ಶುಕ್ರವಾರ ಕರೊನಾ ಸೋಂಕು ನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮಗಳ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.

ಜಗತ್ತಿನಾದ್ಯಂತ ತಲ್ಲಣ ಸೃಷ್ಟಿಸಿರುವ ಕರೊನಾ ಸೋಂಕು ಪಕ್ಕದ ಕೊಡಗು ಜಿಲ್ಲೆಗೆ ಕಾಲಿಟ್ಟಿದೆ. ನಮ್ಮ ಜಿಲ್ಲೆಗೆ ಬಾರದಿರಲೆಂದು ಪ್ರಾರ್ಥಿಸೋಣ ಹಾಗೂ ಆಶಾವಾದಿಗಳಾಗೋಣ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು ಶಕ್ತಿಮೀರಿ ಕೆಲಸ ಮಾಡುತ್ತಿದ್ದಾರೆ. ಸೋಂಕಿನ ಮೂರನೇ ಹಂತದ ಸ್ಥಿತಿಯಲ್ಲಿರುವ ನಾವು ಇನ್ನಷ್ಟು ಜಾಗರೂಕರಾಗಬೇಕಿದೆ ಎಂದು ತಿಳಿಸಿದರು.

ಕೊಡಗು ಜಿಲ್ಲೆಗೆ ಗಡಿ ಹಂಚಿಕೊಂಡಿರುವ ಅರಕಲಗೂಡಿನ ಕೊಣನೂರು ಹಾಗೂ ಸಕಲೇಶಪುರ ತಾಲೂಕಿನ ಯಸಳೂರು, ವನಗೂರಿನಲ್ಲಿ ಚೆಕ್‌ಪೋಸ್ಟ್ ಹಾಕಬೇಕು. ವಿದೇಶದಿಂದ ಜಿಲ್ಲೆಗೆ ಆಗಮಿಸುವ ಎಲ್ಲರ ವಿವರ ಪಡೆದು ತಕ್ಷಣವೇ ಅವರನ್ನು ತಪಾಸಣೆಗೆ ಒಳಪಡಿಸಬೇಕು. ಕೆಲ ದಿನಗಳವರೆಗೆ ಮನೆಯಿಂದ ಹೊರಹೋಗದಂತೆ ಸೂಚನೆ ನೀಡಬೇಕು ಎಂದರು.

ಅನುದಾನ ಬಿಡುಗಡೆ ಮಾಡಲಿ: ಆರೋಗ್ಯ ವಿಚಾರವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಇಂತಹ ಸಂದರ್ಭದಲ್ಲಿ ಆರೋಗ್ಯ ಇಲಾಖೆಗೆ ಅನುದಾನ ನೀಡಬೇಕಾಗುತ್ತದೆ. ಈ ಕುರಿತು ಸಂಬಂಧಪಟ್ಟ ಅಧಿಕಾರಿ ಹಾಗೂ ಸಚಿವರ ಜತೆ ಮಾತನಾಡುತ್ತೇನೆ ಎಂದು ಭರವಸೆ ನೀಡಿದರು.

ಜಿಲ್ಲೆಯ ಎಲ್ಲ ತಾಲೂಕು ಆರೋಗ್ಯಾಧಿಕಾರಿ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಎಂ.ಸತೀಶ್‌ಕುಮಾರ್ ಅವರಿಂದ ಸಮಗ್ರ ಮಾಹಿತಿ ಪಡೆದರು.

ವೆಂಟಿಲೇಟರ್‌ಗಳ ಅವಶ್ಯಕತೆಯಿದೆ: ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ನಿರ್ದೇಶಕ ಡಾ.ಬಿ.ಸಿ.ರವಿಕುಮಾರ್ ಮಾತನಾಡಿ, ಕರೊನಾ ಸೋಂಕು ತಡೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಆದರೆ, ಕೆಲ ಆಸ್ಪತ್ರೆಗಳಲ್ಲಿ ವೆಂಟಿಲೇಟರ್‌ಗಳ ಸಮಸ್ಯೆಯಿದೆ. ಸೋಂಕು ಮೂರನೇ ಹಂತಕ್ಕೆ ತಲುಪಿದಾಗ ಅನಾಹುತ ಹೆಚ್ಚುವ ಸಾಧ್ಯತೆಯಿದ್ದು ಈಗಲೇ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕಾಗುತ್ತದೆ. ಹೀಗಾಗಿ ಇನ್ನಷ್ಟು ವೆಂಟಿಲೇಟರ್ ಮತ್ತು ಆಧುನಿಕ ವ್ಯವಸ್ಥೆ ಒಳಗೊಂಡ ಆಂಬುಲೆನ್ಸ್‌ಗಳ ವ್ಯವಸ್ಥೆ ಮಾಡಬೇಕೆಂದು ಮನವಿ ಮಾಡಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಎಂ.ಸತೀಶ್‌ಕುಮಾರ್ ಮಾತನಾಡಿ, ಆರೋಗ್ಯ ಇಲಾಖೆಯಿಂದ ಸಹಾಯವಾಣಿ (08172-246575) ತೆರೆದಿದ್ದು ದಿನಕ್ಕೆ 30 ಕರೆಗಳು ಬರುತ್ತಿವೆ ಎಂದರು.

ಕರೊನಾ ಭಾರತಕ್ಕೂ ಹರಡುವ ಮುನ್ಸೂಚಣೆ ಅರಿತು ಫೆ. 28 ರಂದು ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಭೆ ನಡೆಸಲಾಗಿದೆ. ಮಾ.5 ರಂದು ಮತ್ತೊಂದು ಜಿಲ್ಲಾ ಸಮನ್ವಯ ಸಮಿತಿ ಸಭೆ ನಡೆಸಿ ಕ್ರಮ ಕೈಗೊಳ್ಳಲಾಗಿದೆ. ಪ್ರವಾಸಿ ತಾಣಗಳಿಗೆ ಸಾರ್ವಜನಿಕರ ಪ್ರವೇಶ ನಿಷೇಧಿಸಿದ್ದು ಮಾತ್ರವಲ್ಲದೆ ಸಕಲೇಶಪುರ ತಾಲೂಕಿನ ಹೋಂ ಸ್ಟೇ, ರೆಸಾರ್ಟ್‌ಗಳ ಬಂದ್ ಮಾಡಿ ಆದೇಶಿಸಲಾಗಿದೆ. ಜಾತ್ರೆ, ಮದುವೆ, ನಾಮಕರಣ ಹೀಗೆ ಇತರ ಸಭೆ-ಸಮಾರಂಭಗಳನ್ನು ಮುಂದೂಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಲಾಗಿದೆ ಎಂದರು.

ಎಲ್ಲ ತಾಲೂಕು ಆಸ್ಪತ್ರೆಗಳಲ್ಲಿ ಪ್ರತ್ಯೇಕ ವಾರ್ಡ್ ಹಾಗೂ ಆಂಬುಲೆನ್ಸ್ ನಿಯೋಜಿಸಲಾಗಿದೆ. ಮಾಸ್ಕ್, ಸ್ಯಾನಿಟೈಸರ್‌ಗಳನ್ನು ಪೂರೈಸಲಾಗಿದೆ. ಖಾಸಗಿ ಮೆಡಿಕಲ್‌ಗಳಲ್ಲಿ ಮಾಸ್ಕ್‌ಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವ ಆರೋಪ ಕೇಳಿಬಂದಿದ್ದು ದಿಢೀರ್ ದಾಳಿ ಮೂಲಕ ಅಂಗಡಿ ಮಾಲೀಕರಿಗೆ ದಂಡ ವಿಧಿಸಲಾಗುತ್ತಿದೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಇದುವರೆಗೆ 161 ಜನರಿಗೆ ಸ್ಕ್ರೀನಿಂಗ್ ಮಾಡಲಾಗಿದೆ. 16 ಜನರ ಗಂಟಲು ದ್ರವ ಪರೀಕ್ಷೆ ನಡೆಸಿದ್ದು ಯಾರಲ್ಲೂ ಸೋಂಕು ಕಂಡುಬಂದಿಲ್ಲ. ಜಿಲ್ಲಾಸ್ಪತ್ರೆಯಲ್ಲಿ 300 ಹಾಸಿಗೆ ಸಾಮರ್ಥ್ಯದ ಕ್ವಾರೆಂಟೆನ್ ವಾರ್ಡ್ ತೆರೆಯಲಾಗಿದೆ. ಪ್ರಾಥಮಿಕ, ಸಮುದಾಯ ಹಾಗೂ ತಾಲೂಕು ಆಸ್ಪತ್ರೆಗಳಿಗೆ ಅನುದಾನ ಬಿಡುಗಡೆ ಮಾಡಲಾಗಿದೆ ಎಂದರು.

ಜಿಪಂ ಸಿಇಒ ಬಿ.ಎ.ಪರಮೇಶ್, ಯೋಜನಾಧಿಕಾರಿ ಮಹೇಶ್, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಕೃಷ್ಣಮೂರ್ತಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಹಿರಣ್ಣಯ್ಯ ಇತರರಿದ್ದರು.