ಬೆಳಗಾವಿ: ರಾಜ್ಯದ ‘ಡೇಂಜರ್ ರೆನ್’ನಲ್ಲಿರುವ ಜಿಲ್ಲೆಗಳಲ್ಲಿ ಬೆಳಗಾವಿಯೂ ಇದೆ. ಆದರೆ, ಈವರೆಗೂ ಬೆಳಗಾವಿಯಲ್ಲಿ ವೈರಾಲಜಿ ಲ್ಯಾಬ್ ಆರಂಭಗೊಂಡಿಲ್ಲ. ಜಿಲ್ಲೆಯಲ್ಲಿ ಈಗಾಗಲೇ 10 ಜನರಲ್ಲಿ ಕರೊನಾ ವೈರಸ್ ದೃಢವಾಗಿದ್ದು, ಜನತೆಯಲ್ಲಿ ಕರೊನಾ ಭೀತಿ ಮತ್ತಷ್ಟು ಹೆಚ್ಚಿಸಿದೆ.
ದೇಶದಲ್ಲಿ ಲಾಕ್‌ಡೌನ್ ಘೋಷಣೆಯಾಗಿ 19 ದಿನಗಳು ಕಳೆದಿವೆ. ಬೆಳಗಾವಿ ಜಿಲ್ಲೆಗೆ ಕರೊನಾ ಕಾಲಿಡುವ ಮುನ್ನವೇ ಇಲ್ಲಿಗೆ ಆಗಮಿಸಿದ್ದ ಆರೋಗ್ಯ ಸಚಿವ ಬಿ.ಶ್ರೀರಾಮುಲು ಅವರು ಜಿಲ್ಲೆಯಲ್ಲಿ ಕೋವಿಡ್-19 ಪರೀಕ್ಷೆಗೆ ತಕ್ಷಣವೇ ವೈರಾಲಜಿ ಲ್ಯಾಬ್ ಆರಂಭಿಸಲು ಇಂದೇ ಆದೇಶ ಹೊರಡಿಸುವುದಾಗಿ ಹೇಳಿದ್ದರು. ಅಲ್ಲದೆ, ಅಗತ್ಯ ತಯಾರಿ ನಡೆಸುವಂತೆಯೂ ಜಿಲ್ಲಾಡಳಿತಕ್ಕೆ ಸೂಚಿಸಿದ್ದರು.
ಜಿಲ್ಲಾಧಿಕಾರಿ ಕಚೇರಿಗೆ ಮಾ. 21ರಂದು ಆಗಮಿಸಿದ್ದ ಆರೋಗ್ಯ ಸಚಿವರು ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದರು. ಸಭೆ ನಡೆದು 22 ದಿನ ಕಳೆದರೂ ಗಡಿಜಿಲ್ಲೆ ಬೆಳಗಾವಿಯಲ್ಲಿ ವೈರಾಲಜಿ ಲ್ಯಾಬ್ ಆರಂಭಗೊಂಡಿಲ್ಲ. ಲಾಕ್‌ಡೌನ್ ಆರಂಭಗೊಂಡ ಈ ಮೂರು ವಾರಗಳಲ್ಲಿ ಗಡಿಜಿಲ್ಲೆ ಬೆಳಗಾವಿ ಅಕ್ಷರಶಃ ನಲುಗಿ ಹೋಗಿದೆ.
ಜಿಲ್ಲಾಡಳಿತ ಹೆಣಗಾಟ: ದೆಹಲಿ ನಿಜಾಮುದ್ದೀನ್ ಮರ್ಕಜ್‌ಗೆ ಭೇಟಿ ನೀಡಿದ್ದವರಲ್ಲಿ ಈಗಾಗಲೇ ಏಳು ಜನರಿಗೆ ಸೋಂಕು ದೃಢಪಟ್ಟಿದ್ದು, ಅವರೊಂದಿಗೆ ಪ್ರಾಥಮಿಕ ಸಂಪರ್ಕದಲ್ಲಿದ್ದ ಇನ್ನೂ ಮೂವರು ಸೋಂಕಿತರಾಗಿದ್ದಾರೆ. ಸೋಂಕಿತರು ವಾಸಿಸುತ್ತಿದ್ದ ಪ್ರದೇಶವನ್ನು ಕಂಟೈನ್ಮೆಂಟ್ ಪ್ರದೇಶವನ್ನಾಗಿಸಿ, ಸುತ್ತಲಿನ ಮೂರು ಕಿ.ಮೀ. ವ್ಯಾಪ್ತಿಯ ಪ್ರದೇಶವನ್ನು ಬಫರ್ ರೆನ್ ಎಂದು ಜಿಲ್ಲಾಡಳಿತ ಘೋಷಿಸಿದೆ. ಜಿಲ್ಲಾದ್ಯಂತ ಆತಂಕ ಆವರಿಸಿದ್ದು, ಜನಜೀವನ ಸ್ತಬ್ಧಗೊಂಡಿದೆ. ಸಾರ್ವಜನಿಕರಿಗೆ ಅಗತ್ಯ ವಸ್ತುಗಳ ಪೂರೈಕೆ ಜತೆಗೆ ಸೋಂಕು ಹರಡದಂತೆ ಸಾಮಾಜಿಕ ಅಂತರ ಕಾಪಾಡಲು ಜಿಲ್ಲಾಡಳಿತ ಹೆಣಗಾಡುತ್ತಿದೆ.
ವ್ಯವಸ್ಥೆಗೆ ಕರೊನಾ ಬ್ರೇಕ್: ಸ್ಮಾರ್ಟ್ ಸಿಟಿಯ ಸಾವಿರಾರು ಕೋಟಿ ರೂ.ಗಳ ಅಭಿವೃದ್ಧಿ ಕಾಮಗಾರಿ, ಕೇಂದ್ರ ಬಸ್ ನಿಲ್ದಾಣ, ಸಿಬಿಟಿ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸೇರಿದಂತೆ ನೆರೆ ಸಂತ್ರಸ್ತರ ಲಕ್ಷಾಂತರ ಮನೆ ನಿರ್ಮಾಣ ಕಾಮಗಾರಿಗೂ ಕರೊನಾ ಬ್ರೇಕ್ ಹಾಕಿದೆ. ಬೆಳಗಾವಿಯ ವಾಣಿಜ್ಯ-ವಹಿವಾಟು ಸಂಪೂರ್ಣ ತಟಸ್ಥಗೊಂಡಿದೆ. ಅಪಾರ ನಷ್ಟದಿಂದ ಮತ್ತೆ ಹೇಗೆ ಚೇತರಿಸಿಕೊಳ್ಳುವುದು ಎಂಬ ಚಿಂತೆಯಲ್ಲಿ ವ್ಯಾಪಾರಸ್ಥರಿದ್ದಾರೆ. ಈಗಾಗಲೇ ಮನೆ-ಮಠ ಇಲ್ಲದವರು, ಬೀದಿಬೀದಿ ಅಲೆದು ಜೀವನೋಪಾಯಕ್ಕಾಗಿ ಸಣ್ಣಪುಟ್ಟ ಕೆಲಸ ಮಾಡುತ್ತಿದ್ದವರ ಬವಣೆಯಂತೂ ಹೇಳತೀರದಾಗಿದೆ.
ಗೋವಾ ಮತ್ತು ಮಹಾರಾಷ್ಟ್ರದ ಗ್ರಾಹಕರನ್ನೂ ಆಧರಿಸಿದ್ದ ಕೆಎಂಎಫ್, ಎಪಿಎಂಸಿ, ಚಿನ್ನಾಭರಣ ಹಾಗೂ ಜವಳಿ ಉದ್ಯಮವೂ ಸಹ ವಹಿವಾಟು ಇಲ್ಲದೆ ಆರ್ಥಿಕ ದಿಗ್ಬಂಧನದ ಸುಳಿಗೆ ಸಿಲುಕಿವೆ. ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ಯಮಗಳು ಈಗಾಗಲೇ ಸಿದ್ಧಪಡಿಸಿದ ಉತ್ಪನ್ನಗಳಿಗೆ ಮಾರುಕಟ್ಟೆ ಇಲ್ಲದೆ ತತ್ತರಿಸಿವೆ.
ಉಪ ಮುಖ್ಯಮಂತ್ರಿ ಸೇರಿ ಮೂವರು ರಾಜ್ಯ ಸಚಿವರು ಹಾಗೂ ರೈಲ್ವೆ ಇಲಾಖೆ ರಾಜ್ಯ ಸಚಿವರು ಇರುವ ಜಿಲ್ಲೆಯಲ್ಲಿ ಕೋವಿಡ್-19 ಸೋಂಕು ನಿಯಂತ್ರಣಕ್ಕೆ ಹಾಗೂ ಮುನ್ನೆಚ್ಚರಿಕೆಯ ಕ್ರಮಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲು ಮೇಲಿಂದ ಮೇಲೆ ಸಭೆ ನಡೆಲಾಗುತ್ತಿದೆ. ಜಿಲ್ಲಾಡಳಿತ, ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ ಮತ್ತು ಜಿಪಂನ ಉನ್ನತ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ಸಭೆಗಳೂ ಮೇಲಿಂದ ಮೇಲೆ ನಡೆಯುತ್ತಲಿವೆ. ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಅವರು ಲಾಕ್‌ಡೌನ್ ಅವಧಿಯಲ್ಲಿ ಎರಡು ಬಾರಿ ಸಭೆ ನಡೆಸಿ, ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿದ್ದಾರೆ. ಆದರೆ, ಬೆಳಗಾವಿಗೆ ಬಂದಿದ್ದ ವೈರಾಲಜಿ ಲ್ಯಾಬ್‌ಅನ್ನು ಹುಬ್ಬಳ್ಳಿಯ ಕಿಮ್ಸ್‌ನಲ್ಲಿ ಕಾರ್ಯಾರಂಭ ಮಾಡಿಸುವ ಮೂಲಕ ಬೆಳಗಾವಿಗೆ ಅನ್ಯಾಯ ಮಾಡಿದ್ದಾರೆ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದೆ.
ಸೋಂಕಿತ 10 ರೋಗಿಗಳಿಗೆ ಜಿಲ್ಲಾಸ್ಪತ್ರೆ ಯಲ್ಲಿ ಚಿಕಿತ್ಸೆ ನೀಡಲಾ ಗುತ್ತಿದೆ. ಶಂಕಿತ ಮತ್ತು ಸೋಂಕಿತರ ಸಂಪರ್ಕದಲ್ಲಿದ್ದವರನ್ನೂ ಕ್ವಾರೆಂಟೈನ್‌ನಲ್ಲಿಟ್ಟು ನಿಗಾ ವಹಿಸಲಾಗಿದೆ. ಬೆಳಗಾವಿಯಲ್ಲಿ ವೈರಾಲಜಿ ಲ್ಯಾಬ್ ಆರಂಭಕ್ಕೆ ಸಿದ್ಧತೆ ಮಾಡಿಕೊಳ್ಳಲು ಆರೋಗ್ಯ ಸಚಿವರು ಸಲಹೆ ನೀಡಿದ್ದರು. ಆದರೆ, ಸರ್ಕಾರ ಇಂದಿಗೂ ಲ್ಯಾಬ್ ಮಂಜೂರು ಮಾಡಿಲ್ಲ. ಅನುಮತಿ ಕೊಟ್ಟ ಬಳಿಕ ವೈರಾಲಜಿ ಲ್ಯಾಬ್ ಆರಂಬಿಸಲಾಗುವುದು.ಡಾ. ಎಸ್.ಬಿ.ಬೊಮ್ಮನಹಳ್ಳಿ ಜಿಲ್ಲಾಧಿಕಾರಿ
| ರವಿ ಗೋಸಾವಿ ಬೆಳಗಾವಿ