ಜಿಲ್ಲೆ

ಬಿಜೆಪಿ ಸೇರಲು ತಿಪ್ಪಾರೆಡ್ಡಿ ಬಹಿರಂಗ ಆಹ್ವಾನ

ಚಿತ್ರದುರ್ಗ: ಪಕ್ಷದ ತತ್ವ, ಸಿದ್ಧಾಂತಗಳನ್ನು ಒಪ್ಪುವ ಪ್ರತಿಪಕ್ಷಗಳ ಮುಖಂಡರು ಬಿಜೆಪಿ ಸೇರಬಹುದು ಎಂದು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಬಹಿರಂಗ ಆಹ್ವಾನ ನೀಡಿದರು.

ನಗರದ ಜಗಳೂರು ಮಹಾಲಿಂಗಪ್ಪ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ಚಿತ್ರದುರ್ಗ ಕ್ಷೇತ್ರ ವ್ಯಾಪ್ತಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.

ಬಿಜೆಪಿ ಸಿದ್ಧಾಂತಗಳನ್ನು ಒಪ್ಪಿಕೊಳ್ಳುವವರಿಗೆ ಮಾತ್ರ ಸ್ವಾಗತಿಸಲಾಗುವುದು. ಯಾವುದೇ ಜಾತಿ, ಧರ್ಮಕ್ಕೆ ಸಿಮೀತವಾಗದೆ ಎಲ್ಲರಿಗೂ ಅಧಿಕಾರ ಕೊಡುವ ಕೆಲಸವನ್ನು ಪಕ್ಷ ಮಾಡುತ್ತಿದೆ ಎಂದರು.

ನನ್ನ ಕ್ಷೇತ್ರದಲ್ಲಿ ಜನರ ನಿರೀಕ್ಷೆ ಮೀರಿ ಅಭಿವೃದ್ಧಿ ಕೆಲಸಗಳಾಗಿವೆ. ಕೇಂದ್ರ, ರಾಜ್ಯ ಸರ್ಕಾರಗಳ ಸಾಧನೆ ಹಾಗೂ ಕ್ಷೇತ್ರದಲ್ಲಿ ಆಗಿರುವ ಅಭಿವೃದ್ಧಿ ಕೆಲಸಗಳನ್ನು ಮೆಚ್ಚಿಕೊಂಡು ಮುಖಂಡರು ಬಿಜೆಪಿ ಸೇರಿದ್ದಾರೆ ಎಂದು ಹೇಳಿದರು.

ವಿಧಾನ ಪರಿಷತ್ ಮುಖ್ಯಸಚೇತಕ ವೈ.ಎ.ನಾರಾಯಣಸ್ವಾಮಿ ಮಾತನಾಡಿ, ಫಲಾನುಭವಿಗಳ ಮನೆ ಬಾಗಿಲಿಗೆ ತೆರಳಿ ಬಿಜೆಪಿ ಸರ್ಕಾರದ ಕೊಡುಗೆಗಳನ್ನು ವಿವರಿಸುವಂತೆ ಕಾರ್ಯಕರ್ತರಿಗೆ ತಿಳಿಸಿದರು.

ಕೇಂದ್ರ ಮತ್ತು ರಾಜ್ಯಸರ್ಕಾ ರಗಳ ಅಭಿವೃದ್ಧಿಯೇ ವಿಧಾನಸಭಾ ಚುನಾವಣೆ ಮೂಲ ಮಂತ್ರವಾಗಬೇಕು. ನಮ್ಮ ಕೆಲಸಕ್ಕೆ ಕೂಲಿ ಕೊಡುವಂತೆ ಮತದಾರರನ್ನು ಕೇಳುವ ಕಾಲವೀಗ ಬಂದಿದೆ ಎಂದರು.

ನಗರಸಭೆ ಮಾಜಿ ಸದಸ್ಯ ಎಸ್.ಬಿ.ಎಲ್.ಮಲ್ಲಿಕಾರ್ಜುನ್ ನೇತೃತತ್ವದಲ್ಲಿ ಮುಖಂಡರಾದ ರಾಘವೇಂದ್ರ, ವೆಂಕಟೇಶ್, ಜಗದೀಶ್ ತಿಪ್ಪಾರೆಡ್ಡಿ ಸಮ್ಮುಖದಲ್ಲಿ ಪಕ್ಷ ಸೇರ್ಪಡೆಗೊಂಡರು.

ಪಕ್ಷದ ಜಿಲ್ಲಾಧ್ಯಕ್ಷ ಎ.ಮುರಳಿ, ಮಾಜಿ ಅಧ್ಯಕ್ಷ ಟಿ.ಜಿ.ನರೇಂದ್ರನಾಥ್,ಮುಖಂಡರಾದ ಗೀತಾ ಧನಂಜಯ್, ನವೀನ್ ಚಾಲುಕ್ಯ, ಕಲ್ಲೇಶಯ್ಯಸ್ವಾಮಿ, ಸಂಪತ್‌ಕುಮಾರ್, ನರೇಂದ್ರ ಹೊನ್ಯಾಳ್, ಕೆ.ಶಿವಣ್ಣಾಚಾರ್ ಇತರರು ಇದ್ದರು.