ನಿಡ್ತ ಶಾಲಾ ಮಕ್ಕಳಿಗೆ ಹಳೇ ವಿದ್ಯಾರ್ಥಿ ಸಂಘದಿಂದ ಮಕ್ಕಳಿಗೆ ಸಮವಸ್ತ್ರ ವಿತರಣೆ ಮಾಡಲಾಯಿತು. ಗ್ರಾ.ಪಂ.ಅಧ್ಯಕ್ಷ ಅಶೋಕ್, ಜಯಕುಮಾರ್, ಸೋಮಪ್ಪ ಇತರರು ಇದ್ದರು. 
ಜಿಲ್ಲೆ

ನಿಡ್ತ ಸರ್ಕಾರಿ ಶಾಲೆಯಲ್ಲಿ ಆಂಗ್ಲ ಮಾಧ್ಯಮ ತೆರೆಯಿರಿ

ಮಾದೇಶ್ ತಿ.ನರಸೀಪುರ

ಶನಿವಾರಸಂತೆ: ಸಮೀಪದ ನಿಡ್ತ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ 1988-89ನೇ ಸಾಲಿನ ಕ್ರೀಡಾ ವಿದ್ಯಾರ್ಥಿಗಳು ಹಾಗೂ ಪೂರ್ವ ವಿದ್ಯಾರ್ಥಿಗಳ ಸಂಘದ ವತಿಯಿಂದ ಸಮವಸ್ತ್ರ ವಿತರಣೆ ಮಾಡಲಾಯಿತು.

ನಿಡ್ತ ಗ್ರಾ.ಪಂ. ಅಧ್ಯಕ್ಷ ಅಶೋಕ್ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಹಾಜರಾತಿ ಪ್ರಮಾಣ ತೀರಾ ಕಡಿಮೆಯಾಗುತ್ತಿದೆ. ಪಾಲಕರು ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುವ ಮೂಲಕ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸುವಂತೆ ಮನವಿ ಮಾಡಿದರು.

ಪೂರ್ವ ವಿದ್ಯಾರ್ಥಿ ಸಂಘದ ಅಧ್ಯಕ್ಷ ಜಯಕುಮಾರ್ ಮಾತನಾಡಿ, ನಮ್ಮೂರಿನ ಶಾಲೆಯಲ್ಲಿ ಸಾವಿರಾರು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡಿರುವುದರಿಂದ ಶಾಲೆಯನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇವೆ. ಶಾಲೆಯಲ್ಲಿ ಆಂಗ್ಲ ಮಾಧ್ಯಮ ತೆರೆಯಲು ಶಿಕ್ಷಣ ಇಲಾಖೆಗೆ, ಶಿಕ್ಷಣ ಸಚಿವರಿಗೆ, ಶಾಸಕರಿಗೆ ಮನವಿ ಪತ್ರ ನೀಡಲಾಗಿದೆ. ಹಾಗಾಗಿ ಪಾಲಕರು ಸರ್ಕಾರಿ ಶಾಲೆಗೆ ಮಕ್ಕಳನ್ನು ಸೇರಿಸುವಂತೆ ಮನವಿ ಮಾಡಿದರು.

ಸಮೂಹ ಸಂಪನ್ಮೂಲ ವ್ಯಕ್ತಿ ಸಿ.ಕೆ.ದಿನೇಶ್ ಮಾತನಾಡಿ, ಕ್ಲಸ್ಟರ್ ವಿಭಾಗದಲ್ಲಿ ಹೆಚ್ಚು ವಿದ್ಯಾರ್ಥಿಗಳಿರುವ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಶಾಲೆ ತೆರೆಯಲು ಸರ್ಕಾರ ಮತ್ತು ಶಿಕ್ಷಣ ಇಲಾಖೆ ಆದೇಶ ನೀಡಿದೆ. ಅದರಂತೆ ಕ್ಲಸ್ಟರ್ ವ್ಯಾಪ್ತಿಯಲ್ಲಿ ಹೆಚ್ಚು ವಿದ್ಯಾರ್ಥಿಗಳಿರುವ ಶಾಲೆಯಲ್ಲಿ ಆಂಗ್ಲ ಮಾಧ್ಯಮ ಶಾಲೆ ತೆರೆಯಲಾಗಿದೆ ಎಂದು ತಿಳಿಸಿದರು.

ಹಳೆಯ ವಿದ್ಯಾರ್ಥಿ ಮತ್ತು ನಿವೃತ್ತ ಶಿಕ್ಷಕ ಡಿ.ಬಿ.ಸೋಮಪ್ಪ, ಪಿಡಿಒ ಮಾನಸಾ, ಗ್ರಾಮಸ್ಥರಾದ ಸುಬ್ಬಪ್ಪ, ಪುಟ್ಟಣ್ಣ, ನಿವೃತ್ತ ಶಿಕ್ಷಕಿ ಸ್ವಾತಿ, ಎಸ್‌ಡಿಎಂಸಿ ಅಧ್ಯಕ್ಷೆ ಪೂಜಾ, ಮುಖ್ಯ ಶಿಕ್ಷಕಿ ರತ್ನಾ, ಗ್ರಾ.ಪಂ.ಸದಸ್ಯರಾದ ಕಾರ್ತಿಕ್, ಆನಂದ್, ಪುಟ್ಟಸ್ವಾಮಿ ಇತರರಿದ್ದರು.