| ಬಾಬುರಾವ ಯಡ್ರಾಮಿ ಕಲಬುರಗಿ
ಅನ್ಯರ ಹೆಸರಿನಲ್ಲಿ ನಕಲಿ ಫೇಸ್ಬುಕ್ ಖಾತೆ ತೆರೆಯುವ ಹಾವಳಿ ಜತೆಗೆ ಈಗ ಪ್ರತಿಷ್ಠಿತರು, ಹಿರಿಯ ಮತ್ತು ಕಿರಿಯ ಪೊಲೀಸ್ ಅಧಿಕಾರಿಗಳು, ಪ್ರಾಧ್ಯಾಪಕರು, ಗಣ್ಯರ ಹೆಸರಿನಲ್ಲಿ ನಕಲಿ ಖಾತೆ ಮೂಲಕ ಯಾಮಾರಿಸಿ ಹಣ ಪೀಕುವ ಕೆಲಸ ಕಲಬುರಗಿಯಲ್ಲೂ ಶುರುವಾಗಿದೆ. ಇದು ಕ್ರೀಮ್ ಆಫ್ ದಿ ಸೊಸೈಟಿ ಎಂದು ಕರೆಸಿಕೊಳ್ಳುವವರಿಗೆ ತಲೆನೋವಾಗಿ ಪರಿಣಿಮಿಸಿದೆ. ಅಲ್ಲದೆ ಫೇಸ್ ಬುಕ್ ಸ್ನೇಹಿತರಲ್ಲಿ ಯಾರು ಅಸಲಿ, ಯಾರು ನಕಲಿ ಎಂಬ ಗೊಂದಲ ಮೂಡಿಸಿದೆ.
ಬೆಂಗಳೂರಿನಲ್ಲಿ ಪೊಲೀಸ್ ಅಧಿಕಾರಿಗಳ ಹೆಸರಿನಲ್ಲಿ ಫೇಸ್ಬುಕ್ ಖಾತೆ ತೆರೆದು ಸ್ನೇಹಿತರಿಗೆ ಇಲ್ಲದ ನೆಪ ಹೇಳಿ ಹಣ ಪಡೆಯುತ್ತಿದ್ದ ಜಾಲವನ್ನು ರಾಜಧಾನಿ ಪೊಲೀಸರು ಭೇದಿಸಿ ಹಲವರನ್ನು ಬಂಧಿಸಿದ್ದರು. ಬಳಿಕ ಕೆಲದಿನ ತಣ್ಣಗಾದಂತೆ ಕಂಡರೂ ಸಂಪೂರ್ಣ ನಿಂತಿಲ್ಲ.
ಕಲಬುರಗಿ ಇತರ ಕಡೆಯ ವಂಚಕರು ತೊಗರಿ ಕಣಜದ ಪ್ರತಿಷ್ಠಿತರ ಹೆಸರಿನಲ್ಲಿ ಫೇಕ್ಬುಕ್ ತೆರೆದು ಹಣ ಪೀಕುವ ದಂಧೆಗೆ ಕೈಹಾಕಿದ್ದಾರೆ. ಆದರೆ ಇವರೆಲ್ಲ ಯಾರು? ಎಲ್ಲಿಯವರು ಎಂಬ ಮಾಹಿತಿಯನ್ನು ಸೈಬರ್ ಕ್ರೖೆಂ ಪೊಲೀಸರು ಜಾಲಾಡಿದ ಬಳಿಕ ರಾಜಸ್ಥಾನ, ಹರಿಯಾಣ ಕಡೆಯವರು ಎಂಬ ಮಾಹಿತಿ ಸಿಕ್ಕಿದೆ.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ವೀರಭದ್ರ ಸಿಂಪಿ ಹೆಸರಲ್ಲಿ ಖಾತೆ ತೆರೆದು ಮೆಸೆಂಜರ್ ಮೂಲಕ ಸ್ನೇಹಿತರಿಗೆ ಹಣದ ಕೋರಿಕೆ ಕಳುಹಿಸಿದ್ದು ಬೆಳಕಿಗೆ ಬರುತ್ತಲೇ, ಜಾಡು ಅರಸಿ ಹೊರಟ ವಿಜಯವಾಣಿಗೆ ಇದು ಕೇವಲ ಸಣ್ಣ ಪುಟ್ಟವರಿಗೆ ಸೀಮಿತವಾಗಿಲ್ಲ. ಗುಲ್ಬರ್ಗ ವಿಶ್ವವಿದ್ಯಾಲಯ ಪ್ರಾಧ್ಯಾಪಕರು, ಹಿರಿಯ ಮತ್ತು ಕಿರಿಯ ಪೊಲೀಸ್ ಅಧಿಕಾರಿಗಳು, ಇತರ ಸರ್ಕಾರಿ ಅಧಿಕಾರಿಗಳ ಹೆಸರಿನಲ್ಲೂ ಇಂತಹ ನಕಲಿ ಖಾತೆಗಳು ಸಕ್ರಿಯವಾಗಿರುವುದು ಬೆಳಕಿಗೆ ಬಂದಿದೆ.
ಆಂತರಿಕ ಭದ್ರತಾ ವಿಭಾಗದ ಎಸ್ಪಿ ಅರುಣ ರಂಗರಾಜನ್, ಡಿಸಿಪಿ ಕಿಶೋರಬಾಬು, ಇನ್ಸ್ಪೆಕ್ಟರ್ಗಳಾದ ಸೋಮಲಿಂಗ ಕಿರದಳ್ಳಿ, ಶ್ರೀಮಂತ ಇಲ್ಲಾಳ, ಎಸ್.ಎಸ್. ಹಿರೇಮಠ, ಜಿಲ್ಲಾ ಸರ್ಜನ್ ಡಾ.ಅಂಬಾರಾಯ ರುದ್ರವಾಡಿ, ಗುಲ್ಬರ್ಗ ವಿಶ್ವವಿದ್ಯಾಲಯದ ಐವರು ಪ್ರಾಧ್ಯಾಪಕರು ಹೀಗೆ ಹಲವರ ಹೆಸರಿನಲ್ಲಿ ಫೇಸ್ಬುಕ್ ನಕಲಿ ಖಾತೆ ತೆರೆದು ಸಾಮಾಜಿಕ ಜಾಲತಾಣದಲ್ಲಿ ಮಂಕುಬೂದಿ ಎರಚುವ ಕೆಲಸ ನಡೆದಿದೆ.
ಕಲಬುರಗಿ ನಗರ ಪೊಲೀಸ್ ಆಯುಕ್ತರ ಕಚೇರಿ ವ್ಯಾಪ್ತಿಯ ಸೆನ್ ಠಾಣೆಯಲ್ಲೇ ಇಂತಹ 40ಕ್ಕೂ ಹೆಚ್ಚಿನ ದೂರು ಸಲ್ಲಿಕೆಯಾಗಿದ್ದು, ಮಾಹಿತಿ ಸಂಗ್ರಹ ಜತೆಗೆ ದುಷ್ಕರ್ವಿುಗಳನ್ನು ಬಂಧಿಸುವ ಕೆಲಸವನ್ನು ಇನ್ಸ್ಪೆಕ್ಟರ್ ಸಂಜೀವಕುಮಾರ ಕುಂಬಾರಗೇರಿ ನೇತೃತ್ವದ ತಂಡ ಮಾಡುತ್ತಿದೆ. ಹಣ ಪೀಕುವುದು ಒಂದು ಗುರಿಯಾದರೆ, ಕೆಲವರು ತಮಗೆ ಆಗದವರ ಹೆಸರಲ್ಲಿ ಖಾತೆ ತೆರೆದು ಅಶ್ಲೀಲ ಸಂದೇಶ ಪೋಸ್ಟ್ ಹರಿಬಿಟ್ಟು ವಿಕೃತಿ ಮೆರೆಯುತ್ತಿದ್ದಾರೆ. ಇದಕ್ಕೂ ಕಡಿವಾಣ ಹಾಕಲು ಪೊಲೀಸರು ಮುಂದಾಗಬೇಕಿದೆ.
ನನ್ನ ಹೆಸರಿನಲ್ಲಿ ನಕಲಿ ಫೇಸ್ಬುಕ್ ಖಾತೆ ತೆರೆದು ಹಲವಾರು ಸ್ನೇಹಿತರಿಗೆ ತುರ್ತು ಹಣ ಬೇಕಿದೆ ಎಂದು ಮನವಿ ಮಾಡಲಾಗಿದೆ. ಕೆಲವರು ಸಣ್ಣ ಮೊತ್ತ ಹಾಕಿದ್ದಾರೆ. ಇನ್ನು ಕೆಲವರು ಸಂಶಯಗೊಂಡು ನನ್ನ ಗಮನಕ್ಕೆ ತಂದಾಗ ಅದು ನಾನಲ್ಲ, ನಕಲಿ ಖಾತೆ ಎಂದು ಸೈಬರ್ ಕ್ರೖೆಂ ಪೊಲೀಸರಿಗೆ ದೂರು ನೀಡಿದ್ದೇನೆ. ನನ್ನ ಫೇಸ್ಬುಕ್ ಖಾತೆಯನ್ನೇ ಡಿಲಿಟ್ ಮಾಡಿದ್ದೇನೆ. | ಡಾ.ಅಂಬಾರಾಯ ರುದ್ರವಾಡಿ ಜಿಲ್ಲಾ ಶಸ್ತ್ರಚಿಕಿತ್ಸಕ, ಕಲಬುರಗಿ ದುರುಳರು ತನ್ನ ಹೆಸರು, ಪೋಟೋ ಹಾಕಿ ಸುಳ್ಳು ಫೇಸ್ಬುಕ್ ಅಕೌಂಟ್ ತೆರೆದು ತುರ್ತು ಚಿಕಿತ್ಸೆಗೆ ಹಣ ಬೇಕಿದೆ ಎಂಬ ರಿಕ್ವೆಸ್ಟ್ ಕಳಿಸಿದ್ದರು. ಆತ ನೀಡಿದ ಸಂಖ್ಯೆಗೆ ಕರೆ ಮಾಡಿದಾಗ ಹಿಂದಿಯಲ್ಲಿ ಮಾತನಾಡಿದ್ದರಿಂದ ಸಂಶಯಗೊಂಡು ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದೇನೆ. ಹೆಸರು ದುರ್ಬಳಕೆ ಮಾಡಿಕೊಳ್ಳುವ ದುಷ್ಟ ವ್ಯಕ್ತಿಗಳಿಗೂ ತಕ್ಕ ಶಿಕ್ಷೆಯಾಗಬೇಕು. | ವೀರಭದ್ರ ಸಿಂಪಿ ಕಸಾಪ ಜಿಲ್ಲಾಧ್ಯಕ್ಷ ಪ್ರತಿಷ್ಠಿತರ ಮತ್ತು ಅಧಿಕಾರಿಗಳ ಹೆಸರಿನಲ್ಲಿ ನಕಲಿ ಫೇಸ್ಬುಕ್ ಅಕೌಂಟ್ ತೆರೆದು ಮೆಸೆಂಜರ್ ಮೂಲಕ ಆಸ್ಪತ್ರೆ ಇತರ ತುರ್ತು ನೆಪ ಹೇಳಿ ಹಣದ ಬೇಡಿಕೆ ಇಡುತ್ತಿರುವ ಬಗ್ಗೆ ದೂರುಗಳು ಬಂದಿವೆ. ರಾಜಸ್ಥಾನ, ಹರಿಯಾಣ ಕಡೆಯವರು ಈ ಕೃತ್ಯ ನಡೆಸಿದ್ದಾರೆ. ಸೈಬರ್ ಮತ್ತು ಸೆನ್ ವಿಭಾಗದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಡಿಸಿಪಿ ಹೆಸರಿನಲ್ಲಿ ನಕಲಿ ಖಾತೆ ತೆರೆದಿದ್ದವನನ್ನು ತೆಲಂಗಾಣ ಪೊಲೀಸರು ಬಂಧಿಸಿದ್ದಾರೆ. ಇಂಥದರ ಬಗ್ಗೆ ಜನರು ಸಹ ಎಚ್ಚರಿಕೆಯಿಂದ ಇರಬೇಕು. | ಎನ್.ಸತೀಶಕುಮಾರ್ ನಗರ ಪೊಲೀಸ್ ಆಯುಕ್ತ