ರಾಮನಗರ: ಫೆ.27ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುವ ರಾಜ್ಯಮಟ್ಟದ ಸರ್ಕಾರಿ ನೌಕರರ ಮಹಾ ಸಮ್ಮೇಳನ ಮತ್ತು ಆಢಳಿತ ಕಾರ್ಯಾಗಾರದಲ್ಲಿ ಪಾಲ್ಗೊಳ್ಳುವ ಸರ್ಕಾರಿ ನೌಕರರಿಗೆ ವಿಶೇಷ ಸಾಂದರ್ಭಿಕ ರಜೆಯನ್ನು ಮಂಜೂರು ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ದೂರದ ಜಿಲ್ಲೆಗಳಿಂದ ಪ್ರಯಾಣ ಮಾಡುವವರಿಗೆ ಫೆ.27 ಮತ್ತು 28 ಎರಡು ದಿನಗಳ ಕಾಲ ಹಾಗು ಬೆಂಗಳೂರು ಹಾಗೂ ಬೆಂಗಳೂರಿಗೆ ಹತ್ತಿರದಲ್ಲಿಯೇ ಇರುವ ಜಿಲ್ಲೆಗಳ ನೌಕರರಿಗೆ ಒಂದು ದಿನದ ಓಓಡಿ ಸೌಲಭ್ಯವನ್ನು ನೀಡಲಾಗಿದೆ. ಈ ಸಮ್ಮೇಳನದಲ್ಲಿ ರಾಜ್ಯದ ಸುಮಾರು 3 ಲಕ್ಷಕ್ಕೂ ಹೆಚ್ಚು ಮಂದಿ ಸರ್ಕಾರಿ ನೌಕರರು ಪಾಲ್ಗೊಳ್ಳಲಿದ್ದಾರೆ. ಇದೇ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಅಭಿನಂದಿಸುವ ಕಾರ್ಯಕ್ರಮ ಸಹ ಹಮ್ಮಿಕೊಳ್ಳಲಾಗಿದೆ.
ಇದೇ ವೇಳೆ 7ನೇ ವೇತನ ಆಯೋಗ ಶಿಫಾರಸ್ಸುಗಳ ಅನುಷ್ಠಾನ, ಹಳೇ ಪಿಂಚಣಿ ವ್ಯವಸ್ಥೆ ಮರು ಜಾರಿ ಸೇರಿದಂತೆ ನೌಕರರ ವಿವಿಧ ಬೇಡಿಕೆಗಳನ್ನು ಈಡೇರಿಸುವ ಸಂಬಂಧ ಅಧಿಕೃತ ಘೋಷಣೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡಲಿದ್ದಾರೆ ಎನ್ನಲಾಗಿದೆ.
ಜಿಲ್ಲೆಯ ಸರ್ಕಾರಿ ನೌಕರರು ಒಂದು ದಿನದ ಓಓಡಿ ಸೌಲಭ್ಯವನ್ನು ಬಳಕೆ ಮಾಡಿಕೊಂಡು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು. ಈ ಮೂಲಕ ನೌಕರರ ನ್ಯಾಯಯುತ ಬೇಡಿಕೆಗಳಿಗೆ ಜಿಲ್ಲೆಯ ನೌಕರರು ಧನಿಯಾಗಬೇಕು.
ಕೆ.ಸತೀಶ್ ಜಿಲ್ಲಾಧ್ಯಕ್ಷ ಸರ್ಕಾರಿ ನೌಕರರ ಸಂಘ, ರಾಮನಗರ ಜಿಲ್ಲೆ.