ನಂಜನಗೂಡು: ಶಿಕ್ಷಣ ಮತ್ತು ಶಿಕ್ಷಕರಿಂದ ಮಾತ್ರ ದೇಶ ಕಟ್ಟಲು ಸಾಧ್ಯ ಎಂದು ಮಹಾರಾಜ ತಾಂತ್ರಿಕ ಕಾಲೇಜಿನ ಪ್ರಾಂಶುಪಾಲ ವೈ.ಟಿ.ಕೃಷ್ಣೇಗೌಡ ಅಭಿಪ್ರಾಯಪಟ್ಟರು.
ತಾಲೂಕಿನ ತಾಂಡವಪುರ ಗ್ರಾಮದ ಬಳಿ ಇರುವ ಮಹಾರಾಜ ತಾಂತ್ರಿಕ ವಿದ್ಯಾಲಯದ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ಗುರುವಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನಮ್ಮ ಕಾಲೇಜಿನಲ್ಲಿ ಶಿಕ್ಷಕರನ್ನ ಹೊರತುಪಡಿಸಿ ಯಾವುದೇ ರಾಜಕೀಯ ನಾಯಕರನ್ನು ಸನ್ಮಾನ ಮಾಡುವ ಕಾರ್ಯಕ್ರಮವನ್ನು ನಾವು ಇದುವರೆಗೂ ಹಮ್ಮಿಕೊಂಡಿಲ್ಲ. ನಾನು ಕೂಡ ಪ್ರಾರಂಭದಲ್ಲಿ ಶಿಕ್ಷಕನಾಗಿಯೇ ಕೆಲಸವನ್ನು ಪ್ರಾರಂಭಿಸಿದೆ. ಮಕ್ಕಳ ಭವಿಷ್ಯವನ್ನು ರೂಪಿಸುವರು ಮೊದಲಿಗೆ ಶಿಕ್ಷಕರು. ಮಕ್ಕಳಿಗೆ ಒಳ್ಳೆಯ ಪಾಠವನ್ನು ಮಾಡಿದಾಗ ಮಾತ್ರ ಅವರ ಭವಿಷ್ಯ ರೂಪಿಸಲು ಸಾಧ್ಯವಾಗುತ್ತದೆ. ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಮತ್ತು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಹಣ ಇಟ್ಟುಕೊಂಡು ಶಿಕ್ಷಣ ಪಡೆಯಲಿಲ್ಲ. ಅವರಲ್ಲಿದ್ದ ಛಲ ಸಾಧನೆಯಿಂದ ಪ್ರಖ್ಯಾತಿಯಾಗಿದ್ದಾರೆ. ಒಮ್ಮೆ ಜಾತಿಯನ್ನು ಹೊರತುಪಡಿಸಿ ಇವರನ್ನು ನೋಡಬೇಕು. ಇವರ ಆದರ್ಶ ರೂಡಿಸಿಕೊಂಡಾಗ ಮಾತ್ರ ಯಶಸ್ಸು ದೊರೆಯುತ್ತದೆ ಎಂದರು.
ನಾವು ಯಾವಾಗಲೂ ಹಣದ ಹಿಂದೆ ಹೋಗಬಾರದು. ಯಶಸ್ಸಿನ ಹಿಂದೆ ಹೋದರೆ ಹಣ ತಾನಾಗಿಯೇ ಬರುತ್ತದೆ. ಕಾಲೇಜು ಪ್ರಾರಂಭಗೊಂಡ ಹತ್ತು ವರ್ಷಗಳಲ್ಲಿ ಕರ್ನಾಟಕದ ಉತ್ತಮ ಶಿಕ್ಷಣ ನೀಡುತ್ತಿರುವ ಮೊದಲನೇ ಸ್ಥಾನದಲ್ಲಿ ಮಹಾರಾಜ ತಾಂತ್ರಿಕ ವಿದ್ಯಾಲಯ ಎನಿಸಿಕೊಂಡಿದೆ. ಇದಕ್ಕೆ ಮುಖ್ಯ ಕಾರಣ ಉತ್ತಮ ಶಿಕ್ಷಣ ನೀಡುವ ಪ್ರಾಧ್ಯಾಪಕರು. ಸಾಮಾನ್ಯವಾಗಿ ಹಳ್ಳಿಯಿಂದ ಬರುವ ವಿದ್ಯಾರ್ಥಿಗಳು ಬುದ್ಧಿವಂತರಾಗಿರುತ್ತಾರೆ. ಅಂತಹ ವಿದ್ಯಾರ್ಥಿಗಳು ಹಣದ ಸಮಸ್ಯೆಯಿಂದ ಗುಣಮಟ್ಟದ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ ಎಂದರು.
ಗುರು ವಂದನಾ ಕಾರ್ಯಕ್ರಮದಲ್ಲಿ ಉತ್ತರ ವಿವಿಧ ಕಾಲೇಜುಗಳ ಪ್ರಾಧ್ಯಾಪಕರಾದ ಮಹದೇವಸ್ವಾಮಿ, ಸುರೇಶ್, ಚಂದನಾ, ಶಿವಪ್ರಸಾದ್, ಸ್ನೇಹಾ, ವರ್ಷಾ, ರಾಜೇಶ್, ಶಿಲ್ಪಾ, ಮಹೇಂದ್ರ ಸೇರಿದಂತೆ ಸುಮಾರು 14 ಜನರನ್ನು ಸನ್ಮಾನಿಸಲಾಯಿತು. ಡಾ.ಎಚ್.ಕೆ.ಚೇತನ್, ಮಹಮ್ಮದ್ ಸಲಾಂ, ಡಾ.ಶ್ರೀನಿವಾಸ್, ಮಹಾರಾಜ ಕಾಲೇಜಿನ ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು.