ಕೊತ್ತಕೋಟೆ ಗ್ರಾಮದಲ್ಲಿ ಯೋಗಿ ನಾರೇಯಣ ಸೇವಾ ಟ್ರಸ್ಟ್ ನಿರ್ಮಾಣ ಮಾಡುತ್ತಿರುವ ಕೈವಾರ ತಾತಯ್ಯನವರ ದೇವಾಲಯ ಹಾಗೂ ಸಮುದಾಯ ಭವನ ಕಾಮಗಾರಿಗೆ ಧರ್ಮಾಧಿಕಾರಿ ಡಾ.ಎಂ.ಆರ್. ಜಯರಾಮ್, ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಭೂಮಿಪೂಜೆ ನೇರವೇರಿಸಿದರು. 
ಜಿಲ್ಲೆ

ಬದುಕಿದ್ದಾಗ ಮಾಡಿದ ಒಳ್ಳೆಯ ಕೆಲಸಗಳಷ್ಟೇ ಶಾಶ್ವತ

ಎನ್.ವೆಂಕಟೇಶ್

ಧರ್ಮಾಧಿಕಾರಿ ಡಾ.ಎಂ.ಆರ್.ಜಯರಾಮ್ ಅಭಿಮತ

ಬಾಗೇಪಲ್ಲಿ: ದೇವಾಲಯಗಳ ನಿರ್ಮಾಣಕ್ಕೂ ಮುನ್ನ ದ್ವೇಷ, ಅಸೂಯೆ ಬಿಟ್ಟು, ಸಮಸ್ತ ಮನುಕುಲಕ್ಕೆ ಶಾಂತಿ ಬಯಸುವ ಸದ್ಗುರುಗಳ ಧರ್ಮ ಮಾರ್ಗಕ್ಕೆ ಗೌರವ ಸಲ್ಲಿಸುವ, ಭಕ್ತಿ ಭಾವವನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕೈವಾರ ಕ್ಷೇತ್ರದ ಧರ್ಮಾಧಿಕಾರಿ ಡಾ. ಎಂ.ಆರ್. ಜಯರಾಮ್ ತಿಳಿಸಿದರು.

ತಾಲೂಕಿನ ಪರಗೋಡು ಗ್ರಾಮ ಪಂಚಾಯಿತಿಯ ಕೊತ್ತಕೋಟೆ ಗ್ರಾಮದಲ್ಲಿ ಯೋಗಿ ನಾರೇಯಣ ಸೇವಾ ಟ್ರಸ್ಟ್ ನಿರ್ಮಾಣ ಮಾಡುತ್ತಿರುವ ಕೈವಾರ ತಾತಯ್ಯನವರ ದೇವಾಲಯ ಹಾಗೂ ಸಮುದಾಯ ಭವನ ಕಾಮಗಾರಿಗೆ ಬುಧವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ಪರಮಾತ್ಮ ಸ್ವರೂಪಿ ಯೋಗಿ ನಾರೇಯಣ ಯತೀಂದ್ರರು ಮಾನವ ಜನ್ಮದ ಅರ್ಥ ಹಾಗೂ ಸಾರ್ಥಕತೆ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡಿದ್ದಾರೆ. ಅದರ ಭಾಗವಾಗಿ ಧರ್ಮ ಮಾರ್ಗ, ಪರೋಪಕಾರ, ಮನುಕುಲದ ಉದ್ಧಾರ, ಭಕ್ತಿಗಾಗಿ ಅವರು ತೋರಿರುವ ಮಾರ್ಗದಲ್ಲಿ ನಾವೆಲ್ಲರೂ ಸಾಗಿದರೆ ಮನುಕುಲಕ್ಕೆ ಒಳ್ಳೆಯದಾಗಲಿದೆ. ಗ್ರಾಮದಲ್ಲಿರುವ ಉತ್ತಮರ ಆಚಾರಗಳನ್ನು ಗ್ರಾಮಸ್ಥರು ಅನುಸರಿಸಿದರೆ ಶಾಂತಿ ನೆಲೆಸಿ ಎಲ್ಲರಿಗೂ ಒಳ್ಳೆಯದಾಗುತ್ತದೆ ಎಂದರು.

ಸಂಪಾದನೆ ಮಾಡಿದ ಎಲ್ಲವೂ ನನ್ನದೇ ಎಂದು ಬೀಗಿ ಮಾಯಾ ಪ್ರಪಂಚದಲ್ಲಿ ಜೀವನ ನಡೆಸುತ್ತಿರುವ ಮನುಷ್ಯ ಮಣ್ಣಿಗೆ ಸೇರುವಾಗ ಸಂಪಾದಿಸಿರುವ ಹಣ, ಆಸ್ತಿ, ಕುಟುಂಬಸ್ಥರು ಸೇರಿ ಯಾವುದನ್ನೂ ಜತೆಯಲ್ಲಿ ಒಯ್ಯಲು ಸಾಧ್ಯವಿಲ್ಲ. ನಾವು ಮಾಡುವ ಒಳ್ಳೆಯ ಕೆಲಸಗಳು ಮಾತ್ರ ಶಾಶ್ವತವಾಗಿ ನಿಲ್ಲುತ್ತದೆ ಎಂಬುದನ್ನು ಅರಿತು ಧರ್ಮದ ಹಾದಿಯಲ್ಲಿ ನಡೆಯಬೇಕು ಎಂದು ಎಂ.ಆರ್. ಜಯರಾಂ ಹೇಳಿದರು.

ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಮಾತನಾಡಿ, ದೇಗುಲ ನಿರ್ಮಾಣಕ್ಕಿಂತ ಆರಾಧನೆ ಮುಖ್ಯ ಎಂಬ ಭಾವನೆಯನ್ನು ಪ್ರತಿಯೊಬ್ಬರೂ ರೂಢಿಸಿಕೊಳ್ಳಿ. ಧರ್ಮಸ್ಥಳ, ತಿರುಪತಿಗೆ ಹೋಗಿ ದೇವರ ದರ್ಶನ ಮಾಡಬೇಕೆಂದು ಬಯಸುವುದಕ್ಕಿಂತ ನಮ್ಮ ಮನೆ ಬಳಿಯೆ ಪ್ರತಿನಿತ್ಯ ಕಾಣಿಸುವ ಸೂರ್ಯನಿಗೆ ನಮಸ್ಕಾರ ಹಾಕಿ ಭಕ್ತಿ ಭಾವ ಮೆರೆದರೆ ಮನುಷ್ಯನ ಜನ್ಮ ಸಾರ್ಥಕವಾಗುತ್ತದೆ ಎಂದರು.

ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ವಿ. ಪ್ರಭಾಕರ ರೆಡ್ಡಿ, ಗ್ರಾಪಂ ಅಧ್ಯಕ್ಷೆ ನಾಗಮಣಿ ಸದಾಶಿವಾರೆಡ್ಡಿ,

ಪುರಸಭೆ ಉಪಾಧ್ಯಕ್ಷೆ ಸುಜಾತಾ ನಾಯ್ಡು, ಕೊತ್ತಕೋಟೆ ಯೋಗಿ ನಾರೇಯಣ ಸೇವಾ ಟ್ರಸ್ಟ್ ಅಧ್ಯಕ್ಷ ನರಸಯ್ಯ, ಪದಾಧಿಕಾರಿಗಳಾದ ಎ. ಮಂಜುನಾಥ, ಎಲ್. ನರಸಿಂಹಮೂರ್ತಿ, ವಿ. ಅಂಜಿನಪ್ಪ, ಕೆ.ವಿ.ಆರ್. ಸುರೇಶ್, ಮುಖಂಡರಾದ ಅರಿಕೆರೆ ಕೃಷ್ಣಾರೆಡ್ಡಿ, ಕೆ. ನರಸಿಂಹಪ್ಪ, ಬಿ.ಆರ್. ನರಸಿಂಹನಾಯ್ಡು, ಎಚ್.ವಿ. ನಾಗರಾಜು, ಎ.ಜಿ.ಸುಧಾಕರ್ ಇದ್ದರು.