ಜಿಲ್ಲೆ

ಹಂಚಿಕೆಯಲ್ಲಿ ಪ್ರಭಾವಿಗಳಿಗೆ ಮಾತ್ರ ಮಣೆ, ಕೃಷಿ ರೈತ ಸಂಪರ್ಕ ಕೇಂದ್ರದಲ್ಲಿ ಬಿತ್ತನೆ ಮೂಟೆಗಳ ಲೂಟಿ

ಚಿಕ್ಕಬಳ್ಳಾಪುರ: ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯಡಿ ಅರ್ಹ ರೈತರಿಗೆ ನೀಡಬೇಕಾಗಿರುವ ಬಿತ್ತನೆ ಬೀಜ ವಿತರಣೆಯಲ್ಲಿ ಬಲಾಢ್ಯ ರಾಜಕೀಯ ಮುಖಂಡರ ಹಸ್ತಕ್ಷೇಪದ ವಿರುದ್ಧ ಅನೇಕರು ದಾಸ್ತಾನು ಗೋದಾಮುಗೆ ನುಗ್ಗಿ ಇಷ್ಟಾನುಸಾರ ನೆಲಗಡಲೆ ಮೂಟೆಗಳನ್ನು ತೆಗೆದುಕೊಂಡು ಹೋಗಿದ್ದಾರೆ.
ಬಾಗೇಪಲ್ಲಿ ತಾಲೂಕಿನ ಪಾತಪಾಳ್ಯ ಹೋಬಳಿಯ ರೈತ ಸಂಪರ್ಕ ಕೇಂದ್ರದಲ್ಲಿ ಬಿತ್ತನೆ ಬೀಜದ ಮೂಟೆಗಳ ಲೂಟಿಯಾಗಿದೆ.  ನಡೆದಿದೆ.
ಇಲ್ಲಿನ ಕೃಷಿ ಸಹಾಯಕ ನಿರ್ದೇಶಕರ ಕಚೇರಿಯ ಕೇಂದ್ರ ಕ್ಕೆ ಪೂರೈಕೆಯಾಗಿರುವ ೧೨೫೦ ಎಕರೆಗಾಗುವಷ್ಟು ಉಚಿತ ಬಿತ್ತನೆ ಬೀಜ ವಿತರಣೆಯಲ್ಲಿ ಅವ್ಯವಹಾರ ನಡೆದಿದೆ ಎಂದು ರೈತ ಸಂಘದ ಆರೋಪಿಸಿದೆ. ಇದಕ್ಕೆ ಸಂಬಂಧಿಸಿದಂತೆ ರೈತರು ಹಾಗೂ ಅಧಿಕಾರಿಗಳ ನಡುವೆ ವಾಗ್ವಾದ ಸಹ ನಡೆದಿದೆ. ರೊಚ್ಚಿಗೆದ್ದ ಕೆಲ ರೈತರು ಬಿತ್ತನೆ ಬೀಜದ ದಾಸ್ತಾನು ಮಳಿಗೆಗೆ ನುಗ್ಗಿ ಇಷ್ಟ ಬಂದಂತೆ ನೆಲಗಡಲೆ ಚೀಲಗಳನ್ನು ತೆಗೆದುಕೊಂಡು ಹೋಗಿದ್ದಾರೆ.
ಪಾತಪಾಳ್ಯ ರೈತ ಸಂಪರ್ಕ ವ್ಯಾಪ್ತಿಯ ರೈತರಿಗೆ ಬಿತ್ತನೆ ಬೀಜ ವಿತರಿಸುತ್ತಿದ್ದ ಸಮಯದಲ್ಲಿ ವಿತರಣಾ ಕೇಂದ್ರದ ಬಳಿ ಆಗಮಿಸಿದ ಕೆಲ ರಾಜಕೀಯ ಮುಖಂಡರು,  ನಮ್ಮ ಪಕ್ಷದವರು, ನಮ್ಮ ಕಾರ್ಯಕರ್ತರು, ನಮಗೆ ಮೂಟೆ ಕೊಡಿ ಎಂದು ರೈತ ಸಂಪರ್ಕ ಕೇಂದ್ರದ ಸಿಬ್ಬಂದಿಗೆ ಧಮಕಿ ಹಾಕಿ ಬಲವಂತವಾಗಿ ಪಡೆದುಕೊಂಡಿದ್ದಾರೆ. ಇದು ಲೂಟಿಗೆ ಪ್ರಮುಖ ಕಾರಣ ಎನ್ನಲಾಗುತ್ತಿದೆ. ಇದೇ ವೇಳೆ ಪರಿಸ್ಥಿತಿ ನಿಯಂತ್ರಿಸಲು ಸಾಧ್ಯವಾಗದ ಅಧಿಕಾರಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.‌
ಕೇಂದ್ರ ಸರ್ಕಾರ ಆರ್ಹ ರೈತರಿಗೆ ನೀಡಿರುವ ಬಿತ್ತನೆ ಬೀಜಗಳನ್ನು ನಾವು ಶಾಸಕರ ಕಡೆಯವರು, ಸಂಸದರ ಕಡೆಯವರು ಎಂದು ಹೇಳಿಕೊಂಡು ರಾಜಕೀಯ ಬಲಾಢ್ಯರು ತೆಗೆದುಕೊಂಡು ಹೋಗಿದ್ದಾರೆ. ಕೃಷಿ ಇಲಾಖೆ ಸಂಬಂದ ಇಲ್ಲದ ವ್ಯಕ್ತಿಗಳನ್ನು ಅಧಿಕಾರಿಗಳ ಸ್ಥಾನದಲ್ಲಿ ಕೂರಿಸಿ ರೈತರಿಗೆ ಬಿತ್ತನೆ ಬೀಜ ಹಂಚಿಕೆ ಮಾಡಿದ ಪರಿಣಾಮ ವಿತರಣಾ ಕೇಂದ್ರದಲ್ಲಿ ಗಲಾಟೆ ನಡೆದಿದೆ ಎಂದು ರೈತ ಸಂಘದ ಅಧ್ಯಕ್ಷ ಎಂ.ಎಸ್.ನರಸಿಂಹರೆಡ್ಡಿ ಬೇಸರ ವ್ಯಕ್ತಪಡಿಸಿದ್ದಾರೆ.