ಮೈಸೂರು: ದಸರಾ ಉದ್ಘಾಟಕರಾಗಿ ಆಯ್ಕೆಯಾಗಿರುವ ಬೂಕರ್ ಪ್ರಶಸ್ತಿ ಪುರಸ್ಕೃತ ಬಾನು ಮುಷ್ತಾಕ್ ಅವರನ್ನು ಕೆಲವು ಧರ್ಮಾಂಧರು ಮಾತ್ರ ವಿರೋಧ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.
ನಗರದಲ್ಲಿ ಭಾನುವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ದಸರಾ ಉತ್ಸವ ನಾಡಹಬ್ಬವಾಗಿದ್ದು, ನಾಡಹಬ್ಬ ಎಂದರೆ ನಾಡಿನ ಹಬ್ಬವಾಗಿದೆ. ಹಾಗಾಗಿ ಇಂಥ ಧರ್ಮದವರೇ ದಸರಾ ಉದ್ಘಾಟಿಸಬೇಕು ಎಂದೇನು ಇಲ್ಲ. ದಸರಾ ಧರ್ಮಾತೀತ ಹಾಗೂ ಜಾತ್ಯತೀತ ಹಬ್ಬವಾಗಿದೆ. ವಿರೋಧ ಮಾಡುವವರಿಗೆ ಇತಿಹಾಸ ಗೊತ್ತಿಲ್ಲ, ಅವರು ಇತಿಹಾಸ ತಿಳಿದುಕೊಳ್ಳುವುದು ಒಳ್ಳೆಯದು. ಬಿಜೆಪಿಯವರು ರಾಜಕೀಯವಾಗಿ ಮಾತನಾಡುತ್ತಿದ್ದಾರೆ, ಅವರು ಜಾತ್ಯತೀತವಾಗಿ ಮಾತನಾಡುವುದಿಲ್ಲ ಎಂದು ಅಸಮಾಧಾನ ಹೊರ ಹಾಕಿದರು.
ಈ ಹಿಂದೆ ಕನ್ನಡದ ಕುರಿತು ಬಾನು ಮುಷ್ತಾಕ್ ನೀಡಿರುವ ಹೇಳಿಕೆಯನ್ನು ದಸರೆಗೆ ಹೋಲಿಕೆ ಮಾಡುವುದು ಸರಿಯಲ್ಲ. ಕನ್ನಡದ ಬಗ್ಗೆ ಅವರಿಗೆ ಗೌರವ ಇಲ್ಲದೆ ಹೋಗಿದ್ದರೆ ಅವರು ಕನ್ನಡದಲ್ಲಿ ಕೃತಿ ರಚಿಸುತ್ತಿರಲಿಲ್ಲ. ಕನ್ನಡದ ಬಗ್ಗೆ ಪ್ರೀತಿ ಇರುವ ಕಾರಣಕ್ಕೆ ಅವರು ಕನ್ನಡ ಭಾಷೆಯಲ್ಲಿ ಎದೆಯ ಹಣತೆ ಕೃತಿ ರಚಿಸಿದ್ದು, ಆ ಕೃತಿಗೆ ಬೂಕರ್ ಪ್ರಶಸ್ತಿ ಬಂದಿದೆ. ಬಿಜೆಪಿಯವರು ಕುಂಟು ನೆಪ ಇಟ್ಟುಕೊಂಡು ವಿರೋಧ ಮಾಡುತ್ತಿದ್ದಾರೆ ಎಂದರು.
ಮೈಸೂರು ಮಹಾರಾಜರ ಆಡಳಿತ ಇಲ್ಲದಿದ್ದ ಸಂದರ್ಭದಲ್ಲಿ ಹೈದರಾಲಿ, ಟಿಪ್ಪು ಸುಲ್ತಾನ್ ಸಹ ದಸರಾ ಆಚರಿಸಿದ್ದರು. ದಿವಾನರಾ ಗಿದ್ದ ಮಿರ್ಜಾ ಇಸ್ಮಾಯಿಲ್ ದಸರಾ ಆಚರಿಸಿದ್ದಾರೆ. ರಾಜ್ಯದಲ್ಲಿ ಬೂಕರ್ ಪ್ರಶಸ್ತಿ ಪಡೆದ ಸಾಹಿತಿಗಳು ಬಹಳ ಕಡಿಮೆ. ಹಾಗಾಗಿ ಬಾನು ಮುಷ್ತಾಕ್ ಅವರನ್ನು ದಸರಾ ಉದ್ಘಾಟಕರಾಗಿ ಆಯ್ಕೆ ಮಾಡಿದ್ದೇನೆ ಎಂದರು.
ಬಾನು ಮುಷ್ತಾಕ್ ದನದ ಮಾಂಸ ತಿಂದು ಬರುತ್ತಾರೆ ಎಂಬ ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಢೋಂಗಿಗಳು ಮಾತ್ರ ಈ ರೀತಿ ಮಾತನಾಡುತ್ತಾರೆ. ಅವರು ಮಾತನಾಡುವುದಕ್ಕೆಲ್ಲ ನಾವು ತಲೆಕೆಡಿಸಿಕೊಳ್ಳುವುದಿಲ್ಲ ಎಂದರು.
ಎದೆಯ ಹಣತೆ ಭಾಷಾಂತರ ಮಾಡಿದ ದೀಪಾ ಬಸ್ತಿ ಅವರಿಗೆ ದಸರಾ ಉದ್ಘಾಟನೆಗೆ ಅವಕಾಶ ನೀಡಬೇಕು ಎಂಬ ಒತ್ತಾಯದ ಕುರಿತು ಪ್ರತಿಕ್ರಿಯಿಸಿದ ಅವರು, ಇಬ್ಬರು ದಸರಾ ಉದ್ಘಾಟನೆ ಮಾಡಲು ಸಾಧ್ಯವಿಲ್ಲ. ಹಾಗಾಗಿ ಬಾನು ಮುಷ್ತಾಕ್ ಅವರಿಗೆ ಅವಕಾಶ ನೀಡಲಾಗಿದೆ. ಈಗಾಗಲೇ ಇಬ್ಬರಿಗೂ ಸರ್ಕಾರ ಗೌರವ ಸಲ್ಲಿಸಿದ್ದು, ಇಬ್ಬರಿಗೂ ತಲಾ 10 ಲಕ್ಷ ರೂ. ನೀಡಲಾಗಿದೆ ಎಂದು ಹೇಳಿದರು.
ಈ ಬಾರಿ ದಸರಾ ಉತ್ಸವದಲ್ಲಿ ಏರ್ ಶೋ ನಡೆಯಲಿದ್ದು, ಏರ್ ಶೋ ನಡೆಸಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ವಿಜಯದಶಮಿ ದಿನದಂದು ಜಂಬೂಸವಾರಿ ಮುಕ್ತಾಯಗೊಂಡ ನಂತರ ಏರ್ ಶೋ ನಡೆಯಲಿದೆ ಎಂದರು.