ಜಿಲ್ಲೆ

‘ಸೊರಗಿದ’ ಬೆಳೆವಿಮೆ ಯೋಜನೆ

ವಿಜಯವಾಣಿ ಸುದ್ದಿಜಾಲ ಹಾಸನ
ಪ್ರಸಕ್ತ ವರ್ಷ ಹಿಂಗಾರು ಹಂಗಾಮಿನಲ್ಲಿ ಜಿಲ್ಲೆಯ ಕೆಲವೇ ಕೆಲವು ರೈತರು ಮಾತ್ರವೇ ಬೆಳೆ ವಿಮೆ ಮಾಡಿಸಿಕೊಂಡಿರುವುದಕ್ಕೆ ಆಶ್ಚರ್ಯವ್ಯಕ್ತಪಡಿಸಿದ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ, ಕೃಷಿ ಇಲಾಖೆ ಜಂಟಿ ನಿರ್ದೇಶಕರನ್ನು ತರಾಟೆಗೆ ತೆಗೆದುಕೊಂಡರು.
ಜಿಲ್ಲಾ ಪಂಚಾಯಿತಿ ಹೊಯ್ಸಳ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ, ಜಿಲ್ಲೆಯಲ್ಲಿ 118 ರೈತರು ಮಾತ್ರ ಬೆಳೆ ವಿಮೆ ತೆಗೆದುಕೊಂಡಿದ್ದಾರೆ ಎನ್ನುವ ಅಂಶವನ್ನು ಸಚಿವರು ಗಮನಿಸಿದರು. ಅಧಿಕಾರಿ ನೀಡಿದ್ದ ಪಟ್ಟಿಯಲ್ಲಿ ಚನ್ನರಾಯಪಟ್ಟಣ, ಸಕಲೇಶಪುರ ಮತ್ತು ಆಲೂರು ತಾಲೂಕುಗಳಲ್ಲಿ ವಿಮೆ ಮಾಡಿಸಿದ ರೈತರ ಸಂಖ್ಯೆ ಶೂನ್ಯವಾಗಿದ್ದನ್ನು ಕಂಡು ಮಾಧುಸ್ವಾಮಿ ಆಕ್ರೋಶಗೊಂಡರು.
ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಾಧುಸ್ವಾಮಿ ಮತ್ತು ಲೀಡ್ ಬ್ಯಾಂಕಿನ ಅಧಿಕಾರಿಗಳಿಂದ ವಿಮಾ ಯೋಜನೆ ಮಾಡಿಸುವ ಗುರಿಯಲ್ಲಿ ಕಳಪೆ ಸಾಧನೆಗೆ ಕಾರಣ ಏನು ಎಂದು ಪ್ರಶ್ನಿಸಿದರು. ಇದಕ್ಕೆ ಸಮರ್ಪಕ ಪ್ರತಿಕ್ರಿಯೆ ನೀಡಲು ಇಬ್ಬರೂ ವಿಫಲರಾದರು. ಲೀಡ್ ಬ್ಯಾಂಕ್ ವ್ಯವಸ್ಥಾಪಕ ಬಸವರಾಜ್ ಅವರು ರಾಗಿ ಬೆಳೆ ವಿಮೆ ಸೌಲಭ್ಯದ ಅಧಿಸೂಚನೆಯೊಳಗೆ ಸೇರಿಲ್ಲ, ಹೀಗಾಗಿ ರಾಗಿ ಬೆಳೆಯುವವರು ವಿಮೆ ಪಡೆದಿಲ್ಲ ಎಂದು ಹಾರಿಕೆ ಉತ್ತರ ನೀಡಿದರು.
ಸಚಿವರು, ವಿಮೆ ಸೌಲಭ್ಯ ಹೊಂದಿರುವ ಬೆಳೆಗಳ ಪಟ್ಟಿಯನ್ನು ಗಮನಿಸಿದಾಗ ರಾಗಿ ಬೆಳೆಗೆ ಸರ್ಕಾರ ವಿಮಾ ಸೌಲಭ್ಯ ಕಲ್ಪಿಸಿರುವುದು ಕಂಡು ಬಂದಿತು. ಬಸವರಾಜ್ ಅವರನ್ನು ಈ ವಿಷಯವಾಗಿ ತರಾಟೆಗೆ ತೆಗೆದುಕೊಂಡ ಮಾಧುಸ್ವಾಮಿ, ನಿಮ್ಮನ್ನು ಲೀಡ್ ಬ್ಯಾಂಕ್ ವ್ಯವಸ್ಥಾಪಕರಾಗಿ ಕೂರಿಸಿರುವುದು ಹೀಗೆಲ್ಲ ಉತ್ತರ ನೀಡಲು ಅಲ್ಲ. ನಿಮ್ಮ ಬಳಿ ಎಲ್ಲ ಮಾಹಿತಿ ಇರಬೇಕು. ನಿಮ್ಮ ಹಿರಿಯ ಅಧಿಕಾರಿಗಳಿಗೆ ಪತ್ರ ಬರೆದು ನಿಮ್ಮನ್ನು ಮನೆಗೆ ಕಳುಹಿಸುವ ವ್ಯವಸ್ಥೆ ಮಾಡುತ್ತೇನೆ ಎಂದು ಎಚ್ಚರಿಸಿದರು.
ಅರಸೀಕೆರೆ ಶಾಸಕ ಕೆ.ಎಂ.ಶಿವಲಿಂಗೇಗೌಡ ಮಾತನಾಡಿ, ಈ ಬಾರಿ ಉತ್ತಮ ಮಳೆಯಾಗಿರುವುದರಿಂದ ರೈತರು ವಿಮೆ ಪ್ರೀಮಿಯಂ ಪಾವತಿಸುವುದು ಹೆಚ್ಚುವರಿ ಹೊರೆ ಎಂದು ಭಾವಿಸಿದ್ದಾರೆ. ಅಲ್ಲದೆ ಕಳೆದ ಬಾರಿ ಶಾಸಕರೆಲ್ಲ ಹೆಚ್ಚು ಪ್ರಚಾರ ಮಾಡಿ ವಿಮೆ ಪ್ರೀಮಿಯಂ ಪಾವತಿಸುವಂತೆ ಮಾಡಿದ್ದೆವು. ಆದರೆ ರೈತರ ಬೆಳೆ ನಾಶವಾದರೂ ಅವರಿಗೆ ವಿಮಾ ಪರಿಹಾರ ದೊರಕಲೇ ಇಲ್ಲ. ಹೀಗಾಗಿ ರೈತರು ಹಿಂಗಾರು ಹಂಗಾಮಿನಲ್ಲಿ ವಿಮೆ ಮಾಡಿಸಲು ಹಿಂದೇಟು ಹಾಕಿದ್ದಾರೆ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ತಡವಾಗಿ ವಿಮಾ ಮೊತ್ತ ಬಿಡುಗಡೆಯಾಗಿರುವ ಬಗ್ಗೆ ಮಾಹಿತಿ ಪಡೆದರು. ಜಿಲ್ಲೆಯ ಕೆಲವು ಬೆಳೆಗಳು ಸರ್ಕಾರದ ಅಧಿಸೂಚನೆಯಿಂದ ಹೊರಗುಳಿದಿರುವುದು ಹಿನ್ನಡೆಗೆ ಕಾರಣ ಎಂಬ ಮಧುಸೂದನ್ ಅವರ ಸಮಜಾಯಿಷಿಯನ್ನು ಒಪ್ಪದ ಸಚಿವರು, ನಿಮ್ಮ ಜಿಲ್ಲೆಗೆ ಇಂತಹ ಬೆಳೆಗಳಿಗೆ ವಿಮೆ ಸೌಲಭ್ಯ ಬೇಕು ಎಂದು ನೀವು ಸರ್ಕಾರಕ್ಕೆ ಲಿಖಿತವಾಗಿ ಎಂದಾದರೂ ಬೇಡಿಕೆ ಸಲ್ಲಿಸಿದ್ದೀರಾ? ಹಾಗೆ ಮಾಡಿದ್ದರೆ ಸರ್ಕಾರ ಬೇಕಾದ ಬದಲಾವಣೆ ಮಾಡುತ್ತಿತ್ತು. ನೀವು ರೈತರ ಅನುಕೂಲಕ್ಕಾಗಿ ಬೇಕಾದ ಬೆಳೆಯನ್ನು ವಿಮಾ ಸೌಲಭ್ಯದ ಪಟ್ಟಿಯಲ್ಲಿ ಸೇರಿಸಬಹುದಿತ್ತು ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಯೋಜನೆಗಳನ್ನು ಪರಿಶೀಲಿಸುವಾಗ, ಜನರು ಸರ್ಕಾರಿ ಆಸ್ಪತ್ರೆಗಳಿದ್ದರೂ ಹೆರಿಗೆಗೆ ಖಾಸಗಿ ಆಸ್ಪತ್ರೆಗಳಿಗೆ ಆದ್ಯತೆ ನೀಡಿರುವುದನ್ನು ಗಮನಿಸಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಶಾಸಕರಾದ ಎಚ್.ಕೆ.ಕುಮಾರಸ್ವಾಮಿ ಹಾಗೂ ಕೆ.ಎಂ.ಶಿವಲಿಂಗಗೌಡ ಅವರು ಅನೇಕ ಸರ್ಕಾರಿ ವೈದ್ಯರು ರೋಗಿಗಳನ್ನು ತಾವೇ ಖಾಸಗಿ ಆಸ್ಪತ್ರೆಗಳಿಗೆ ಕರೆದೊಯ್ಯುತ್ತಾರೆ ಎಂದು ಆರೋಪಿಸಿದರು.
ಅರಸೀಕೆರೆ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರ ಹುದ್ದೆ ಖಾಲಿಯಿರುವ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಸಚಿವರು, ಈ ಬಗ್ಗೆ ನೀವು ಸರ್ಕಾರದ ಗಮನ ಸೆಳೆದು ಮನವಿ ಮಾಡಿದ್ದೀರಾ? ಸಮರ್ಪಕವಾಗಿ ಕರ್ತವ್ಯ ನಿರ್ವಹಿಸದ ವೈದ್ಯರಿಗೆ ಮೆಮೊ ನೀಡಿದ್ದೀರಾ? ಎಂದು ಜಿಲ್ಲಾ ಆರೋಗ್ಯಾಧಿಕಾರಿಯನ್ನು ಪ್ರಶ್ನಿಸಿ ಹರಿಹಾಯ್ದರು.
ಶಾಸಕರಾದ ಎಚ್.ಡಿ.ರೇವಣ್ಣ, ಎ.ಟಿ.ರಾಮಸ್ವಾಮಿ, ಸಿ.ಎನ್.ಬಾಲಕೃಷ್ಣ, ಪ್ರೀತಂ ಜೆ.ಗೌಡ, ಕೆ.ಎಸ್.ಲಿಂಗೇಶ್, ವಿಧಾನ ಪರಿಷತ್ ಸದಸ್ಯ ಎಂ.ಎ.ಗೋಪಾಲಸ್ವಾಮಿ, ಜಿಪಂ ಅಧ್ಯಕ್ಷೆ ಶ್ವೇತಾ ದೇವರಾಜ್, ಜಿಲ್ಲಾಧಿಕಾರಿ ಆರ್.ಗಿರೀಶ್, ಜಿಪಂ ಸಿಇಒ ಬಿ.ಎ.ಪರಮೇಶ್, ಎಸ್‌ಪಿ ರಾಮ್‌ನಿವಾಸ್ ಸೆಪಟ್ ಇದ್ದರು. ಜಿಲ್ಲೆಯ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.