ಬೆಂಗಳೂರು: ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಅಖಿಲ ಭಾರತ ಸುಸಂಘಿತ ಪ್ರಾಯೋಜನೆ (ಬೀಜ ಬೆಳೆಗಳು) ವತಿಯಿಂದ ಇದೇ ಪ್ರಥಮ ಬಾರಿಗೆ ಆನ್‌ಲೈನ್ ಮೂಲಕ ಬೀಜ ಮಾರಾಟ ಜಾಲತಾಣವನ್ನು ಅಭಿವೃದ್ಧಿಪಡಿಸಿದೆ. ಈ ಬೀಜ ಜಾಲತಾಣದಲ್ಲಿ ರೈತರು ನೊಂದಣಿ ಮಾಡಿಕೊಂಡು ನೇರವಾಗಿ ಬಿತ್ತನೆ ಬೀಜಗಳನ್ನು ಖರೀದಿಸಬಹುದಾಗಿದೆ.
ನೊಂದಣಿ ಮಾಡುವಾಗ ಪೂರ್ಣ ವಿಳಾಸ, ಸರಿಯಾದ ಪಿನ್ ಕೋಡ್ ಕಡ್ಡಾಯವಾಗಿ ನಮೂದಿಸುವುದು ಹಾಗೂ ಬಿತ್ತನೆ ಬೀಜದ ಮೊತ್ತವನ್ನು ಆನ್‌ಲೈನ್ (ಗೂಗಲ್ ಪೇ, ಪೋನ್ ಪೇ ಇತ್ಯಾದಿ) ಮೂಲಕ ಪಾವತಿಸಬೇಕಿದೆ. ಬಿತ್ತನೆ ಬೀಜವನ್ನು ಅಂಚೆ ಇಲಾಖೆ ಮೂಲಕ ರೈತರ ಮನೆ ಬಾಗಿಲಿಗೆ ಸರಬರಾಜು ಮಾಡಲಾಗುವುದು. ಕೃಷಿ ವಿವಿಯು ಬೆಂಗಳೂರಿನ ವ್ಯಾಪ್ತಿಗೆ ಬರುವ 10 ಜಿಲ್ಲೆಗಳಿಗೆ ಸೂಕ್ತವಾದ ವಿವಿಧ ಬೆಳೆ (ರಾಗಿ, ಭತ್ತ, ತೊಗರಿ, ಅವರೆ, ಸಿರಿಧಾನ್ಯಗಳು) ತಳಿಗಳ ನಿಜಬೀಜ ಹಾಗೂ ಪ್ರಮಾಣಿತ ಬಿತ್ತನೆ ಬೀಜ ಮತ್ತು ಎಣ್ಣೆಕಾಳು ಬೆಳೆಗಳಾದ ಸಂಕರಣ ಸೂರ್ಯಕಾಂತಿ ಬಿತ್ತನೆ ಬೀಜ ಲಭ್ಯವಿರುತ್ತದೆ.
ಆಸಕ್ತ ರೈತರು ಬಿತ್ತನೆ ಬೀಜವನ್ನು ರಾಷ್ಟ್ರೀಯ ಬೀಜ ಪ್ರಾಯೋಜನೆ (ಎನ್‌ಎಸ್‌ಪಿ), ಕೃಷಿ ತಂತ್ರಜ್ಞಾನ ಮಾಹಿತಿ ಕೇಂದ್ರ (ಎಟಿಐಸಿ) ಜಿಕೆವಿಕೆ, ಹಾಗೂ ಕೃಷಿ ವಿಜ್ಞಾನ ಕೇಂದ್ರಗಳಾದ ಚಾಮರಾಜನಗರ, ಕಂದಲಿ, ಹಾಸನ, ಚಿಂತಾಮಣಿ ಮತ್ತು ವಲಯ ಕೃಷಿ ಸಂಶೋಧನಾ ಕೇಂದ್ರ, ವಿ.ಸಿ.ಫಾರಂ, ಮಂಡ್ಯ ಹಾಗೂ ರಾಗಿ ಬ್ರಹ್ಮ ಲಕ್ನಣಯ್ಯನವರ ರೈತ ಸಲಹಾ ಕೇಂದ್ರ ಎಪಿಎಂಸಿ ಯಾರ್ಡ್, ಮಂಡ್ಯ ಕೇಂದ್ರಗಳಿಂದ ಖರೀದಿಸಬಹು ಎಂದು ಕೃಷಿ ವಿವಿ ಅಧಿಕಾರಿಗಳು ತಿಳಿಸಿದ್ದಾರೆ.