ಸುಂಟಿಕೊಪ್ಪ(ಮೈಸೂರು): ಗ್ರಾಹಕರೇ ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಎಚ್ಚರ! ಇಲ್ಲೊಬ್ಬ ಗ್ರಾಹಕರು ಫ್ಯಾನ್ ಬುಕ್ ಮಾಡಿದ್ದರು. ಆದ್ರೆ ಅವರಿಗೆ ಬಂದದ್ದು ಮಾತ್ರ ನಾಲ್ಕು ಥರ್ಮಾಕೋಲ್ ಹಾಗೂ ಎರಡು ಮಣ್ಣಿನ ಇಟ್ಟಿಗೆ!
ಹೀಗೆ ಮೋಸ ಹೋದವರು ಸುಂಟಿಕೊಪ್ಪ ಆಸ್ಪತ್ರೆ ರಸ್ತೆಯ ಟಿ.ಆರ್.ಜಯದೇವ. ಸೆ.25ರಂದು ದೆಹಲಿ ಮೂಲದ ಶಾಪಿಂಗ್ ಸಂಸ್ಥೆಯ ಜಾಲತಾಣದಲ್ಲಿ ಎಕ್ಸಿಟ್ ಫ್ಯಾನ್ಅನ್ನು ಜಯದೇವ ಬುಕ್ ಮಾಡಿದ್ದರು. ಅದರಂತೆ ಅ.3ರಂದು ಕೊರಿಯರ್ ಮೂಲಕ ಪಾರ್ಸೆಲ್ ಬಂದಿತ್ತು. 4,500 ರೂಪಾಯಿ ಪಾವತಿಸಿ ಪಾರ್ಸೆಲ್ ಪಡೆದಿದ್ದರು. ನಂತರ ಅದನ್ನು ಬಿಚ್ಚಿ ನೋಡಿದಾಗ ಪಾರ್ಸೆಲ್ ಒಳಗೆ 4 ಥರ್ಮಾಕೋಲ್ ಹಾಗೂ 2 ಮಣ್ಣಿನ ಇಟ್ಟಿಗೆ ಇತ್ತು.
ಇದನ್ನೂ ಓದಿರಿ ಆರ್ಆರ್ ನಗರ ಬೈ ಎಲೆಕ್ಷನ್: ಕಾಂಗ್ರೆಸ್ ಅಭ್ಯರ್ಥಿ ಯಾರು ಗೊತ್ತಾ? ಇಲ್ಲಿದೆ ಡಿಕೆಶಿ ಫೈನಲ್ ಲಿಸ್ಟ್
ಈ ಕುರಿತು ಆನ್ಲೈನ್ ಶಾಪಿಂಗ್ ಸಂಸ್ಥೆಯವರಿಗೆ ದೂರವಾಣಿ ಕರೆ ಮಾಡಿ ಜಯದೇವ್ ಮಾತನಾಡಿದಾಗ, ಪಾರ್ಸೆಲ್ ವಿತರಿಸುವವರು ಈ ರೀತಿ ವಂಚಿಸಿರುವ ಹಲವು ಪ್ರಕರಣಗಳಿವೆ. ನಮ್ಮ ಕಂಪನಿ ಆ ರೀತಿ ಗ್ರಾಹಕರಿಗೆ ಮೋಸ ಮಾಡುವುದಿಲ್ಲ, ಎಲ್ಲವನ್ನೂ ವಿಚಾರಿಸಿ ನಿಮಗೆ ಫ್ಯಾನ್ ತಲುಪಿಸುವುದಾಗಿ ಭರವಸೆ ನೀಡಿದ್ದಾರೆ. ಈ ಪ್ರಕರಣದಲ್ಲಿ ಆನ್ಲೈನ್ ಶಾಪಿಂಗ್ ಸಂಸ್ಥೆ ಮೋಸ ಮಾಡಿಲ್ಲ, ಯಾರೋ ಪಾರ್ಸೆಲ್ ಬದಲಾಯಿಸಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ಇಂತಹ ವಂಚನೆ ಪ್ರಕರಣಗಳು ನಿತ್ಯ ಸಂಭವಿಸುತ್ತಲೇ ಇವೆ. ಗ್ರಾಹಕರು ಕೊರಿಯರ್ ತಂದವರ ಮುಂದೆಯೇ ತಾವು ಬುಕ್ ಮಾಡಿದ ವಸ್ತು ಇದೆಯೇ ಎಂಬುದನ್ನು ಒಮ್ಮೆ ಖಚಿತ ಮಾಡಿಕೊಳ್ಳುವುದು ಒಳ್ಳೆಯದು.