ರಾಯಚೂರು ಜಿಲ್ಲಾಧಿಕಾರಿ ಕಚೇರಿ ಮುಂದೆ ಶೈಕ್ಷಣಿಕ ಸಮಸ್ಯೆಗಳನ್ನು ತುರ್ತು ಬಗೆಹರಿಸುವಂತೆ ಒತ್ತಾಯಿಸಿ ಎಸ್‌ಎಫ್‌ಐನಿಂದ ಬುಧವಾರ ಪ್ರತಿಭಟನೆ ನಡೆಸಲಾಯಿತು. 
ಜಿಲ್ಲೆ

ಆನ್‌ಲೈನ್ ಶಿಕ್ಷಣ, ಪರೀಕ್ಷೆಗಳನ್ನು ರದ್ದುಗೊಳಿಸಿ; ಎಸ್‌ಎಫ್‌ಐ ಮುಖಂಡರ ಒತ್ತಾಯ

Raichur

ರಾಯಚೂರು: ಕರೊನಾ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಎದುರಿಸುತ್ತಿರುವ ಶೈಕ್ಷಣಿಕ ಸಮಸ್ಯೆಗಳನ್ನು ತುರ್ತಾಗಿ ಬಗೆಹರಿಸಬೇಕು ಹಾಗೂ ವಿವಿಧ ಶೈಕ್ಷಣಿಕ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಎಸ್‌ಎಫ್‌ಐ ಬುಧವಾರ ಪ್ರತಿಭಟನೆ ನಡೆಸಿತು.

ನಂತರ ಜಿಲ್ಲಾಧಿಕಾರಿ ಕಚೇರಿ ಕೇಂದ್ರ ಸ್ಥಾನಿಕ ಅಧಿಕಾರಿ ಪ್ರಶಾಂತಕುಮಾರ್‌ಗೆ ಮನವಿ ಸಲ್ಲಿಸಿತಯ. ಸರ್ಕಾರ ಕರೊನಾ ಸಂಕಷ್ಟದಲ್ಲಿ ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ನಿವಾರಿಸುವ ಬದಲು ಸಮಸ್ಯೆಗಳನ್ನು ಹೆಚ್ಚಳ ಮಾಡುವ ನಿರ್ಧಾರ ಕೈಗೊಳ್ಳುತ್ತಿರುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.

ಆನ್‌ಲೈನ್ ಶಿಕ್ಷಣಕ್ಕೆ ಸಾಕಷ್ಟು ವಿರೋಧ ವ್ಯಕ್ತವಾಗುತ್ತಿದ್ದರೂ ಅವಕಾಶ ನೀಡುತ್ತಿದ್ದು, ಇದರಿಂದ ಖಾಸಗಿ ಶಿಕ್ಷಣ ಸಂಸ್ಥೆಗಳು ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಪಾಲಕರಿಗೆ ಶುಲ್ಕ ತುಂಬಲು ಒತ್ತಾಯಿಸಲು ಅನುಕೂಲ ಮಾಡಿಕೊಟ್ಟಂತಾಗುತ್ತದೆ. ಸೆಮಿಸ್ಟರ್, ಪರೀಕ್ಷಾ ಶುಲ್ಕ ತುಂಬುವಂತೆ ತಿಳಿಸಲಾಗುತ್ತಿದ್ದು, ಕರೊನಾ ವ್ಯಾಪಕವಾಗಿ ಹರಡುತ್ತಿರುವ ಸಂದರ್ಭದಲ್ಲಿ ಪದವಿ, ಡಿಪ್ಲೊಮಾ, ಇಂಜಿನಿಯರಿಂಗ್ ಪರೀಕ್ಷೆಗಳನ್ನು ರದ್ದುಗೊಳಿಸುವ ಬದಲು ನಡೆಸಲು ಸರ್ಕಾರ ಮುಂದಾಗುತ್ತಿದ್ದು, ವಿದ್ಯಾರ್ಥಿಗಳು ಸಂಕಷ್ಟ ಎದುರಿಸುವಂತಾಗಿದೆ. ಆನ್‌ಲೈನ್ ಶಿಕ್ಷಣ, ಪರೀಕ್ಷೆಗಳನ್ನು ರದ್ದುಗೊಳಿಸಬೇಕು ಎಂದು ಒತ್ತಾಯಿಸಿದರು.

ಸಂಘಟನೆ ಜಿಲ್ಲಾಧ್ಯಕ್ಷ ರಮೇಶ ವೀರಾಪುರ, ಪದಾಧಿಕಾರಿಗಳಾದ ಉಮೇಶ್ ನಾಯಕರ್, ಭೀಮನಗೌಡ, ಕೆ.ಜಿ.ವೀರೇಶ, ಮಹಾಲಿಂಗಮ್ಮ, ದಿಲ್‌ಶಾದ್, ಕಾಸಿಂಬಿ ಪಾಲ್ಗೊಂಡಿದ್ದರು.