ನೇಸರಗಿ: ಆತ್ಮವಿಶ್ವಾಸದಿಂದ ಅಧ್ಯಯನ ಮಾಡಿದರೆ ಗುರಿಮುಟ್ಟಲು ಸಾಧ್ಯವಿದ್ದು, ವಿದ್ಯಾರ್ಥಿಗಳು ತಮ್ಮ ಭವಿಷ್ಯ ರೂಪಿಸಿಕೊಳ್ಳುವಲ್ಲಿ ತಾವೇ ಶಿಲ್ಪಿಗಳಾಗಬೇಕು ಎಂದು ಶಾಸಕ ಬಾಬಾಸಾಹೇಬ ಪಾಟೀಲ ಹೇಳಿದರು.
ಸ್ಥಳೀಯ ಸರ್ಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಶೆಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ವಾರ್ಷಿಕ ಸ್ನೇಹ ಸಮ್ಮೇಳನ ಸಮಾರಂಭಕ್ಕೆ ಶನಿವಾರ ಚಾಲನೆ ನೀಡಿ ಮಾತನಾಡಿದರು.
ಪಿಯುಸಿ ಜೀವನದ ಮಹತ್ವದ ಹಂತವಾಗಿದ್ದು, ಇಂದಿನ ದಿನಮಾನದಲ್ಲಿ ಒಳ್ಳೆಯ ಶಿಕ್ಷಣ ಪಡೆದರೆ ಮಾತ್ರ ಉತ್ತಮ ನಾಗರಿಕರಾಗಬಹುದು. ಗ್ರಾಮೀಣ ವಿದ್ಯಾರ್ಥಿಗಳಿಗೆ ಸರಿಯಾಗಿ ನೀಟ್, ಸಿಇಟಿ ಪರೀಕ್ಷೆಗೆ ಸಂಬಂಧಪಟ್ಟಂತೆ ಕೋಚಿಂಗ್ ದೊರೆಯುತ್ತಿಲ್ಲ. ಆದರೆ, ಮುಂಬರುವ ದಿನಗಳಲ್ಲಿ ಆನ್‌ಲೆನ್ ಕೋಚಿಂಗ್ ಕೊಡಿಸಲು ಶ್ರಮಿಸಲಾಗುವುದು ಎಂದರು.
ಪ್ರಾಚಾರ್ಯ ಆರ್.ಕೆ.ಪಾಟೀಲ ಮಾತನಾಡಿದರು. ಉಪನ್ಯಾಸಕಿ ರೇಣುಕಾ ನಿಂಬಾಳ ಅವರನ್ನು ಸನ್ಮಾನಿಸಲಾಯಿತು. ಸರ್ಕಾರಿ ಪದವಿ ಕಾಲೇಜಿನ ಪ್ರಾಚಾರ್ಯ ಡಾ.ಎಫ್.ಡಿ. ಗಡ್ಡಿಗೌಡರ, ಸಿಡಿಸಿ ಉಪಾಧ್ಯಕ್ಷ ಬಸವರಾಜ ಚಿಕ್ಕಣಗೌಡ್ರ, ಸುರೇಶ ಅಗಸಿಮನಿ, ಪಿಯು ಕಾಲೇಜಿನ ಪ್ರಾಚಾರ್ಯ ಎನ್.ಎಂ. ಕುದರಿಮೋತಿ, ಎಸ್.ವಿ.ದೊಡಮನಿ, ಸಿ.ಬಿ. ರೊಟ್ಟಿ, ಸಂಧ್ಯಾಶ್ರೀ ಕಟ್ಟಿಮನಿ ಇತರರಿದ್ದರು.