ಜಿಲ್ಲೆ

ಅಕ್ರಮ ತಡೆಗೆ ಆನ್‌ಲೈನ್ ಮೊರೆ

ಗಂಗಾಧರ ಬಿ ವಿ

* ಸ್ಥಳೀಯ ಸಂಸ್ಥೆಗಳಲ್ಲಿನ್ನು ಕಾಗದರಹಿತ ಸೇವೆ

* ಕಟ್ಟು ನಿಟ್ಟಾಗಿ ಜಾರಿಗೆ ತರಲು ಸರ್ಕಾರ ನಿರ್ದೇಶನ

ಗಂಗಾಧರ್ ಬೈರಾಪಟ್ಟಣ ರಾಮನಗರ

ಅಕ್ರಮಕ್ಕೆ ತಡೆ ಮತ್ತು ಕಾಗದ ರಹಿತ ಕೆಲಸಗಳಿಗೆ ಉತ್ತೇಜನ ನೀಡುವ ಸಲುವಾಗಿ ಸ್ಥಳೀಯ ಸಂಸ್ಥೆಗಳಲ್ಲಿ ಇನ್ನು ಮುಂದೆ ಆನ್‌ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕಿದೆ. ಕಳೆದ ಹಲವು ವರ್ಷಗಳ ಹಿಂದೆ ಜಾರಿಗೆ ಬಂದಿದ್ದ ಈ ನಿಯಮ ಕೇವಲ ಕಾಗದದಲ್ಲಿ ಉಳಿದುಕೊಂಡಿತ್ತು. ಆದರೆ, ಈಗ ಕಟ್ಟು ನಿಟ್ಟಾಗಿ ಜಾರಿಗೆ ತರಲು ಸರ್ಕಾರ ನಿರ್ದೇಶನ ನೀಡಿದೆ.

ಏಕೀ ಯೋಜನೆ?:

ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯಿತಿಗಳಲ್ಲಿ ಕಾಗದ ರಹಿತ ಸೇವೆ ನೀಡಬೇಕು ಎನ್ನುವುದು ಸರ್ಕಾರದ ಉದ್ದೇಶ. ಈ ನಿಟ್ಟಿನಲ್ಲಿ 2016ರಲ್ಲಿಯೇ ರಾಜ್ಯಾದ್ಯಂತ ಈ ಯೋಜನೆ ಜಾರಿಗೆ ಬಂದಿತ್ತು. ಆದರೆ, ಈ ಆದೇಶಕ್ಕೆ ಆರಂಭದಲ್ಲಿ ಮನ್ನಣೆ ದೊರೆಯದ ಕಾರಣ, ಯಾರೂ ಇದರ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ. ಇದಕ್ಕೆ ಮುಖ್ಯ ಕಾರಣ, ಸ್ಥಳೀಯ ಸಂಸ್ಥೆಗಳು ಯೋಜನೆ ಜಾರಿಗೆ ಬೇಕಾದ ತಾಂತ್ರಿಕ ವ್ಯವಸ್ಥೆಯನ್ನು ಹೊಂದಿರಲಿಲ್ಲ. ಇದರಿಂದಾಗಿ ಹಿಂದಿನ ಪದ್ಧತಿಯೇ ಮುಂದುವರಿದು, ಜತೆ ಕೈ ಬರಹದ ಅರ್ಜಿ ಕೊಟ್ಟು ಕೆಲಸಕ್ಕೆ ಕಾಯುತ್ತಾ ಕುಳಿತುಕೊಳ್ಳುತ್ತಿದ್ದರು. ನೂತನ ಯೋಜನೆ ಹಳ್ಳ ಹಿಡಿದಿದ್ದ ಹಿನ್ನೆಲೆಯಲ್ಲಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ವ್ಯವಸ್ಥೆಗೆ ಮರು ಜೀವ ನೀಡಿ ಸರ್ಕಾರ ಆದೇಶ ಹೊರಡಿಸಿದೆ.

ಎರಡು ಕಡೆ ಅರ್ಜಿ ?

ಸಾರ್ವಜನಿಕರು ಸ್ಥಳೀಯ ಕರ್ನಾಟಕ ಒನ್ ಕೇಂದ್ರಗಳ ಮೂಲಕ ಇಲ್ಲವೇ ಜನಹಿತ ವೆಬ್‌ಸೈಟ್ ಮೂಲಕವೇ ಅರ್ಜಿ ಸಲ್ಲಿಸಬಹುದಾಗಿದೆ. ಕರ್ನಾಟಕ ಒನ್ ಕೇಂದ್ರದ ಸಿಬ್ಬಂದಿ ಆನ್‌ಲೈನ್‌ನಲ್ಲಿ ಅರ್ಜಿ ಭರ್ತಿ ಮಾಡಿ, ದಾಖಲೆಗಳನ್ನು ಅಪ್‌ಲೋಡ್ ಮಾಡುತ್ತಾರೆ.

ಮತ್ತೊಂದೆಡೆ, ಜನಹಿತ ವೆಬ್‌ಸೈಟ್ ಮೂಲಕ ಮನೆಯಲ್ಲಿಯೇ ಕುಳಿತು ಅರ್ಜಿ ಸಲ್ಲಿಸಬಹುದಾಗಿದೆ. ಮೊಬೈಲ್ ಹಾಗೂ ಲ್ಯಾಪ್‌ಟಾಪ್ ಬಳಕೆ ಗೊತ್ತಿರುವವರು ಜನಹಿತವೆಬ್‌ಸೈಟ್ ಮೂಲಕವೇ ಅರ್ಜಿ ಸಲ್ಲಿಸಬಹುದು. ಕೆಲವು ಮಾಹಿತಿಗಳನ್ನು ಅಪ್‌ಲೋಡ್ ಮಾಡಿ ದಾಖಲೆ ಒದಗಿಸಿದರೆ ಆಯಾ ನಗರ ಸ್ಥಳೀಯ ಸಂಸ್ಥೆಗೆ ಅರ್ಜಿ ಸಲ್ಲಿಕೆಯಾಗಲಿದೆ. ಈ ಎರಡು ಮಾದರಿಯಲ್ಲಿ ಸಲ್ಲಿಕೆಯಾಗುವ ಅರ್ಜಿಗಳು ಸಕಾಲದಲ್ಲಿ ಪೋರ್ಟಲ್‌ಗೆ ಹೋಗುವುದರಿಂದ ನಿಗದಿತ ಸಮಯದಲ್ಲಿ ಅರ್ಜಿ ವಿಲೇ ಮಾಡಬೇಕಿದೆ. ಇದರಿಂದ ಸಾರ್ವಜನಿಕರ ಅಲೆದಾಟವೂ ತಪ್ಪಲಿದೆ.

ಯಾವೆಲ್ಲ ಸೇವೆಗಳು

ನಗರ ಸ್ಥಳೀಯ ಸಂಸ್ಥೆಗಳು ಸಾರ್ವಜನಿಕರಿಗೆ ನೀಡುವ ಸೇವೆಗಳಾದ ಜನನ ಮರಣ ಪತ್ರಗಳು, ಖಾತೆ ವರ್ಗಾವಣೆ, ಇ ಖಾತೆ, ರಿನಿವಲ್, ಟ್ರೇಡ್ ಲೈನನ್ಸ್, ಪರವಾನಗಿ, ಕಟ್ಟಡ ಪರವಾನಗಿ ಸೇರಿ ಬಾಕಿ ಉಳಿದ ಎಲ್ಲ ಸೇವೆಗಳಿಗೂ ಆನ್‌ಲೈನ್ ಮುಖಾಂತರವೇ ಅರ್ಜಿ ಸಲ್ಲಿಸಬೇಕು.

ತರಬೇತಿ ಬೇಕಿದೆ

ಲಭ್ಯ ಮಾಹಿತಿ ಪ್ರಕಾರ ಆನ್‌ಲೈನ್ ಮೂಲಕ ಸ್ಥಳೀಯ ಸಂಸ್ಥೆಗಳ ವಿವಿಧ ಸೇವೆಗಳ ಅರ್ಜಿ ಸಲ್ಲಿಕೆ ಬಗ್ಗೆ ಮಾಹಿತಿ ಕರ್ನಾಟಕ ಒನ್ ಸಿಬ್ಬಂದಿಗೆ ಇಲ್ಲ. ಇದರಿಂದಾಗಿ ಕರ್ನಾಟಕ ಒನ್ ಸಿಬ್ಬಂದಿ ಅರ್ಜಿ ಪಡೆಯದೆ ಹಾಗೇ ಕಳುಹಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಇದರಿಂದ ಅತ್ತ ಸ್ಥಳೀಯ ಸಂಸ್ಥೆಗಳಲ್ಲಿ ಅರ್ಜಿ ತೆಗೆದುಕೊಳ್ಳುತ್ತಿಲ್ಲ, ಇತ್ತ ಆನ್‌ಲೈನ್‌ನಲ್ಲಿಯೂ ಅರ್ಜಿ ಸಲ್ಲಿಕೆಯಾಗದಿರುವುದು ಸಾರ್ವಜನಿಕರನ್ನು ತೊಂದರೆಗೆ ಸಿಲುಕಿಸಿದೆ. ಈ ಹಿನ್ನೆಲೆಯಲ್ಲಿ ಪೌರಾಡಳಿತ ನಿರ್ದೇಶನಾಲಯದ ಸಂಬಂಧ ಪಟ್ಟ ಸಿಬ್ಬಂದಿಗೆ ತರಬೇತಿ ನೀಡುವ ಕುರಿತಂತೆ ಸ್ಥಳೀಯ ಸಂಸ್ಥೆಗಳಿಗೆ ನಿರ್ದೇಶನ ನೀಡಬೇಕಿದೆ. ಇಲ್ಲವಾದರೆ ಯೋಜನೆ ಮತ್ತೊಮ್ಮೆ ಹಳ್ಳ ಹಿಡಿಯುವುದು ಖಂಡಿತ.

ನಗರಸಭೆಯಿಂದ ವಿವಿಧ ಸೇವೆಗಳನ್ನು ಪಡೆದುಕೊಳ್ಳಲು ಆನ್‌ಲೈನ್ ಮೂಲಕವೇ ಅರ್ಜಿ ಸಲ್ಲಿಸುವುದನ್ನು ಸರ್ಕಾರ ಕಡ್ಡಾಯಗೊಳಿಸಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಕರ್ನಾಟಕ ಒನ್ ಅಥವಾ ಜನಹಿತ ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಕೆ ಮಾಡಬೇಕು. ಸಕಾಲ ಮಾದರಿಯಲ್ಲಿಯೇ ಕಾಲ ಮಿತಿಯಲ್ಲಿ ಸೇವೆ ದೊರೆಯಲಿದೆ. ಡಾ.ಜಯಣ್ಣ, ಆಯುಕ್ತರು, ನಗರಸಭೆ ರಾಮನಗರ

ಸರ್ವರ್ ತೊಂದರೆ ಕೊಡದಿರಲಿ

ಸಾಮಾನ್ಯವಾಗಿ ಸರ್ಕಾರದ ಸರ್ವರ್‌ಗಳು ಕೈ ಕೊಡುತ್ತಿವೆ. ಕಂದಾಯ ಇಲಾಖೆಯ ಸರ್ವರ್‌ಗಳು ಕೈಕೊಡುವುದರಿಂದ ಸಾಮಾನ್ಯವಾಗಿ ಆಸ್ತಿ ನೋಂದಣಿ, ಖಾತೆಗಳ ವಿತರಣೆಗೆ ಸಾಕಷ್ಟು ಸಮಸ್ಯೆ ಉಂಟಾಗುತ್ತದೆ. ಈಗ ಸರ್ಕಾರ ಸ್ಥಳೀಯ ಸಂಸ್ಥೆಗಳ ಸೇವೆಗಳನ್ನು ಪಡೆದುಕೊಳ್ಳಲು ಆನ್‌ಲೈನ್ ಮೂಲಕವೇ ಅರ್ಜಿ ಸಲ್ಲಿಕೆ ಮಾಡಬೇಕಿದೆ. ಸಕಾಲ ಯೋಜನೆಯಡಿಯಲ್ಲಿಯೇ ಆನ್‌ಲೈನ್ ಮೂಲಕ ಸಲ್ಲಿಕೆ ಆಗುವ ಅರ್ಜಿಗಳ ವಿಲೇವಾರಿ ಆಗುವುದರಿಂದ ಸರ್ವರ್ ಸಮಸ್ಯೆ ಉಂಟಾಗದಂತೆ ಸರ್ಕಾರ ಕ್ರಮವಹಿಸಬೇಕಿದೆ. ಇಲ್ಲವಾದರೆ ಸಾರ್ವಜನಿಕರಿಗೆ ತೊಂದರೆ ತಪ್ಪಿದ್ದಲ್ಲ.