ಜಿಲ್ಲೆ

ಎಪಿಎಂಸಿಯಲ್ಲಿ ಉಳ್ಳಾಗಡ್ಡಿ ಬೆಳೆಗಾರರ ಧರಣಿ,  ಯೋಗ್ಯ ಬೆಲೆ ನೀಡಲು 2 ದಿನಗಳ ಗಡುವು

Dharwada - Basavaraj Idli

ಹುಬ್ಬಳ್ಳಿ: ರೈತರು ಬೆಳೆದ ಉಳ್ಳಾಗಡ್ಡಿಗೆ ಯೋಗ್ಯ ಬೆಲೆ ನೀಡಬೇಕು, ಹೆಸರು ಖರೀದಿ ಪ್ರಕ್ರಿಯೆ ಕೂಡಲೇ ಆರಂಭಿಸಬೇಕೆಂದು ಆಗ್ರಹಿಸಿ ನೂರಾರು ರೈತರು ಇಲ್ಲಿಯ ಎಪಿಎಂಸಿಯಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.

ಟ್ರಾಕ್ಟರ್, ಬೈಕ್ ಗಳ ಮೂಲಕ ಎಪಿಎಂಸಿ ಆಡಳಿತ ಕಚೇರಿಗೆ ಆಗಮಿಸಿದ ಉಳ್ಳಾಗಡ್ಡಿ ಹಾಗೂ ಹೆಸರು ಬೆಳೆಗಾರರು ಕಚೇರಿ ಎದುರು ಉಳ್ಳಾಗಡ್ಡಿ ಸುರಿದು ಧರಣಿ ನಡೆಸಿದರು. ಬೆಂಬಲ ಬೆಲೆ ಯೋಜನೆಯಡಿ ಸಮರ್ಪಕ ಖರೀದಿ ಪ್ರಕ್ರಿಯೆ ನಡೆಯದಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ತಕ್ಷಣ ರೈತರ ಬೇಡಿಕೆಗೆ ಸ್ಪಂದಿಸಿ ಉಳ್ಳಾಗಡ್ಡಿಗೆ ಕನಿಷ್ಠ ಬೆಂಬಲ ಬೆಲೆ ಕ್ವಿಂಟಾಲ್ ಗೆ 5 ಸಾವಿರ ರೂ. ನಿಗದಿ ಮಾಡಬೇಕು. ಹೆಸರು ಖರೀದಿ ತಕ್ಷಣ ಶುರು ಮಾಡಬೇಕೆಂದು ಒತ್ತಾಯಿಸಿದರು.

ನೇತೃತ್ವ ವಹಿಸಿದ್ದ ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಶಿವಾನಂದ ಕರಿಗಾರ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿವೆ. ಬೆಳೆ ಕೈಗೆ ಬಂದಾಗ ಮಾರುಕಟ್ಟೆಯಲ್ಲಿ ಬೆಲೆ ಇಳಿಕೆಯಾಗುತ್ತದೆ. ಇಂತಹ ಸಂದರ್ಭದಲ್ಲಿ ಸರ್ಕಾರಗಳು ಬೆಂಬಲ ಬೆಲೆ ಘೋಷಣೆ ಮಾಡಿ ಖರೀದಿ ಮಾಡಬೇಕು. ಜನಪ್ರತಿನಿಧಿಗಳಾದವರು ರೈತರ ಹಿತ ಕಾಯಬೇಕು ಎಂದು ಆಗ್ರಹಿಸಿದರು.

ಉಳ್ಳಾಗಡ್ಡಿಗೆ ಬೆಂಬಲ ಬೆಲೆ ನಿಗದಿ ಮಾಡಬೇಕು. ಇನ್ನೆರಡು ದಿನದಲ್ಲಿ ರೈತರಿಗೆ ಯೋಗ್ಯ ಬೆಲೆ ಕೊಡದಿದ್ದರೆ ಸೋಮವಾರದಿಂದ ಉಗ್ರ ಹೋರಾಟ ಅನಿವಾರ್ಯವಾಗಲಿದೆ ಎಂದು ಎಚ್ಚರಿಸಿದರು.

ಸದ್ಯ ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಾಲ್ ಗೆ 100 ರೂ.ನಿಂದ ಸಾವಿರ ರೂ. ವರೆಗೆ ಬೆಲೆ ಇದೆ. ಬೇರೆ ದೇಶಕ್ಕೆ ರಫ್ತು ಮಾಡಲು ಕೇಂದ್ರ ಸರ್ಕಾರ ಅವಕಾಶ ನೀಡಿದರೆ ಸ್ಥಳಿಯ ಮಾರುಕಟ್ಟೆಯಲ್ಲಿ ಉಳ್ಳಾಗಡ್ಡಿ ಬೆಲೆ ಹೆಚ್ಚಳವಾಗುತ್ತದೆ ಎಂದು ರೈತ ಮುಖಂಡ ರಾಜು ಕರಮಡಿ ಹೇಳಿದರು.

ಹೆಸರು ಖರೀದಿ ಶೀಘ್ರ ಆರಂಭಿಸಿ, ಜಿಲ್ಲೆಯ ಎಲ್ಲ ರೈತರಿಗೆ ಪ್ರಕೃತಿ ವಿಕೋಪ ಹಿನ್ನೆಲೆಯಲ್ಲಿ ಪ್ರತಿ ಎಕರೆಗೆ 50 ಸಾವಿರ ರೂ. ಪರಿಹಾರ ನೀಡಬೇಕು, ಬೆಳೆ ಬಂದ ತಕ್ಷಣ ಸರ್ಕಾರಿ ಖರೀದಿ ಆರಂಭಿಸಬೇಕು ಎಂಬುದು ಸೇರಿ ವಿವಿಧ ಬೇಡಿಕೆಗಳ ಪಟ್ಟಿಯನ್ನು ಎಪಿಎಂಸಿ ಅಧಿಕಾರಿಗಳ ಮೂಲಕ ಸರ್ಕಾರಕ್ಕೆ ಸಲ್ಲಿಸಲಾಯಿತು.

ರೈತ ಮುಖಂಡರಾದ ಶಿವಪ್ಪ ಅನಗತ್ತಿ, ಚನ್ನಪ್ಪ ಕುನ್ನೂರ, ಗೂಳಪ್ಪ ತಿರಕಪ್ಪನವರ, ಸಿದ್ದಣ್ಣ ನಿಗದಿ, ಅಶೋಕ ಬೆಲ್ಲಣ್ಣವರ, ಮಂಜುನಾಥ ಮಲ್ಲಾರಿ, ಬಸವರಾಜ ಬೈಲಮ್ಮನವರ, ಮಲ್ಲಿಕಾರ್ಜುನ ಅಣ್ಣಿಗೇರಿ, ಶಿವಾನಂದ ನವಲೂರ, ಸಿದ್ದು ಮಲ್ಲಾರಿ, ದ್ಯಾಮಣ್ಣ ಹಲಗತ್ತಿ ಇತರರು ಪ್ರತಿಭಟನೆಯಲ್ಲಿದ್ದರು.