ಬೆಳಗಾವಿ: ಅಲ್ಪ ಪ್ರಮಾಣದಲ್ಲಿ ಲಾಕ್‌ಡೌನ್ ಸಡಿಲಗೊಳಿಸಿರುವ ಬೆನ್ನಲ್ಲೇ ಬೆಳಗಾವಿ ಕೃಷಿ ಉತ್ಪನ್ನ ಮಾರುಕಟ್ಟೆ (ಎಪಿಎಂಸಿ)ಗೆ ವಿವಿಧ ಭಾಗಗಳಿಂದ ಶನಿವಾರ 5,700 ಕ್ವಿಂಟಾಲ್ ಈರುಳ್ಳಿ ಆವಕವಾಗಿದೆ.
ತಿಂಗಳುಗಳ ಕಾಲ ವ್ಯಾಪಾರ, ವಹಿವಾಟು ಮತ್ತು ವಾಹನಗಳ ಸಂಚಾರಕ್ಕೆ ಸಂಪೂರ್ಣ ನಿರ್ಬಂಧ ಇರುವ ಹಿನ್ನೆಲೆಯಲ್ಲಿ ರೈತರಿಗೆ ಮಾರುಕಟ್ಟೆಗೆ ಈರುಳ್ಳಿ ತರಲು ಸಾಧ್ಯವಾಗಿರಲಿಲ್ಲ. ಇದೀಗ ಸರ್ಕಾರವು ಲಾಕ್‌ಡೌನ್ ಸಡಿಲ ಮಾಡುತ್ತಿರುವುದರಿಂದ ಬೆಳಗಾವಿ ಮತ್ತು ಬಾಗಲಕೋಟೆ ಜಿಲ್ಲೆಯ ರೈತರು ಈರುಳ್ಳಿ ಹರಾಜು ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದು, 11,459 ಬ್ಯಾಗ್ ಈರುಳ್ಳಿ ಮಾರುಕಟ್ಟೆಗೆ ಬಂದಿದೆ.
ಬೆಳೆಗಾರರಿಗೆ ತುಸು ನೆಮ್ಮದಿ : ಕಳೆದ ನಾಲ್ಕೈದು ವಾರಗಳ ಅವಧಿಯಲ್ಲಿ ಸಗಟು ಮಾರುಕಟ್ಟೆಯಲ್ಲಿ ಕ್ವಿಂಟಾಲ್ ಈರುಳ್ಳಿ 500ರಿಂದ 1,000 ರೂ. ವರೆಗೆ ಹಾಗೂ ಚಿಲ್ಲರೆ ಮಾರುಕಟ್ಟೆಯಲ್ಲಿ ಕೆ.ಜಿ. ಈರುಳ್ಳಿ ಕನಿಷ್ಠ 18ರಿಂದ ಗರಿಷ್ಠ 32 ರೂ. ವರೆಗೆ ಮಾರಾಟವಾಗುತ್ತಿತ್ತು. ಇದೀಗ ಶನಿವಾರ ನಡೆದ ಈರುಳ್ಳಿ ಹರಾಜು ಪ್ರಕ್ರಿಯೆಯಲ್ಲಿ ಕ್ವಿಂಟಲ್ ಈರುಳ್ಳಿ 1000 ರೂ. ದಿಂದ 1450 ರೂ. ವರೆಗೆ ಮಾರಾಟವಾಗಿರುವುದು ರೈತರಲ್ಲಿ ತುಸು ನೆಮ್ಮದಿ ತಂದಿದೆ.
ಲಾಕ್‌ಡೌನ್‌ನಿಂದ ವಾಹನ ಸಂಚಾರ ನಿರ್ಬಂಧಿಸಿದ್ದರಿಂದ ಕರ್ನಾಟಕ, ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳ ವ್ಯಾಪಾರ-ವಹಿವಾಟು ಕೇಂದ್ರ ಸ್ಥಾನವಾದ ಬೆಳಗಾವಿ ಎಪಿಎಂಸಿಯಲ್ಲಿ 6,500ಕ್ಕೂ ಹೆಚ್ಚು ಕ್ವಿಂಟಾಲ್ ಈರುಳ್ಳಿ ಸಂಗ್ರಹವಾಗಿತ್ತು. ಇದೀಗ ಶನಿವಾರ ಹರಾಜು ಪ್ರಕ್ರಿಯೆಗೆ 5,700 ಕ್ವಿಂಟಾಲ್ ಈರುಳ್ಳಿ ಬಂದಿದ್ದು, ಒಟ್ಟು 12,200 ಕ್ವಿಂಟಾಲ್ ಸಂಗ್ರಹಗೊಂಡಿತು. ಅದರಲ್ಲಿ ಶೇ. 60ರಷ್ಟು ಮಾರಾಟವಾಗಿದ್ದು, ಗೋವಾ ರಾಜ್ಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಪೂರೈಕೆಯಾಗಿದೆ.
ಮುಂದಿನ ವಾರ ಇನ್ನೂ ಹೆಚ್ಚು ಆವಕ ನಿರೀಕ್ಷೆ: ರಾಜ್ಯದಲ್ಲಿ ಅತಿವೃಷ್ಟಿ ಸಂಭವಿಸಿದ ಬಳಿಕ 2019ರ ಡಿಸೆಂಬರ್‌ನಲ್ಲಿ ಬೆಳಗಾವಿ ಎಪಿಎಂಸಿಯಲ್ಲಿ ಮೊದಲ ಬಾರಿಗೆ 65 ಸಾವಿರ ಕ್ವಿಂಟಾಲ್ (17,93,043 ಬ್ಯಾಗ್‌ಗಳು) ಈರುಳ್ಳಿ ವಹಿವಾಟು ನಡೆದಿತ್ತು. ಅಲ್ಲದೆ, ಈರುಳ್ಳಿ ಕ್ವಿಂಟಾಲ್‌ಗೆ 18,500 ರೂ. ಗಡಿ ದಾಟಿತ್ತು. ಬಳಿಕ ಆ ಪ್ರಮಾಣದಲ್ಲಿ ಈರುಳ್ಳಿ ಮಾರಾಟವಾಗಿರಲಿಲ್ಲ. ಇದೀಗ ಸರ್ಕಾರವು ಲಾಕ್‌ಡೌನ್ ಸಡಿಲಗೊಳಿಸುತ್ತಿರುವುದರಿಂದ ಮುಂದಿನ ಎರಡು ವಾರಗಳ ಅವಧಿಯಲ್ಲಿ ನಿರೀಕ್ಷೆ ಮೀರಿ ಈರುಳ್ಳಿ ಬರಲಿದೆ ಎಂದು ಬೆಳಗಾವಿ ಎಪಿಎಂಸಿಯ ಈರುಳ್ಳಿ ವ್ಯಾಪಾರಿಗಳು ತಿಳಿಸಿದ್ದಾರೆ.
ಲಾಕ್‌ಡೌನ್ ಹಿನ್ನೆಲೆಯಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿತ್ತು. ಇದರಿಂದ ಮಾರುಕಟ್ಟೆಗೆ ನಿರೀಕ್ಷಿತ ಪ್ರಮಾಣದಲ್ಲಿ ಈರುಳ್ಳಿ ಬಂದಿರಲಿಲ್ಲ. ಇದೀಗ ಲಾಕ್‌ಡೌನ್ ಸಡಿಲಗೊಳಿಸಿದ್ದರಿಂದ ಹೆಚ್ಚಿನ ಪ್ರಮಾಣದಲ್ಲಿ ಈರುಳ್ಳಿ ಬರುತ್ತಿದೆ. ಈರುಳ್ಳಿ ಹರಾಜು ಪ್ರಕ್ರಿಯೆಯಲ್ಲಿ ಗೋವಾ ಮತ್ತು ಸ್ಥಳೀಯ ವ್ಯಾಪಾರಿಗಳು ಭಾಗವಹಿಸಿದ್ದರಿಂದ ರೈತರಿಗೆ ಹೆಚ್ಚಿನ ದರ ಸಿಕ್ಕಿದೆ.| ಡಾ. ಕೆ.ಕೋಡಿಗೌಡ. ಕಾರ್ಯದರ್ಶಿ, ಬೆಳಗಾವಿ ಎಪಿಎಂಸಿ
| ಮಂಜುನಾಥ ಕೋಳಿಗುಡ್ಡ ಬೆಳಗಾವಿ