ಶೇಗುಣಿಸಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಪ್ರಗತಿಪರ ಕೃಷಿಕ ಗುರುಪಾದ ಯಲಡಗಿ ಅವರ ಪುಣ್ಯಸ್ಮರಣೋತ್ಸವದಲ್ಲಿ ಬಾಲಗಾಂವದ ಅಮೃತಾನಂದ ಸ್ವಾಮೀಜಿ ಮಾತನಾಡಿದರು. ಹಣಮಂತ ಮಹಾರಾಜರು, ಮಹಿಷಾನಂದ ಸ್ವಾಮೀಜಿ, ಗುರುಪಾದ ಸ್ವಾಮೀಜಿ, ಶಿವರಾಯ ಯಲಡಗಿ ಇತರರಿದ್ದರು. 
ಜಿಲ್ಲೆ

ಒಕ್ಕಲುತನ ಹಾಳಾದರೆ ದಾರಿದ್ರ್ಯ

ಪ್ರಶಾಂತ ಹೂಗಾರ

ಅಥಣಿ: ಭಾರತ ಅಧ್ಯಾತ್ಮ ಮತ್ತು ಕೃಷಿಯಲ್ಲಿ ಸಂಪದ್ಭರಿತ ದೇಶ. ಬದುಕಿನ ಮೂರು ರತ್ನಗಳಾದ ಅನ್ನ, ನೀರು ಮತ್ತು ಒಳ್ಳೆಯ ಮಾತು ನಮ್ಮ ಜೀವಾಳವಾಗಬೇಕು. ಇದರಿಂದ ಆರೋಗ್ಯವಂತ ಸಮಾಜ ನಿರ್ಮಿಸಬಹುದು ಎಂದು ಬಾಲಗಾಂವದ ಅಮೃತಾನಂದ ಸ್ವಾಮೀಜಿ ಹೇಳಿದರು.

ತಾಲೂಕಿನ ಶೇಗುಣಿಸಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಪ್ರಗತಿಪರ ಕೃಷಿಕ, ಅಧ್ಯಾತ್ಮ ಚಿಂತಕ ಗುರುಪಾದ ಯಲಡಗಿ ಅವರ 19ನೇ ಪುಣ್ಯಸ್ಮರಣೋತ್ಸವ ಅಂಗವಾಗಿ ಭಾನುವಾರ ಹಮ್ಮಿಕೊಂಡಿದ್ದ ಕಲ್ಮೇಶ್ವರ ಮಹಾರಾಜರ ಜ್ಞಾನಯಜ್ಞ ಸಪ್ತಾಹ ಹಾಗೂ ಸಂಸ್ಕಾರ, ಸಾವಯವ ಕೃಷಿ ಮತ್ತು ದೇಸಿ ಹಸುವಿನ ಮಹತ್ವದ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಮಾತನಾಡಿದರು.

ಆರೋಗ್ಯವಂತ ಮನೆತನ, ಶ್ರೀಮಂತಿಕೆ ಇರುವುದು ಕೃಷಿ ಕುಟುಂಬದಲ್ಲಿ ಮಾತ್ರ. ಒಕ್ಕಲುತನ ಹಾಳಾದರೆ ಬಡತನ, ದಾರಿದ್ರ್ಯ ತಾಂಡವವಾಡುತ್ತದೆ. ಗುರುಪಾದ ಯಲಡಗಿ ಅವರು ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿ ದಾನ-ಧರ್ಮದ ಗುಣ ತಿಳಿಸಿ ಸುಸಂಸ್ಕೃತ ಸಮಾಜ ನಿರ್ಮಾಣಕ್ಕೆ ದಾರಿ ತೋರಿದ್ದಾರೆ. ಅವರ ಸಮಾಜಮುಖಿ ಸೇವಾಕಾರ್ಯ ಎಲ್ಲ ರೈತರಿಗೆ ಮಾದರಿಯಾಗಿದೆ.

ಅತಿಯಾದ ರಸಾಯನಿಕ ಬಳಕೆಯಿಂದ ಕೃಷಿ ಭೂಮಿ ಹಾಳಾಗುತ್ತಿದೆ. ಅದನ್ನು ತಡೆಯಲು ರೈತರು ಮುಂದಾಗಬೇಕು. ಅಲ್ಲದೆ ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಳ್ಳಬೇಕು ಎಂದರು.

ಮೈಶಾಳದ ಮಹಿಷಾನಂದ ಸ್ವಾಮೀಜಿ ಮಾತನಾಡಿ, ಸಂಸಾರದಲ್ಲಿದ್ದುಕೊಂಡು ಆಧ್ಯಾತ್ಮಿಕ ಜೀವನ ಸಾಗಿಸಿದ ಎಲ್ಲರಿಗೂ ಗುರುಪಾದ ಯಲಡಗಿ ಮಾದರಿ. ಅವರ ಪರೋಪಕಾರ ಗುಣವನ್ನು ಪರಿವಾರ ಅಳವಡಿಸಿಕೊಂಡು ನೂರಾರು ಜನರಿಗೆ ಜ್ಞಾನದಾಸೋಹ, ಅನ್ನದಾಸೋಹ, ಕಷಿ ದಾಸೋಹ ಮಾಡುತ್ತಿರುವುದು ಶ್ಲಾಘನೀಯ. ಸಾವಯವ ಕೃಷಿಯಿಂದ ರಾಜ್ಯದ ಗಮನ ಸೆಳೆದಿರುವ ಯಲಡಗಿ ಪರಿವಾರದ ಸಾಧನೆ ಅಮೋಘವಾಗಿದೆ. ಸಾವಯವ ಪದ್ಧತಿ ಅಳವಡಿಸಿಕೊಂಡು ಗೋ ಮೂತ್ರ, ಸಗಣಿ ಬಳಸಿಕೊಂಡು ಬೆಳೆ ಬೆಳೆಯಲು ಆರಂಭಿಸಬೇಕು. ಇದರಿಂದ ಬೆಳೆ ಸಮೃದ್ಧಿಯಾಗುತ್ತದೆ ಎಂದರು.

ಯಂಕಚ್ಚಿಯ ಗುರುಪಾದ ಸ್ವಾಮೀಜಿ, ಶಿರೋಳದ ಬಸವಲಿಂಗ ಸ್ವಾಮೀಜಿ, ಹಣಮಂತ ಮಹಾರಾಜರು, ಮಹಾದೇವ ಮಹಾರಾಜರು, ಪ್ರದೀಪ ಗಂಟಿ ಮಹಾರಾಜರು ಮಾತನಾಡಿದರು.

ಕಾಗವಾಡ ಶಾಸಕ ರಾಜು ಕಾಗೆ, ಕೃಷ್ಣಾ ಕಾರ್ಖಾನೆ ಅಧ್ಯಕ್ಷ ಪರಪ್ಪ ಸವದಿ, ಉಪಾಧ್ಯಕ್ಷ ಶಂಕರ ವಾಘಮೊಡೆ, ಗಣ್ಯರಾದ ಶ್ರೀಶೈಲ ನಾರಗೊಂಡ, ತಮ್ಮಣ್ಣ ತೇಲಿ, ಶಿವರಾಯ ಯಲಡಗಿ, ಕಲ್ಮೇಶ ಯಲಡಗಿ, ಡಾ.ಪ್ರಕಾಶ ಕುಮಠಳ್ಳಿ, ಆನಂದ ಟೊನಪಿ, ಪ್ರದೀಪ ಭದ್ರಪಗೋಳ, ಎ.ವೈ.ಗಲಗಲಿ, ಚೇತನ ಯಲಡಗಿ ಇತರರಿದ್ದರು.