ಜಿಲ್ಲೆ

3 ತಿಂಗಳ ಹಿಂದೆ ಸತ್ತವ ದಿಢೀರ್ ಪ್ರತ್ಯಕ್ಷ!; ಮಧುಗಿರಿಯಲ್ಲಿ ಘಟನೆ ಶವಸಂಸ್ಕಾರ, ತಿಥಿ ಕಾರ್ಯವೂ ನಡೆದಿತ್ತು

Webdesk - Ravikanth

ಮಧುಗಿರಿ: ಮೂರು ತಿಂಗಳ ಹಿಂದೆ ಮೃತಪಟ್ಟಿದ್ದಾನೆ ಎಂದು ತಿಳಿದು ಶವಸಂಸ್ಕಾರ, ತಿಥಿಕಾರ್ಯ ಎಲ್ಲವನ್ನೂ ನಡೆಸಲಾಗಿದ್ದ ವ್ಯಕ್ತಿ ದಿಢೀರ್ ಪ್ರತ್ಯಕ್ಷವಾಗಿ ಕುಟುಂಬಸ್ಥರು ಮತ್ತು ಗ್ರಾಮಸ್ಥರಿಗೆ ಅಚ್ಚರಿ ಮೂಡಿಸಿದ್ದಾರೆ! ಇಂಥದೊಂದು ಅಚ್ಚರಿಯ ಘಟನೆ ತಾಲೂಕಿನ ಕೊಡಿಗೇನಹಳ್ಳಿಯಲ್ಲಿ ನಡೆದಿದೆ. ಮೃತಪಟ್ಟಿದ್ದಾರೆೆ ಎಂದೇ ಭಾವಿಸಲಾಗಿದ್ದ ಕೊಡಿಗೇನಹಳ್ಳಿ ನಾಗರಾಜಪ್ಪ ಎಂಬುವರೇ ಮಂಗಳವಾರ ಬೆಳಗ್ಗೆ ಗ್ರಾಮಕ್ಕೆ ಬಸ್​ನಲ್ಲಿ ಬಂದಿಳಿದು ಅಚ್ಚರಿ ಮೂಡಿಸಿದವರು.

ಮಧುಗಿರಿ ತಾಲೂಕು ಚಿಕ್ಕ ಮಾಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರೇಮಲತಾ ಅವರ ತಂದೆ ನಾಗರಾಜಪ್ಪಗೆ ಮದ್ಯಪಾನದ ಚಟವಿತ್ತು. ಅನಾರೋಗ್ಯದ ಹಿನ್ನೆಲೆಯಲ್ಲಿ ಮೂರು ತಿಂಗಳ ಹಿಂದೆ ಅವರನ್ನು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ಸೇರಿಸಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಖಾಸಗಿ ಆಸ್ಪತ್ರೆ ಸಿಬ್ಬಂದಿ ನಾಗರಾಜಪ್ಪ ಮೃತಪಟ್ಟಿದ್ದಾರೆ ಎಂದು ಶವವನ್ನು ಅವರ ಕುಟುಂಬದವರಿಗೆ ಹಸ್ತಾಂತರಿಸಿದ್ದರು. ಕುಟುಂಬಸ್ಥರು ಅಂತ್ಯಸಂಸ್ಕಾರವನ್ನೂ ನೆರ ವೇರಿಸಿದ್ದರು. ಆದರೆ ಇದೀಗ ನಾಗರಾಜಪ್ಪ ಇದ್ದಕ್ಕಿದ್ದಂತೆ ಪ್ರತ್ಯಕ್ಷವಾಗಿದ್ದು, ಕುಟುಂಬದವರು ಗೊಂದಲಕ್ಕೀಡಾಗಿದ್ದಾರೆ. ಹಾಗಾದರೆ 3 ತಿಂಗಳ ಹಿಂದೆ ನೆರವೇರಿಸಿದ್ದ ಶವ ಯಾರದು ಎಂಬುದು ಪ್ರಶ್ನೆಯಾಗಿಯೇ ಉಳಿದಿದೆ.

ಇವರ ಮತ್ತೋರ್ವ ಪುತ್ರಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಅಲ್ಲಿಯೇ ತಂದೆ ನಾಗರಾಜಪ್ಪ ಸಣ್ಣ-ಪುಟ್ಟ ಕೆಲಸ ಮಾಡಿಕೊಂಡು ಇರುತ್ತಿದ್ದರು. ಆಗಾಗ ಇವರು ಮನೆ ಬಿಟ್ಟು ಹೋಗುತ್ತಿದ್ದರು. ಮೂರು ತಿಂಗಳ ಹಿಂದೆ ಮಗಳು ಕೆಲಸ ನಿರ್ವಹಿಸುವ ಅದೇ ಆಸ್ಪತ್ರೆಯ ಶವಾಗಾರದಲ್ಲಿ ಇವರ ತಂದೆಯನ್ನೇ ಹೋಲುವ ವ್ಯಕ್ತಿಯ ಮೃತದೇಹವಿತ್ತು. ಆಸ್ಪತ್ರೆ ದಾಖಲೆಗಳ ಪ್ರಕಾರ ಇವರ ತಂದೆಗೆ ಏನೇನು ಕಾಯಿಲೆಗಳಿದ್ದವೋ ಅವೆೆಲ್ಲಾ ಲಕ್ಷಣ ಮೃತ ವ್ಯಕ್ತಿಯಲ್ಲಿ ಇದ್ದವು. ತಂದೆಯೆಂದೇ ಭಾವಿಸಿ ಅಂತ್ಯ ಸಂಸ್ಕಾರ ನೆರವೇರಿಸಿದ್ದರು. ‘ನಮ್ಮ ತಂದೆ ವಾಪಸ್ ಬಂದಿರುವುದು ನಮಗೆ ಸಂತಸ ತಂದಿದೆ. ನಾವು ಇವರನ್ನು ಮತ್ತೆಲ್ಲಿಗೂ ಕಳುಹಿಸುವುದಿಲ್ಲ’ ಎನ್ನುತ್ತಾರೆ ಮಕ್ಕಳು. ಇಷ್ಟು ದಿನ ಇವರು ನಿರಾಶ್ರಿತರ ಶಿಬಿರದಲ್ಲಿದ್ದು, ಮನೆಯವರ ನೆನಪು ಕಾಡಿ ಊರಿಗೆ ನಾಗರಾಜಪ್ಪ ವಾಪಸಾಗಿದ್ದಾರೆ ಎನ್ನಲಾಗಿದೆ. ಆತನೇ ಎಲ್ಲರನ್ನೂ ಗುರುತು ಹಿಡಿದು ಮಾತನಾಡಿಸಿದ ಬಳಿಕ ಅಸಲಿ ನಾಗರಾಜಪ್ಪ ಎಂದು ತಿಳಿದುಬಂದಿದೆ.