ಶಿವಪ್ರಸಾದ ಹಿರೇಕೈ ಶಿರಸಿ
ರೈತರ ಜಮೀನುಗಳಿಗೆ ತೆರಳಿ ಅಲ್ಲಿನ ಬೆಳೆಗಳ ಕುರಿತು ಮಾಹಿತಿ ಹಾಗೂ ಮಣ್ಣು ಪರೀಕ್ಷೆ ನಡೆಸಿ ಸ್ಥಳದಲ್ಲೇ ವರದಿ ನೀಡುವ ಉದ್ದೇಶದಿಂದ ಸರ್ಕಾರ ಕೃಷಿ ಇಲಾಖೆಯಿಂದ ‘ಕೃಷಿ ಸಂಜೀವಿನಿ-ಸಂಚಾರಿ ಸಸ್ಯ ಆರೋಗ್ಯ ಚಿಕಿತ್ಸಾಲಯ ಯೋಜನೆ’ ಜಾರಿಗೊಳಿಸಿದೆ. ಆದರೆ, ಉತ್ತರ ಕನ್ನಡ ಜಿಲ್ಲೆಯಲ್ಲಿ ಶಿರಸಿ ಹಾಗೂ ಯಲ್ಲಾಪುರ ತಾಲೂಕುಗಳಲ್ಲಿ ತಲಾ ಒಂದು ವಾಹನವಿದೆ. ಯಲ್ಲಾಪುರದಲ್ಲಿರುವ ಕೃಷಿ ಸಂಜೀವಿನಿ ವಾಹನ ಯಲ್ಲಾಪುರ ತಾಲೂಕಿಗೆ ಮಾತ್ರ ಸೀಮಿತವಾದರೆ, ಇನ್ನುಳಿದ 11 ತಾಲೂಕುಗಳಿಗೆ ಶಿರಸಿಯಲ್ಲಿರುವ ವಾಹನವೇ ಗತಿಯಾಗಿದೆ.
ಸರ್ಕಾರ ಪ್ರತಿ ತಾಲೂಕಿಗೆ ಒಂದರಂತೆ ವಾಹನ ವಿತರಣೆ ಮಾಡುವ ಮೂಲಕ ಕೃಷಿ ಸಂಜೀವಿನಿ ಯೋಜನೆಗೆ ಇನ್ನಷ್ಟು ಪುಷ್ಟಿ ನೀಡಿದರೆ ರೈತರಿಗೆ ಇನ್ನಷ್ಟು ಉಪಯೋಗ ವಾಗುತ್ತದೆ ಎಂಬ ಮಾತುಗಳು ರೈತ ವಲಯದಿಂದ ಕೇಳಿ ಬರುತ್ತಿದೆ.
ರೈತರು ತಮ್ಮ ಜಮೀನಿನ ಮಣ್ಣು ಪರೀಕ್ಷೆ ಮಾಡಿಸಲು ಲ್ಯಾಬ್‌ಗಳಿಗೆ ತೆರಳಿ ಅಲ್ಲಿ ಪರೀಕ್ಷೆ ನಡೆಸಿ ವರದಿ ಪಡೆದುಕೊಳ್ಳಬೇಕಾಗಿತ್ತು. ಆದರೆ, ಇದೀಗ ರೈತರ ಜಮೀನುಗಳಿಗೆ ಕೃಷಿ ಇಲಾಖೆಯ ಕೃಷಿ ಸಂಜೀವಿನಿ ವಾಹನ ಭೇಟಿ ನೀಡಿ ಮಣ್ಣು ಪರೀಕ್ಷೆ ನಡೆಸಿ ರೈತರಿಗೆ ಬೇಕಾದ ಮಾಹಿತಿ ನೀಡುತ್ತದೆ. ಈ ವಾಹನದಲ್ಲಿ ನುರಿತ ಕೃಷಿ ಅಧಿಕಾರಿ ಹಾಗೂ ಸಿಬ್ಬಂದಿ ಇರುತ್ತಾರೆ.
2021-22ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಕೀಟ, ರೋಗ, ಕಳೆ, ಪೋಷಕಾಂಶಗಳ ಕೊರತೆ ಮತ್ತು ಮಣ್ಣು ಆರೋಗ್ಯದ ಕುರಿತು ರೈತರ ತಾಕುಗಳಲ್ಲಿಯೇ ಹತೋಟಿ ಕ್ರಮಗಳ ಕುರಿತು ಮಾರ್ಗೋಪಾಯ ಒದಗಿಸಲು ಸಂಚಾರಿ ಸಸ್ಯ ಆರೋಗ್ಯ ಚಿಕಿತ್ಸಾಲಯ ಕೃಷಿ ಸಂಜೀವಿನಿ ಯೋಜನೆಯನ್ನು ಜಿಲ್ಲೆಯಲ್ಲಿ ಅನುಷ್ಠಾನಗೊಳಿಸಲಾಗಿದೆ. ರೈತರು ಸಾಮಾನ್ಯವಾಗಿ ಒಂದೆಡೆ ಸೇರುವ ಜಾಗಗಳಲ್ಲಿ ಉಪಯುಕ್ತವಾಗುವ ವಿಷಯಗಳ ಬಗ್ಗೆ ಮಾಹಿತಿಯನ್ನು ಛಾಯಾಚಿತ್ರ ಹಾಗೂ ವಿಡಿಯೋಗಳ ಮೂಲಕ ತೋರಿಸುವ ವ್ಯವಸ್ಥೆಯನ್ನು ಕೃಷಿ ಸಂಜೀವಿನಿ ವಾಹನ ದಲ್ಲಿ ಮಾಡಲಾಗುತ್ತದೆ. ರೈತರ ಸಮ್ಮುಖದಲ್ಲಿಯೇ ಮಣ್ಣು ಪರೀಕ್ಷೆಯನ್ನು ತ್ವರಿತವಾಗಿ ಕೈಗೊಂಡು ಸೂಕ್ತ ಮಣ್ಣು ನಿರ್ವಹಣಾ ಕ್ರಮಗಳ ಮಾಹಿತಿಯನ್ನು ಒದಗಿಸಲು ಮಣ್ಣು ಪರೀಕ್ಷಾ ಸಾಧನಗಳನ್ನು ವಾಹನದಲ್ಲಿ ಅಳವಡಿಸಲಾಗಿದೆ.
ಸಂಪರ್ಕಿಸಿವುದು ಹೇಗೆ?: ರೈತ ಸಹಾಯವಾಣಿ 155313 ಸಂಖ್ಯೆಗೆ ಕರೆ ಮಾಡಿ ತಮ್ಮ ತಾಲೂಕು, ಗ್ರಾಮದ ಬಗ್ಗೆ ಸ್ಪಷ್ಟವಾಗಿ ತಿಳಿಸಬೇಕು. ಅದರನ್ವಯ ಇಲಾಖೆ ಅಧಿಕಾರಿಗಳು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ರೈತರಿಗೆ ಬೇಕಾದ ಉಪಯುಕ್ತ ಮಾಹಿತಿ ನೀಡುತ್ತಾರೆ.