ಜಿಲ್ಲೆ

ಒನ್ ಟಚ್ ಮಂಗಳೂರು ಆ್ಯಪ್ ಶೀಘ್ರ ಸಾರ್ವಜನಿಕರ ಬಳಕೆಗೆ ಲಭ್ಯ

ಮಂಗಳೂರು: ಮಂಗಳೂರು ಸ್ಮಾರ್ಟ್ ಸಿಟಿಯ ಮೂಲಕ ನಗರ ಅಭಿವದ್ಧಿಯೆಡೆಗೆ ಸಾಗುವುದರ ಜತೆಗೆ ನಗರವಾಸಿಗಳಿಗೆ ವಿವಿಧ ಸೌಲಭ್ಯಗಳು ದೊರೆಯುತ್ತಿವೆ. ಇದೀಗ ಅದರ ಮುಂದುವರಿದ ಭಾಗವಾಗಿ ಸ್ಮಾರ್ಟ್ ಸಿಟಿ ಯೋಜನೆಯಡಿ ‘ಒನ್ ಟಚ್ ಮಂಗಳೂರು’ (ಒಟಿಎಂ) ಆ್ಯಪ್ ಅಭಿವೃದ್ಧಿಪಡಿಸಲಾಗಿದ್ದು, ಶೀಘ್ರ ಸಾರ್ವಜನಿಕರ ಉಪಯೋಗಕ್ಕೆ ಲಭ್ಯವಾಗಲಿದೆ.

ನಗರದಲ್ಲಿ ಸಾರಿಗೆ ಸೇವೆ, ಪ್ರವಾಸೋದ್ಯಮ, ವಾಯು ಗುಣಮಟ್ಟ, ನೀರು ಸರಬರಾಜು, ತ್ಯಾಜ್ಯ ವಿಲೇವಾರಿ ಸಹಿತ ಹಲವು ಮಾಹಿತಿ, ಸೌಲಭ್ಯ ಆ್ಯಪ್ ಒಳಗೊಂಡಿದೆ. ಸಾರ್ವಜನಿಕರು ಬೆರಳ ತುದಿಯಲ್ಲೇ ಸಮಗ್ರ ಮಂಗಳೂರನ್ನು ತಿಳಿಯಬಹುದು. ನಗರವಾಸಿಗಳಿಗೆ ಸ್ಮಾರ್ಟ್ ಸೇವೆ ಒದಗಿಸುವ ಯೋಜನೆಯ ಭಾಗವಾಗಿ ಆ್ಯಪ್ ಸಿದ್ಧಪಡಿಸಲಾಗಿದೆ.

ಆ್ಯಪ್‌ನಲ್ಲಿ ಏನೆಲ್ಲ ಇದೆ: ಮಹಾನಗರ ಪಾಲಿಕೆ, ಆರ್‌ಟಿಒ, ಮೆಸ್ಕಾಂ, ಮಂಗಳೂರು ನಗರ ಪೊಲೀಸ್, ರೈಲ್ವೆ ಸೇರಿದಂತೆ ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ಆನ್‌ಲೈನ್ ಸೇವೆಗಳನ್ನು ಒಟಿಎಂ ಆ್ಯಪ್‌ನಲ್ಲಿ ಪಡೆಯಲು ಅವಕಾಶವಿದೆ. ಸಾರ್ವಜನಿಕರಿಗೆ ನಗರ ಸಾರಿಗೆ ಕುರಿತ ಮಾಹಿತಿಗಾಗಿ ಅಟೊಮ್ಯಾಟಿಕ್ ವೆಹಿಕಲ್ ಲೊಕೇಟರ್ ಸಿಸ್ಟಮ್(ಎವಿಎಲ್‌ಎಸ್) ಇದೆ. ಜಿಪಿಎಸ್ ಮೂಲಕ ಬಸ್ ಪ್ರಸ್ತುತ ಇರುವ ಜಾಗ, ವೇಗ ಮತ್ತು ತಲುಪುವ ಸಮಯ ಆ್ಯಪ್ ತಿಳಿಸುತ್ತದೆ. ಘನ ತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿ ಪಾಲಿಕೆ ಅಧಿಕಾರಿಗಳು ವಿಲೇವಾರಿ ವಾಹನದ ಮಾಹಿತಿ ಪಡೆಯಬಹುದಾಗಿದೆ. ಸಾರ್ವಜನಿಕರಿಗೆ ದೂರುಗಳಿದ್ದರೂ ಆ್ಯಪ್ ಮೂಲಕ ದಾಖಲಿಸಬಹುದು. ಪ್ರಥಮ ಹಂತದಲ್ಲಿ ಮನೆ ಮನೆ ಸಂಗ್ರಹ, ದ್ವಿತೀಯ ಹಂತದಲ್ಲಿ ಸಣ್ಣ ವಾಹನದಿಂದ ದೊಡ್ಡ ಟ್ರಕ್‌ಗೆ ತ್ಯಾಜ್ಯ ವರ್ಗಾವಣೆ, ಅಲ್ಲಿಂದ ಯಾರ್ಡ್‌ಗೆ ಸಾಗಾಟದ ಸಂಪೂರ್ಣ ಚಿತ್ರಣ ಲಭ್ಯವಾಗಲಿದೆ. ವಿಪತ್ತು ನಿರ್ವಹಣೆ ಮತ್ತು ತುರ್ತು ಸ್ಪಂದನೆಗೆ ಸಂಬಂಧಿಸಿ, ಸಹಾಯವಾಣಿಯ ಸಂಪರ್ಕ, ಪೊಲೀಸ್ ಠಾಣೆ, ಅಗ್ನಿ ಶಾಮಕ ದಳ ಠಾಣೆ, ಆಸ್ಪತ್ರೆಗಳ ದೂರವಾಣಿ ಸಂಖ್ಯೆ ಒನ್ ಟಚ್‌ನಲ್ಲಿ ದೊರೆಯಲಿದೆ. ಪ್ರವಾಸೋದ್ಯಮಕ್ಕೆ ಸಂಬಂಧಿಸಿ ನಗರದ ಪ್ರವಾಸಿ ತಾಣಗಳ ಮಾಹಿತಿ, ತಲುಪುವ ಬಗೆಯನ್ನೂ ವಿವರಿಸಲಾಗಿದೆ.

ರಿಜಿಸ್ಟರ್ ಆದ್ರೆ ಸಾಕು: ಮಂಗಳೂರಿನ ನಾಗರಿಕರು, ನಗರಕ್ಕೆ ಬರುವ ಪ್ರವಾಸಿಗರು ಈ ಆ್ಯಪ್‌ಗೆ ಲಾಗಿನ್ ಆಗಬಹುದು. ಇ-ಮೇಲ್ ಐಡಿ, ಮೊಬೈಲ್ ನಂಬರ್, ಪಾಸ್‌ವರ್ಡ್ ಕ್ರಿಯೇಟ್ ಮಾಡಿ, ಅಕೌಂಟ್ ರಿಜಿಸ್ಟರ್ ಮಾಡಬಹುದು. ಆ್ಯಪ್ ಬಿಡುಗಡೆಯಾದ ಬಳಿಕ ಪ್ಲೇಸ್ಟೋರ್‌ನಲ್ಲಿ ಲಭ್ಯವಾಗಲಿದೆ. ಮುಂದಕ್ಕೆ ಹಂತಹಂತವಾಗಿ ಆ್ಯಪ್ ಅಪ್ಡೇಡ್ ಆಗುವ ಮೂಲಕ ಹೊಸ ಹೊಸ ವಿಚಾರಗಳನ್ನು ಒಳಗೊಳ್ಳಲಿದೆ.

ವಾಯು ಗುಣಮಟ್ಟ ಮಾಹಿತಿ: ಆ್ಯಪ್‌ನಲ್ಲಿ ನಗರದ ವಿವಿಧೆಡೆಯ ವಾಯು ಗುಣಮಟ್ಟದ ಮಾಹಿತಿಯನ್ನೂ ಪಡೆಯಬಹುದಾಗಿದೆ. ಅದಕ್ಕಾಗಿ ಈಗಾಗಲೇ ಸ್ಮಾರ್ಟ್ ಸಿಟಿಯಿಂದ ನಗರದ 5 ಕಡೆಗಳಲ್ಲಿ ಮಾಪನ ಯಂತ್ರಗಳನ್ನು ಅಳವಡಿಸಲಾಗಿದೆ. ಲಾಲ್‌ಭಾಗ್ ಎಂಸಿಸಿ ಕಟ್ಟಡ, ಹಂಪನಕಟ್ಟೆ ಪುರಭವನ, ಅಂಬೇಡ್ಕರ್ ವೃತ್ತದ ಬಳಿ, ಬೋಳಾರ ಬಿಇಒ ಕಚೇರಿ, ಬಂದರ್‌ನ ಕ್ರೆಸೆಂಟ್ ಶಾಲೆಯಲ್ಲಿ ಮಾಪನ ಯಂತ್ರ ಅಳವಡಿಸಲಾಗಿದೆ. ಆಯಾ ಪ್ರದೇಶದಲ್ಲಿ ವಾಯು ಗುಣಮಟ್ಟ ಹೇಗಿದೆ ಎಂದು ಮೊಬೈಲ್ ಮೂಲಕವೇ ತಿಳಿದುಕೊಳ್ಳಬಹುದು.

ಮಂಗಳೂರು ನಗರಕ್ಕೆ ಸಂಬಂಧಿಸಿದ ವಿವಿಧ ಮಾಹಿತಿಗಳನ್ನೊಳಗೊಂಡ ಒಟಿಎಂ ಆ್ಯಪ್ ಅಭಿವೃದ್ಧಿ ಪಡಿಸಲಾಗಿದ್ದು, ಬಿಡುಗಡೆಗೆ ಸಿದ್ಧವಾಗಿದೆ. ಸದ್ಯ ವಿಧಾನ ಪರಿಷತ್ ಚುನಾವಣೆ ನೀತಿ ಸಂಹಿತೆ ಇರುವುದರಿಂದ, ಮುಂದೂಡಲಾಗಿದೆ. ನೀತಿ ಸಂಹಿತೆ ತೆರವಾದ ತಕ್ಷಣ ಆ್ಯಪ್ ಬಿಡುಗಡೆ ಮಾಡಲಾಗುವುದು. ಅರುಣ್ ಪ್ರಭಾ ಕೆ.ಎಸ್. ಜನರಲ್ ಮ್ಯಾನೇಜರ್, ಸ್ಮಾರ್ಟ್ ಸಿಟಿ ಲಿ.