ಆರ್.ಕೃಷ್ಣ ಮೈಸೂರು: ನಕಲಿ ನೋಂದಣಿ, ಬೋಗಸ್ ವ್ಯಕ್ತಿಗಳಿಗೆ ಕಡಿವಾಣ ಹಾಕಲು ಮುಂದಾಗಿರುವ ರಾಜ್ಯ ಸರ್ಕಾರ, ಯಾವುದೇ ಆಸ್ತಿ ನೋಂದಣಿಗೆ ಇನ್ನು ಮುಂದೆ ‘ಒನ್ ಟೈಮ್ ಪಾಸ್‌ವರ್ಡ್’ (ಒಟಿಪಿ) ವ್ಯವಸ್ಥೆ ಜಾರಿಗೊಳಿಸಿದೆ.
ರಾಜ್ಯಾದ್ಯಂತ ಈ ವ್ಯವಸ್ಥೆಯನ್ನು ಹಂತ, ಹಂತವಾಗಿ ಜಾರಿಗೊಳಿಸುತ್ತಿದ್ದು, ಫೆ.4ರಿಂದ ಜಿಲ್ಲೆಯ ಉಪ ನೋಂದಣಾಧಿಕಾರಿ ಕಚೇರಿಗಳಲ್ಲಿ ಅನುಷ್ಠಾನಗೊಳಿಸಲಾಗಿದೆ.
ಈ ವ್ಯವಸ್ಥೆಯಿಂದಾಗಿ ಇನ್ನು ಮುಂದೆ ಯಾರೇ ಆಗಲಿ ಆಸ್ತಿ ನೋಂದಣಿ ಮಾಡಿಸಲು ಚಾಲ್ತಿಯಲ್ಲಿರುವ ತಮ್ಮ ಮೊಬೈಲ್‌ಅನ್ನು ಕಡ್ಡಾಯವಾಗಿ ಜತೆಯಲ್ಲಿ ತೆಗೆದುಕೊಂಡು ಹೋಗಬೇಕಾಗಿದೆ. ಅಷ್ಟೇ ಅಲ್ಲ, ಆಸ್ತಿ ಮಾರುವವರು, ಕೊಳ್ಳುವವರು, ನೋಂದಣಿ ಸಮಯದಲ್ಲಿ ಆಸ್ತಿ ಪತ್ರಕ್ಕೆ ಸಾಕ್ಷಿ ಹಾಕುವ ಸಾಕ್ಷಿದಾರರು ಮೊಬೈಲ್‌ಅನ್ನು ತಮ್ಮೊಂದಿಗೆ ಇಟ್ಟುಕೊಂಡಿರಬೇಕು.
ನೋಂದಣಿ ಪ್ರಕ್ರಿಯೆ ಆರಂಭಗೊಂಡು ಕಂಪ್ಯೂಟರ್‌ನಲ್ಲಿ ದಾಖಲೆಗಳನ್ನು ದಾಖಲಿಸಿದ ಬಳಿಕ ಮಾರುವವರು, ಕೊಳ್ಳುವವರು, ಸಾಕ್ಷಿದಾರರ ಮೊಬೈಲ್‌ಗಳಿಗೆ ಪ್ರತ್ಯೇಕ ಒಟಿಪಿ ನಂಬರ್ ಎಸ್‌ಎಂಎಸ್ ಮೂಲಕ ರವಾನೆಯಾಗಲಿದೆ. ಆ ಒಟಿಪಿಯನ್ನು ಕಂಪ್ಯೂಟರ್‌ನಲ್ಲಿ ದಾಖಲಿಸಿದರೆ ಮಾತ್ರ ಮುಂದಿನ ನೋಂದಣಿ ಪ್ರಕ್ರಿಯೆ ಜರುಗಲಿದೆ. ಇಲ್ಲದಿದ್ದರೆ ನೋಂದಣಿ ಕಾರ್ಯ ಪೂರ್ಣಗೊಳ್ಳುವುದಿಲ್ಲ.
‘ನಕಲಿದಾರರಿಗೆ ಕಡಿವಾಣ’: ಜಮೀನು, ನಿವೇಶನಕ್ಕೆ ಬೆಲೆ ಏರಿಕೆಯಾಗುತ್ತಿರುವಂತೆಯೇ ವಂಚನೆ, ಮೋಸ ಮಾಡುವ ಜಾಲವೂ ವ್ಯವಸ್ಥಿತವಾಗಿ ಹೆಚ್ಚಾಗುತ್ತಿತ್ತು. ಕೆಲವರು ಒಂದೇ ನಿವೇಶನವನ್ನು ಇಬ್ಬರು, ಮೂವರಿಗೆ ಮಾರಾಟ ಮಾಡುವುದು, ಅಲ್ಲದೆ, ನೋಂದಣಿ ಮಾಡಿಸಿದ ಬಳಿಕ ನಾಪತ್ತೆಯಾಗುತ್ತಿರುವ ಪ್ರಕರಣಗಳು ಇರುತ್ತಿದ್ದವು. ಆಗ ನಿವೇಶನ ಮಾರಿದವರು ಅಥವಾ ಕೊಳ್ಳುವವರು ವಂಚನೆಗೆ ಒಳಗಾಗಿ ವ್ಯಕ್ತಿಗಳನ್ನು ಹುಡುಕಿ ಹೋದರೆ ತಪ್ಪು ವಿಳಾಸ ನೀಡಿರುವುದು ಬೆಳಕಿಗೆ ಬರುತ್ತಿತ್ತು. ಇನ್ನು ಕೆಲವು ಪ್ರಕರಣದಲ್ಲಿ ಆಸ್ತಿ ವ್ಯಾಜ್ಯ ಉಂಟಾಗಿ ನ್ಯಾಯಾಲಯ ಮೆಟ್ಟಿಲು ಏರಿದರೆ ನೋಂದಣಿ ಸಮಯದಲ್ಲಿ ಸಹಿ ಹಾಕಿದ ಸಾಕ್ಷಿದಾರರು ಯಾರು ಎನ್ನುವುದೇ ತಿಳಿಯುತ್ತಿರಲಿಲ್ಲ. ಇದರಿಂದ ನಿಜವಾದ ಫಲಾನುಭವಿಗಳು ವಂಚನೆಗೆ ಒಳಗಾಗುವ ಸಾಧ್ಯತೆ ಹೆಚ್ಚಾಗಿತ್ತು.
ನೋಂದಣಿ ಸಮಯದಲ್ಲಿ ಹೆಬ್ಬೆಟ್ಟು ಗುರುತು ಹಾಕುವ ಪ್ರಕ್ರಿಯೆ ಇದೆಯಾದರೂ, ತಪ್ಪು ವಿಳಾಸ ನೀಡಿದರೆ ಆ ಹೆಬ್ಬೆಟ್ಟು ಹಾಕಿದವರು ಯಾರು ಎನ್ನುವುದನ್ನು ಪತ್ತೆ ಮಾಡಲು ಬಹುತೇಕ ಪ್ರಕರಣಗಳಲ್ಲಿ ಪೊಲೀಸರಿಗೂ ಸವಾಲಿನ ಕೆಲಸವಾಗಿತ್ತು.
ಹಾಗಾಗಿ ನೋಂದಣಿ ಮಾಡುವಾಗ ಆಗುವ ಬೋಗಸ್ ತಡೆಯಲು ಈಗ ಮೊಬೈಲ್ ಸಂಖ್ಯೆ ನಮೂದಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಜತೆಗೆ ಕೆಲವರು ಮೊಬೈಲ್ ಸಂಖ್ಯೆಯನ್ನು ತಪ್ಪು ನೀಡುವ ಸಾಧ್ಯತೆ ಇರುವುದರಿಂದ ಮೊಬೈಲ್ ಸಂಖ್ಯೆ, ಅವರ ವಿಳಾಸವನ್ನು ಖಾತ್ರಿ ಪಡಿಸಿಕೊಳ್ಳಲು ಒಟಿಪಿ ವ್ಯವಸ್ಥೆಯನ್ನು ಅಳವಡಿಸಲಾಗಿದೆ.
ನೋಂದಣಿ ಸಮಯದಲ್ಲಿ ಹಾಲಿ ಇರುವ ‘ಕಾವೇರಿ’ ಸಾಫ್ಟ್‌ವೇರ್ ವ್ಯವಸ್ಥೆಗೇ ಹೆಚ್ಚುವರಿಯಾಗಿ ಮೊಬೈಲ್ ಸಂಖ್ಯೆ ನಮೂದಿಸಲು ಅವಕಾಶ ಮಾಡಿಕೊಟ್ಟಿರುವುದರಿಂದ ಇಲಾಖೆಗೆ ಹೆಚ್ಚಿನ ಹೊರೆ ಏನೂ ಅಗಿಲ್ಲ.
ಎಲ್ಲ ಕಚೇರಿಗಳಲ್ಲಿ ಜಾರಿ ನೂತನ ನೋಂದಣಿ ಒಟಿಪಿ ವ್ಯವಸ್ಥೆ ಜಿಲ್ಲೆಯ ಎಲ್ಲ 14 ಉಪ ನೋಂದಣಾಧಿಕಾರಿ ಕಚೇರಿಗಳಲ್ಲಿಯೂ ಜಾರಿಗೊಳಿಸಲಾಗಿದೆ. ಮೈಸೂರಿನ ಪಶ್ಚಿಮ ಕಚೇರಿ ಸೇರಿದಂತೆ ಹಲವು ಕಚೇರಿಗಳಲ್ಲಿ ಫೆ.5ರಿಂದ ಕಾರ್ಯಾಚರಣೆ ನಡೆಯುತ್ತಿದೆ. ಇನ್ನು ಕೆಲವು ಕಚೇರಿಗಳಲ್ಲಿ ಸಾಫ್ಟ್‌ವೇರ್ ಅಪ್‌ಡೇಟ್ ಮಾಡಿ ಮೊಬೈಲ್ ಸಂಖ್ಯೆ ನಮೂದಿಸಲು ಅವಕಾಶ ನೀಡುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಇನ್ನೊಂದೆರಡು ದಿನಗಳಲ್ಲಿ ಎಲ್ಲ ಕಚೇರಿಗಳು ನೂತನ ವ್ಯವಸ್ಥೆ ಅಳವಡಿಸಿಕೊಂಡು ಸೋಮವಾರದಿಂದ ಕಡ್ಡಾಯವಾಗಿ ಮೊಬೈಲ್ ಸಂಖ್ಯೆ ನಮೂದಿಸುವ ವ್ಯವಸ್ಥೆ ಜಿಲ್ಲೆಯ ಎಲ್ಲೆಡೆ ಚಾಲ್ತಿಗೊಳ್ಳಲಿದೆ.
ಎಸ್‌ಎಂಎಸ್ ಅಲರ್ಟ್: ನೋಂದಣಿ ವೇಳೆ ಮೊಬೈಲ್ ಸಂಖ್ಯೆ ದಾಖಲಿಸುವುದರಿಂದ ತಮ್ಮ ಆಸ್ತಿ ನೋಂದಣಿ ಯಾವ ಹಂತದಲ್ಲಿದೆ, ಏನಾಗಿದೆ ಎನ್ನುವ ಮಾಹಿತಿ ಈಗ ಆಸ್ತಿ ಕೊಳ್ಳುವವರ ಮೊಬೈಲ್ ಸಂಖ್ಯೆಗೆ ಎಸ್‌ಎಂಎಸ್ ಮೂಲಕ ರವಾನೆಯಾಗುತ್ತಿದೆ.
ದಾಖಲೆಗಳು ಸ್ಕಾೃನ್ ಅಗಿ, ನೋಂದಣಿ ಕಾರ್ಯ ಪೂರ್ಣಗೊಂಡ ಬಳಿಕ ‘ಭೂಮಿ’ ಸಾಫ್ಟ್‌ವೇರ್, ಗ್ರಾಮ ಪಂಚಾಯಿತಿಯ ಆರ್‌ಡಿಪಿಆರ್‌ಗೆ ರವಾನೆಯಾಗುತ್ತದೆ. ಹೀಗೆ ರವಾನೆಯಾದ ನೋಂದಣಿ ಸಂಖ್ಯೆ ಕೂಡ ಆಸ್ತಿ ಕೊಂಡವರ ಮೊಬೈಲ್‌ಗೆ ಎಸ್‌ಎಂಎಸ್ ಬರುವುದರಿಂದ ಆ ಸಂಖ್ಯೆಯನ್ನು ಸಂಬಂಧಪಟ್ಟ ಮಾಹಿತಿ ಕೇಂದ್ರ, ಇಲ್ಲವೆ ಗ್ರಾಮ ಪಂಚಾಯಿತಿಗೆ ನೀಡಿ ತಮ್ಮ ದಾಖಲೆಯನ್ನು ಪಡೆದುಕೊಳ್ಳಲು ಸುಲಭವಾಗುತ್ತದೆ. ಹಿಂದೆ ತಮ್ಮ ದಾಖಲೆ, ನೋಂದಣಿ ಸಂಖ್ಯೆ ಏನು ಎಂದು ಹುಡುಕಾಟ ನಡೆಸಿ ಮಧ್ಯವರ್ತಿಗಳ ಮೊರೆ ಹೋಗಬೇಕಾಗಿತ್ತು.
ಮಧ್ಯವರ್ತಿಗಳಿಗೆ ಈಗ ಹಿಂಜರಿಕೆ ಶುರು: ಆಸ್ತಿ ಮಾರುವವರು ಹಾಗೂ ಕೊಳ್ಳುವವರು ಹೆಚ್ಚಾಗಿ ಮಧ್ಯವರ್ತಿಗಳನ್ನೇ ಆಶ್ರಯಿಸುವುದು ನೋಂದಣಿ ಸಮಯದಲ್ಲಿ ಸಾಮಾನ್ಯವಾಗಿದೆ. ಬಹುತೇಕ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಸಿಬ್ಬಂದಿ ಕೊರತೆ ಇರುವುದರಿಂದ ಸ್ಟಾಂಪ್‌ವೆಂಡರ್ ಹಾಗೂ ಅವರ ಕಡೆಯವರೇ ಎಲ್ಲ ಪ್ರಕ್ರಿಯೆ ಪೂರ್ಣಗೊಳಿಸುತ್ತಿದ್ದರು. ಅಲ್ಲದೆ ಇವರೇ ಬಹುತೇಕ ಪ್ರಕರಣಗಳಲ್ಲಿ ತಾವೇ ಸಾಕ್ಷಿದಾರರಾಗಿಯೂ ಸಹಿ ಮಾಡುವುದು ವಾಡಿಕೆಯಾಗಿತ್ತು.
ಆದರೆ ಮೊಬೈಲ್ ಸಂಖ್ಯೆ ನಮೂದಿಸುವುದು ಕಡ್ಡಾಯ ಮಾಡಿರುವುದರಿಂದ ಮುಂದೆ ಏನಾದರೂ ವಿವಾದ ಉಂಟಾದರೆ ತಾವು ಸಾಕ್ಷಿ ಹೇಳಲು ನ್ಯಾಯಾಲಯಕ್ಕೆ ಅಲೆಯಬೇಕಾಗುತ್ತದೆ. ನೋಂದಣಿಯಾದವರಿಗೆಲ್ಲಾ ಸಾಕ್ಷಿದಾರರಾಗಿ ಸಹಿ ಮಾಡಿದರೆ ತಮ್ಮದೇ ಮೊಬೈಲ್ ಸಂಖ್ಯೆ ದಾಖಲಾಗಿ ಮುಂದೆ ತೊಂದರೆ ಉಂಟಾಗಲಿದೆ ಎನ್ನುವ ಹಿಂಜರಿಕೆ ಮಧ್ಯವರ್ತಿಗಳಲ್ಲಿ ಶುರುವಾಗಿದೆ.
ಮಧ್ಯವರ್ತಿಗಳಿಗೆ ಈ ತೊಂದರೆಯಾದರೆ, ಆಸ್ತಿ ಕೊಳ್ಳುವವರು, ಮಾರುವವರು ತಮಗೆ ಚಿರಪರಿಚಿತರನ್ನು ನೋಂದಣಿ ಸಮಯದಲ್ಲಿ ಸಾಕ್ಷಿದಾರರನ್ನಾಗಿ ಮಾಡಲು ಕರೆತರಬೇಕಾದ ಪರಿಸ್ಥಿತಿ ಉಂಟಾಗಿದೆ.
ಮೊಬೈಲ್ ಸಂಖ್ಯೆ ದಾಖಲು ಮಾಡುವುದರಿಂದ ಜನರಿಗೆ ಹೆಚ್ಚಿನ ಅನುಕೂಲವಾಗುತ್ತದೆ. ಸಾಕ್ಷಿದಾರರು ಯಾರು, ಬರೆದುಕೊಟ್ಟವರು ಯಾರು, ಕೊಂಡವರು ಯಾರು ಎನ್ನುವ ಸ್ಪಷ್ಟ ಮಾಹಿತಿ ಲಭ್ಯವಾಗಲಿದೆ. ಹೀಗಾಗಿ ವಂಚನೆ ಪ್ರಕರಣಕ್ಕೆ ಕಡಿವಾಣ ಬೀಳಲಿದೆ. ಮೊಬೈಲ್ ಕೊಳ್ಳುವಾಗ ಆಧಾರ್, ಮತದಾರರ ಗುರುತಿನ ಚೀಟಿ ಸೇರಿದಂತೆ ಇನ್ನಿತರ ದಾಖಲೆ ನೀಡುವುದರಿಂದ ಮೊಬೈಲ್ ಸಂಖ್ಯೆ ಮೂಲಕ ವಿಳಾಸವನ್ನು ಸುಲಭವಾಗಿ ಪತ್ತೆ ಮಾಡಬಹುದು. ವಿಜಯಲಕ್ಷ್ಮೀ ಆರ್. ಇನಾಂದರ್ ಜಿಲ್ಲಾ ಉಪನೊಂದಣಾಧಿಕಾರಿ