ಸುಗುಣೇಂದ್ರ ಶ್ರೀಗಳ ವಿಶ್ವಗೀತಾ ಪರ್ಯಾಯದ ವಿಶೇಷ
ರಾಜಾಂಗಣದಲ್ಲಿ ನಿತ್ಯ ವಿವಿಧ ಕಲೆಗಳ ಅನಾವರಣ
ವಿಶೇಷ ಕಾರ್ಯಯೋಜನೆಗಳ ಮೂಲಕವೇ ನಾಡಿನ ಗಮನ ಸೆಳೆಯುವ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಶ್ರೀಪಾದರು, ತಮ್ಮ ಚತುರ್ಥ ಪರ್ಯಾಯವನ್ನೂ ಸಹ ವಿಶಿಷ್ಟವಾಗಿಯೇ ಆಚರಿಸುತ್ತಿದ್ದಾರೆ. ಕೋಟಿ ಗೀತಾ ಲೇಖನ ಅಭಿಯಾನದ ಮೂಲಕ ವಿಶ್ವಗೀತಾ ಪರ್ಯಾಯವನ್ನು ಮುನ್ನಡೆಸಿದ್ದಾರೆ.
ಪರ್ಯಾಯದಲ್ಲಿ ನಿತ್ಯವೂ ಸಂಭ್ರಮವಿರಬೇಕು, ಅದನ್ನು ಕೃಷ್ಣನ ಭಕ್ತರೆಲ್ಲರೂ ನೋಡಿ ಆನಂದಗೊಳ್ಳಬೇಕೆಂಬ ಸಂಕಲ್ಪದಿಂದ ರಾಜಾಂಗಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯುತ್ತಿದೆ. ಪರ್ಯಾಯದ ಆರಂಭದಿಂದ ಇಲ್ಲಿಯವರೆಗೆ 1 ಸಾವಿರ ಸಂಖ್ಯೆಯಲ್ಲಿ ಕಾರ್ಯಕ್ರಮಮ ನಡೆದಿದ್ದು, ಪುತ್ತಿಗೆ ಮಠ ಹೊಸ ದಾಖಲೆ ನಿರ್ಮಿಸಿದೆ.
ನಿತ್ಯವೂ ಜ್ಞಾನಯಜ್ಞ
ಶ್ರೀಗಳು ಪರ್ಯಾಯ ಸರ್ವಜ್ಞ ಪೀಠವೇರಿ ಜುಲೈ 13ಕ್ಕೆ 542 ದಿನ ಪೂರೈಸಿದ್ದು ನಿತ್ಯವೂ ಎರಡರಂತೆ ಸಾಂಸ್ಕೃತಿಕ ಕಾರ್ಯಕ್ರಮ ನಡೆದಿದೆ. ಇದಲ್ಲದೆ, ಸುಗುಣೇಂದ್ರ ಶ್ರೀ, ಕಿರಿಯ ಯತಿ ಸುಶ್ರೀಂದ್ರ ಶ್ರೀ ಹಾಗೂ ವಿವಿಧ ವಿದ್ವಾಂಸರುಗಳು ರಾಮಾಯಣ, ಮಹಾಭಾರತ, ಭಗವದ್ಗೀತೆ, ಭಾಗವತ ಮುಂತಾದ ಗ್ರಂಥಗಳ ಜ್ಞಾನಯಜ್ಞ ಉಪನ್ಯಾಸದ ಸರಮಾಲೆಯನ್ನೇ ನಡೆಸಿದ್ದಾರೆ. ಅದೂ ಸಹ 1 ಸಾವಿರ ಕಾರ್ಯಕ್ರಮ ಆಗಿರುವುದು ಇನ್ನೊಂದು ವಿಶೇಷ.
ಪ್ರತಿಭೆಗಳಿಗೆ ವೇದಿಕೆ
ಯುವ ಕಲಾವಿದರಿಗೆ ಪ್ರತಿಭೆ ತೋರಲು ಶ್ರೀಕೃಷ್ಣ ಮಠದ ರಾಜಾಂಗಣ ರಾಜಾಶ್ರಯ ನೀಡಿದೆ. ಅರಮನೆ ಮಾದರಿಯಲ್ಲಿ ನಿರ್ಮಿಸಲಾಗಿರುವ ರಾಜ ದರ್ಬಾರ್ ಹಾಗೂ ವೇದಿಕೆಯ ಆರಂಭದಿಂದ ಕೊನೆಯವರೆಗೆ ಸ್ಥಾಪಿಸಿರುವ ದಶಾವತಾರದ ಪ್ರತಿಮೆಗಳ ನಡುವೆ ಪ್ರದರ್ಶನ ನೀಡುವುದು ಕಲಾವಿದರಿಗೆ ಹೆಮ್ಮೆಯಾಗಿದೆ. ಕೃಷ್ಣನ ಸನ್ನಧಿಯ ಈ ಬೃಹತ್ ವೇದಿಕೆಯಲ್ಲಿ ಸೇವೆ ನೀಡಿದ ಕಲಾವಿದರೂ ಸಹ ಉಜ್ವಲ ಭವಿಷ್ಯ ಹೊಂದುತ್ತಾರೆ ಎನ್ನುವುದು ಮಠದ ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಚಾಲಕ ರಮೇಶ ಭಟ್ ಅನಿಸಿಕೆ.
ಕೃಷ್ಣನಿಗೆ ನಿತ್ಯವೂ ವಿವಿಧ ಅಲಂಕಾರ
ದೇಶಾದ್ಯಂತ ಶ್ರೀಕೃಷ್ಣನ ದರ್ಶನಕ್ಕೆ ಬರುವ ಯಾತ್ರಿಕರಿಗೆ ರಾಜಾಂಗಣದಲ್ಲಿ ನಿರ್ಮಿಸಿರುವ ದರ್ಬಾರ್ ವಿಶಿಷ್ಟ ಅನುಭವ ನೀಡುತ್ತಿದೆ. ಬೃಹತ್ ವೇದಿಕೆ ಕಂಡು ಮೂಕವಿಸ್ಮಿತರಾಗುತ್ತಾರೆ. ಈ ಬಾರಿಯ ಪರ್ಯಾಯದ ಇನ್ನೊಂದು ವಿಶೇಷವೆಂದರೆ ಶ್ರೀಕೃಷ್ಣನ ಅಲಂಕಾರ. ಅಲಂಕಾರಪ್ರಿಯನಾದ ಶ್ರೀಕೃಷ್ಣನಿಗೆ ಪುತ್ತಿಗೆ ಕಿರಿಯ ಯತಿಗಳಾದ ಸುಶ್ರೀಂದ್ರ ತೀರ್ಥ ಶ್ರೀಪಾದರು ನಿತ್ಯವೂ ಒಂದೊಂದು ಪ್ರಕಾರದಲ್ಲಿ ಅಲಂಕಾರ ಮಾಡಿದ್ದಾರೆ. ಈವರೆಗೆ 542 ರೀತಿಯಲ್ಲಿ ಅಲಂಕಾರಗೊಂಡು ಶ್ರೀಪಾದದ್ವಯರಿಂದ ಕೃಷ್ಣ ಪೂಜೆಗೊಂಡಿದ್ದಾನೆ. ಇದು ಸುಗುಣೇಂದ್ರ ಶ್ರೀಗಳು ಶ್ರೀಕೃಷ್ಣ-ಮುಖ್ಯಪ್ರಾಣ ದೇವರಲ್ಲಿ ಇಟ್ಟಿರುವ ಅಚಲ ಭಕ್ತಿ, ನಂಬಿಕೆ, ದೃಢ ಸಂಕಲ್ಪ ಹಾಗೂ ಇಚ್ಛಾಶಕ್ತಿಯ ಫಲವಾಗಿದೆ ಎನ್ನುತ್ತಾರೆ ಮಠದ ಅಂತಾರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನ ಆಚಾರ್ಯ.
ಆಯೋಜನೆಗೊಂಡ ಕಲೆಗಳ ಮಾಹಿತಿ
ಕಲಾ ಪ್ರಕಾರ ಪ್ರದರ್ಶನ ಸಂಖ್ಯೆ
ಪೊಡವಿಗೊಡೆಯ, ಅನ್ನಬ್ರಹ್ಮನಾದ ಶ್ರೀಕೃಷ್ಣನು ಜ್ಞಾನ ಬ್ರಹ್ಮ ಹಾಗೂ ಕಲಾ ಬ್ರಹ್ಮನಾಗಿ ತನ್ನ ಭಕ್ತರನ್ನು ಅನುಗ್ರಹಿಸುತ್ತಿದ್ದಾನೆ. ಆತನ ಸನ್ನಿಧಿಯಲ್ಲಿ ನಮ್ಮ ಚತುರ್ಥ ಪರ್ಯಾಯವನ್ನು ಸ್ಮರಣೀಯವಾಗಿಸಲು ನಿತ್ಯವೂ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ. ಇದು ಸಂಭ್ರಮಕ್ಕಷ್ಟೇ ಸೀಮಿತವಾಗದೆ ಕಲೆ-ಕಲಾವಿದರ ರಕ್ಷಣೆ, ಯುವ ಪೀಳಿಗೆಗೆ ನಮ್ಮ ಸಂಸ್ಕೃತಿಯನ್ನು ತಿಳಿಸುವುದು ಹಾಗೂ ಬೆಳೆಸುವುದು ಪ್ರಮುಖ ಉದ್ದೇಶವಾಗಿದೆ. ಸನಾತನ ಧರ್ಮ, ಪರಂಪರೆಯನ್ನು ಪ್ರಜ್ವಲಿಸುವಂತೆ ಮಾಡುವುದು ನಮ್ಮ ಸಂಕಲ್ಪ, ಮಹದಾಸೆ ಕೂಡ.
|ಸುಗುಣೇಂದ್ರ ತೀರ್ಥ ಶ್ರೀಪಾದರು. ಪುತ್ತಿಗೆ ಮಠ