ಮೈಸೂರು: ಸೆನ್ಸೇಷನ್ ಸುದ್ದಿಗಳನ್ನು ನೀಡುವ ಧಾವಂತದಲ್ಲಿ ಮಾಧ್ಯಮದವರು ಸುಳ್ಳು ಹೇಳಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿವಿಮಾತು ಹೇಳಿದರು.
ಮೈಸೂರು ಜಿಲ್ಲಾ ಪತ್ರಿಕಾ ಛಾಯಾಗ್ರಾಹಕರ ಸಂಘದಿಂದ ಮಾನಸಗಂಗೋತ್ರಿಯ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ರಾಜ್ಯ ಮಟ್ಟದ ಸುದ್ದಿ ಛಾಯಾಚಿತ್ರ ಸ್ಪರ್ಧೆ ವಿಜೇತರಿಗೆ ಮುಖ್ಯಮಂತ್ರಿ ಕಪ್ ಪ್ರಶಸ್ತಿ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಮಾಜಕ್ಕೆ ಉಪಯುಕ್ತವಾಗುವ ಸುದ್ದಿಗಳನ್ನು ಮಾಡಿ. ಮಾಧ್ಯಮವು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ 4ನೇ ಆಧಾರ ಸ್ತಂಭ. ಇಂತಹ ಜವಾಬ್ದಾರಿ ಸ್ಥಾನದಲ್ಲಿ ಇರುವವರು ಅಸತ್ಯ ಹೇಳಬಾರದು ಎಂದು ಹೇಳಿದರು.
ಇತ್ತಿಚೆಗೆ ಊಹಾಪೋಹದ ಸುದ್ದಿ ಜಾಸ್ತಿ ಆಗಿದೆ. ಇದು ಪತ್ರಿಕೋದ್ಯಮದ ಧ್ಯೇಯ ಅಲ್ಲ. ಜನ ನಿಮ್ಮ ಮೇಲೆ ನಂಬಿಕೆ ಇಟ್ಟಿದ್ದಾರೆ. ಕಷ್ಟ ಬಂದಾಗ ನಿಮ್ಮ ಕಡೆ ನೋಡುತ್ತಾರೆ. ಹೀಗಾಗಿ ಸತ್ಯವನ್ನೇ ಜನರ ಮುಂದೆ ಇಡಬೇಕು ಎಂದು ಹೇಳಿದರು.
ಜಾತಿ ವ್ಯವಸ್ಥೆ ಕಾರಣಕ್ಕೆ ಶೂದ್ರರು ಅಕ್ಷರ ಸಂಸ್ಕೃತಿಯಿಂದ ವಂಚಿತರಾಗಿದ್ದರು. ಸಮಾಜದಲ್ಲಿನ ಅಸಮಾನತೆಗಳ ವಿರುದ್ಧವೂ ಪತ್ರಕರ್ತರು ಧ್ವನಿ ಎತ್ತಬೇಕು. ಮೌಢ್ಯಗಳಿಗೆ ಉತ್ತೇಜನ ನೀಡುವ ಸುದ್ದಿ ಪ್ರಕಟಿಸಬಾರದು ಎಂದರು.
ಒಂದು ಛಾಯಾಚಿತ್ರ ಸಾವಿರ ಪದಗಳಿಗೆ ಸಮ ಎಂಬ ನಾಣ್ಣುಡಿಯೇ ಇದೆ. ಆದರೆ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಬಂದ ಮೇಲೆ ಯಾರು ಚಿತ್ರಗಳನ್ನು ಮತ್ಯಾರಿಗೋ ಜೋಡಿಸುವ ತಂತ್ರ ನಡೆದಿದೆ. ಅಂತಹವುಗಳಿಂದ ದೂರ ಇರಬೇಕು ಎಂದರು.
ವಿಧಾನ ಪರಿಷತ್ ಸದಸ್ಯ ಕೆ.ಶಿವಕುಮಾರ್ ಮಾತನಾಡಿ ಮುಖ್ಯಮಂತ್ರಿಗಳು ತಮ್ಮ ಅಧಿಕಾರ ಅವಧಿಯಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಅನುಕೂಲಕಾರಿಯಾಗಿರುವ ಆರೋಗ್ಯ ವಿಮೆ, ಗ್ರಾಮೀಣ ಪತ್ರಕರ್ತರಿಗೆ ಬಸ್‌ಪಾಸ್ ಯೋಜನೆ ಸೇರಿದಂತೆ ಉಪಯುಕ್ತ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ ಎಂದರು. ಇಂದಿನ ದಿನಗಳಲ್ಲಿ ನ್ಯೂಸ್ ಪ್ರಿಂಟ್ ಬೆಲೆ ಹೆಚ್ಚಳವಾಗಿದ್ದು, ಸಣ್ಣ ಪತ್ರಿಕೆಗಳ ಉಳಿವಿಗಾಗಿ ಅನುಕೂಲಕಾರಿ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಬೇಕು ಎಂದು ಕೋರಿದರು.
ಶಾಸಕ ಹರೀಶ್‌ಗೌಡ, ವಿಧಾನ ಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ, ಮೈಸೂರು ವಿಶ್ವ ವಿದ್ಯಾಲಯದ ಕುಲಪತಿ ಎನ್.ಕೆ.ಲೋಕನಾಥ್, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್, ಸಂಘದ ಅಧ್ಯಕ್ಷ ಪ್ರಗತಿ ಗೋಪಾಲಕೃಷ್ಣ , ಪ್ರಧಾನ ಕಾರ್ಯದರ್ಶಿ ಲಕ್ಷ್ಮೀನಾರಾಯಣ ಯಾದವ್ ಇದ್ದರು.
ಸ್ಪರ್ಧೆ ವಿಜೇತರು :
ಛಾಯಾಚಿತ್ರ ಸ್ಪರ್ಧೆಯಲ್ಲಿ ಬೆಂಗಳೂರಿನ ನ್ಯೂಸ್ ಟ್ರಯಲ್ ಪತ್ರಿಕೆಯ ಬಿ. ಸತೀಶ್ (ಪ್ರ), ಪ್ರಜಾವಾಣಿಯ ಬೆಂಗಳೂರು ಛಾಯಾಗ್ರಾಹಕ ಎಂ.ಎಸ್. ಮಂಜುನಾಥ್ (ದ್ವಿ), ಪಿ.ರಂಜು(ತೃ).
ಪ್ರಜಾವಾಣಿ ಮಂಗಳೂರು ಛಾಯಾಗ್ರಾಹಕ ಎಚ್.ಬಕ್ರುದ್ದೀನ್ ಹಾಗೂ ಸುದ್ದಿ ಸಂಜೆ ಪತ್ರಿಕೆಯ ಎಸ್. ಚರಣ್, ಬಾಗಲಕೋಟೆಯ ಹಳ್ಳಿ ಸಂದೇಶ ಪತ್ರಿಕೆಯ ಇಂದ್ರಕುಮಾರ್ ದಸ್ತೆನವರ ಸಮಾಧಾನಕರ ಬಹುಮಾನ ಪಡೆದರು. ವಿಜಯ ಕರ್ನಾಟಕದ ವಿಜಯಪುರ ಛಾಯಾಗ್ರಾಹಕ ಸುಧೀಂದ್ರ ಕುಲಕರ್ಣಿ ಅವರು ನೇತ್ರರಾಜು ಸ್ಮರಣಾರ್ಥ ನೀಡಿದ ಪ್ರಶಸ್ತಿ ಪಡೆದರು.