ಜಮಖಂಡಿಯ ಸಾಯಿ ನಿಕೇತನ ಪಪೂ ಕಾಲೇಜಿನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕಾನೂನು ಅರಿವು-ನೆರವು ಕಾರ್ಯಕ್ರಮವನ್ನು ಹಿರಿಯ ದಿವಾಣಿ ನ್ಯಾಯಾಧೀಶ ಚಂದ್ರಶೇಖರ ದಿಡ್ಡಿ ಉದ್ಘಾಟಿಸಿದರು. ಕವಿತಾ ಎಸ್. ಉಂಡೋಡಿ, ಎಸ್.ಬಿ. ಕಾಳೆ, ಡಾ.ಟಿ.ಪಿ. ಗಿರಡ್ಡಿ ಮತ್ತಿತರರಿದ್ದರು. 
ಜಿಲ್ಲೆ

ಆಕರ್ಷಣೆಗಳಿಗೆ ಒಳಗಾಗದೆ ಓದಿನ ಕಡೆಗೆ ಗಮನ ಹರಿಸಬೇಕು

Vijayapura - Desk - Gurappa Lokuri

ಜಮಖಂಡಿ: ಪೋಕ್ಸೋ ಕಾಯ್ದೆಯಡಿ ರಾಜೀಸಂಧಾನಕ್ಕೆ ಅವಕಾಶವಿಲ್ಲ. ಅಪ್ರಾಪ್ತ ವಯಸ್ಕರು ಕೊಟ್ಟ ಒಪ್ಪಿಗೆಗೆ ಕಾನೂನಿನಲ್ಲಿ ಮಾನ್ಯತೆ ಇಲ್ಲ ಎಂದು ಹಿರಿಯ ದಿವಾಣಿ ನ್ಯಾಯಾಧೀಶ ಚಂದ್ರಶೇಖರ ದಿಡ್ಡಿ ಹೇಳಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಹಾಗೂ ಪೊಲೀಸ್ ಇಲಾಖೆ ಆಶ್ರಯದಲ್ಲಿ ಸಾಯಿನಿಕೇತನ ಪದವಿಪೂರ್ವ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪ್ರಧಾನ ಹಿರಿಯ ದಿವಾಣಿ ನ್ಯಾಯಾಧೀಶೆ ಕವಿತಾ ಎಸ್. ಉಂಡೋಡಿ ಮಾತನಾಡಿ, ಸಾಮಾಜಿಕ ಜಾಲತಾಣದ ಬಳಕೆ ಬಗ್ಗೆ ಜಾಗೃತಿವಹಿಸಬೇಕು. ಆಕರ್ಷಣೆಗಳಿಗೆ ಒಳಗಾಗದೆ ಓದಿನ ಕಡೆಗೆ ಗಮನ ಹರಿಸಬೇಕೆಂದು ಸಲಹೆ ನೀಡಿದರು.

ವಕೀಲರ ಸಂಘದ ಉಪಾಧ್ಯಕ್ಷ ಎಸ್.ಬಿ. ಕಾಳೆ ವಿಶೇಷ ಉಪನ್ಯಾಸ ನೀಡಿ, ಮೂಢನಂಬಿಕೆ, ಬಡತನ ಹಾಗೂ ಧಾರ್ಮಿಕ ಆಚರಣೆಗಳು ಬಾಲ್ಯವಿವಾಹಕ್ಕೆ ಕಾರಣವಾಗಿವೆ. ಬಾಲ್ಯವಿವಾಹ ಶಿಕ್ಷಾರ್ಹ ಅಪರಾಧವಾಗಿದ್ದು, ಇದನ್ನು ತಡೆಯಲು ಸಹಾಯವಾಣಿ 1098ಗೆ ಕರೆ ಮಾಡಬಹುದು ಎಂದರು.

ಬಸವಜ್ಯೋತಿ ಪದವಿಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಟಿ.ಪಿ. ಗಿರಡ್ಡಿ ಮಾತನಾಡಿದರು.

ಪ್ರಾಚಾರ್ಯ ರೋಷಣಿ ವರ್ಣೆಕರ ಅಧ್ಯಕ್ಷತೆ ವಹಿಸಿದ್ದರು. ವಕೀಲರ ಸಂಘದ ಅಧ್ಯಕ್ಷ ಡಿ.ಎಂ. ಜತ್ತಿ ಇದ್ದರು. ಸುಕನ್ಯಾ ಗಲಗಲಿ ಪ್ರಾರ್ಥಿಸಿದರು. ಉಪನ್ಯಾಸಕಿ ಮೈತ್ರಾ ತಳವಾರ ನಿರ್ವಹಿಸಿದರು.