ಹಲಗೂರು: ಅಧಿಕಾರ ಇಂದು ಇರುತ್ತದೆ ನಾಳೆ ಹೋಗುತ್ತದೆ. ಆದರೆ ಯಾವುದೂ ಶಾಶ್ವತವಲ್ಲ. ಅಧಿಕಾರದಲ್ಲಿದ್ದಾಗ ನಾವು ಜನ ಮೆಚ್ಚುವ ಉತ್ತಮ ಕೆಲಸಗಳನ್ನು ಮಾಡಿದರೆ ಮಾತ್ರ ನಮ್ಮನ್ನು ಜನ ಮುಂದಕ್ಕೆ ನೆನೆಯುತ್ತಾರೆ, ಆಶೀರ್ವದಿಸುತ್ತಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.
ಮಂಡ್ಯ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ಅಭ್ಯರ್ಥಿ ಸ್ಟಾರ್ ಚಂದ್ರು ಪರವಾಗಿ ಹಲಗೂರಿನಲ್ಲಿ ಶನಿವಾರ ರಾತ್ರಿ ಮತಯಾಚಿಸಿದ ಅವರು, ರಾತ್ರಿ 9.30 ಆದರೂ ಜನರು ನನ್ನ ಭಾಷಣ ಕೇಳಲು ಉತ್ಸಾಹದಿಂದ ಸಂಜೆಯಿಂದಲೂ ಕಾದು ಕುಳಿತ್ತಿದ್ದೀರಿ. ಅದಕ್ಕಾಗಿ ನಿಮಗೆ ಕೋಟಿ ಕೋಟಿ ನಮಸ್ಕಾರಗಳು. ನಿಮ್ಮ ಅಭಿಮಾನಕ್ಕೆ, ವಿಶ್ವಾಸಕ್ಕೆ ನಾನು ಚಿರಋಣಿ ಎಂದು ನೆರೆದಿದ್ದ ಜನರಿಗೆ ವಂದಿಸಿದರು.
ಜಿಲ್ಲೆಯಲ್ಲಿ ಸ್ಟಾರ್ ಚಂದ್ರು ಮತ್ತು ಕುಮಾರಸ್ವಾಮಿ ಅವರಿಗೆ ಸ್ಪರ್ಧೆ ನಡೆಯುತ್ತಿಲ್ಲ. ನನಗೂ ಮತ್ತು ಕುಮಾರಸ್ವಾಮಿಗೂ ಸ್ಪರ್ಧೆ ನಡೆಯುತ್ತಿದೆ. ಎಂಬುದನ್ನು ನೀವು ತಿಳಿದುಕೊಳ್ಳಬೇಕು. ನನ್ನಿಂದಾಗಲಿ ಅಥವಾ ನರೇಂದ್ರಸ್ವಾಮಿ ಅವರಿಂದಾಗಲಿ ಯಾವುದಾದರೂ ತಪ್ಪುಗಳು ಆಗಿದ್ದರೆ ಅವುಗಳನ್ನು ಸರಿಪಡಿಸಿಕೊಂಡು ಹೋಗೋಣ. ನಿಮ್ಮ ಈ ಕ್ಷೇತ್ರಕ್ಕೆ ಯಾವ ಅಭಿವೃದ್ಧಿ ಕೆಲಸವಾಗಬೇಕು ಎಂಬ ಪಟ್ಟಿಯನ್ನು ನನಗೆ ನೀಡಿ. ನಾನು ಅತಿ ಶೀಘ್ರದಲ್ಲೇ ಆ ಕೆಲಸವನ್ನು ಮಾಡಿಕೊಡುತ್ತೇನೆ. ದೇವೇಗೌಡರಂತೆ ರೈಲು ಹಾಕಿಸುತ್ತೇನೆ ಎಂದು ರೈಲು ಬಿಡುವುದಿಲ್ಲ ಕೆಲಸ ಮಾಡಿ ತೋರಿಸುತ್ತೇನೆ. ಕನಕಪುರ ಮತ್ತು ಸಾತನೂರಿನಲ್ಲಿ ಹೇಗೆ ಅಭಿವೃದ್ಧಿ ಕೆಲಸಗಳು ಆಗಿವೆ. ಅದೇ ರೀತಿ ಮಳವಳ್ಳಿ ಕ್ಷೇತ್ರವನ್ನೂ ಅಭಿವೃದ್ಧಿಪಡಿಸುವ ಜವಾಬ್ದಾರಿ ನನ್ನ ಮೇಲಿದೆ. ಅದನ್ನು ನಾನು ಮಾಡಿ ತೋರಿಸುತ್ತೇನೆ ಎಂದರು.
ಗ್ಯಾರಂಟಿ ಯೋಜನೆಯಿಂದಾಗಿ ಹೆಣ್ಣು ಮಕ್ಕಳು ದಾರಿ ತಪ್ಪಿದ್ದಾರೆ ಎಂದು ಕುಮಾರಸ್ವಾಮಿ ಅವರು ಮಹಿಳೆಯರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಇದನ್ನು ನೀವು ಪ್ರಶ್ನಿಸಬೇಕು. ಕುಮಾರಸ್ವಾಮಿ ಎರಡು ಬಾರಿ ಮುಖ್ಯಮಂತ್ರಿ ಆಗಿದ್ದರೂ ಒಮ್ಮೆ ಎಂಪಿಯಾಗಿದ್ದರು. ದೇವೇಗೌಡರು ಪ್ರಧಾನ ಮಂತ್ರಿಯಾಗಿದ್ದರು. ನೀವು ಸ್ವಾಭಿಮಾನಿಗಳಾಗಿ ಅವರನ್ನು ಏನು ಒಳ್ಳೆಯದು ಮಾಡಿದ್ದೀರಿ ಎಂದು ಪ್ರಶ್ನಿಸಬೇಕು ಎಂದರು. ಶಾಸಕ ಪಿ.ಎಂ.ನರೇಂದ್ರಸ್ವಾಮಿ ಮತ್ತು ಮರಿತಿಬ್ಬೇಗೌಡ ಸೇರಿದಂತೆ ಇತರರು ಇದ್ದರು. ಹಲಗೂರಿನಲ್ಲಿ ಶನಿವಾರ ಮಾಜಿ ಡಿಸಿಎಂ ಡಿ.ಕೆ.ಶಿವಕುಮಾರ್ ಮಾತನಾಡಿದರು.