ಮೈಸೂರು: ‘ಒಂದು ರಾಷ್ಟ್ರ, ಒಂದು ಪಡಿತರ ಚೀಟಿ’ ಯೋಜನೆಯಿಂದ ಪಡಿತರ ಚೀಟಿದಾರ ತಾನು ಇಚ್ಛಿಸುವ ಯಾವುದೇ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ಪಡೆದುಕೊಳ್ಳಬಹುದಾಗಿದೆ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದರು.
ಕೇಂದ್ರ ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯಿಂದ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಘಟಿಕೋತ್ಸವ ಭವನದಲ್ಲಿ ಸೋಮವಾರ ಆಯೋಜಿಸಿದ್ದ ‘ಒಂದು ರಾಷ್ಟ್ರ ಒಂದು ಪಡಿತರ ಚೀಟಿ’ ಯೋಜನೆಯ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಕೆಲಸ ನಿಮಿತ್ತ ಕಾರ್ಮಿಕರು ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ವಲಸೆ ಹೋಗುವುದು ಸಹಜ. ಇಂತಹ ಕಾರ್ಮಿಕರು ರಾಜ್ಯ ಅಲ್ಲದೆ, ದೇಶದ ಯಾವುದೇ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರಚೀಟಿ, ಆಧಾರ್ ಕಾರ್ಡ್ ತೋರಿಸಿ ಪಡಿತರ ಪದಾರ್ಥ ಪಡೆದುಕೊಳ್ಳಬಹುದು. ಆಯಾ ಜಿಲ್ಲೆಯಲ್ಲಿ ಆ ಭಾಗದ ಜನರ ಆಹಾರ ಪದ್ಧತಿಗೆ ಅನುಗುಣವಾಗಿ ಅಕ್ಕಿ, ರಾಗಿ, ಜೋಳ ಇನ್ನಿತರ ಪಡಿತರ ವಿತರಣೆ ಮಾಡಲಾಗುತ್ತಿದೆ. ಹಳೇ ಮೈಸೂರು ಭಾಗದ ಜಿಲ್ಲೆಗಳಲ್ಲಿ ಅಕ್ಕಿಯೊಂದಿಗೆ ರಾಗಿ, ಉತ್ತರ ಕರ್ನಾಟಕ ಭಾಗದಲ್ಲಿ ಜೋಳ ವಿತರಣೆ ಮಾಡಲಾಗುತ್ತಿದೆ ಎಂದರು.
ಪಡಿತರ ಚೀಟಿದಾರರು ರಾಷ್ಟ್ರವ್ಯಾಪಿ ಪೋರ್ಟಬಿಲಿಟಿ ಮೂಲಕ ತಾವು ವಾಸಿಸುತ್ತಿರುವ ಹತ್ತಿರದ ಯಾವುದೇ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ಪಡೆದುಕೊಳ್ಳಲು ಕೇಂದ್ರ ಸರ್ಕಾರ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ‘ಒಂದು ರಾಷ್ಟ್ರ ಒಂದು ಪಡಿತರ ಚೀಟಿ’ ಯೋಜನೆಯನ್ನು 2019ರಲ್ಲಿ ಜಾರಿಗೆ ತಂದಿತು. ಈ ಯೋಜನೆಯನ್ನು ಅದೇ ವರ್ಷ ಕರ್ನಾಟಕದಲ್ಲೂ ಅಳವಡಿಸಿಕೊಳ್ಳಲಾಯಿತು. ಯೋಜನೆ ವ್ಯಾಪ್ತಿಗೆ ದೇಶದ 86 ಕೋಟಿ ಪಡಿತರ ಚೀಟಿದಾರರು ಹಾಗೂ ಕರ್ನಾಟಕದ 4 ಕೋಟಿ ಅಂತ್ಯೋದಯ ಮತ್ತು ಆದ್ಯತಾ ಪಡಿತರ ಚೀಟಿದಾರರು ಒಳಪಟ್ಟಿದ್ದಾರೆ ಎಂದು ಮಾಹಿತಿ ನೀಡಿದರು.
ಇಂದಿರಾಗಾಂಧಿ ಆದಿಯಾಗಿ ಪ್ರಧಾನಿಯಾಗಿದ್ದ ಎಲ್ಲರೂ ದೇಶದ ಆಹಾರ ವ್ಯವಸ್ಥೆಯನ್ನು ಸುಭದ್ರಗೊಳಿಸಲು ಶ್ರಮಿಸಿದ್ದಾರೆ. ಯಾರೂ ಹಸಿವಿನಿಂದ ಬಳಲಬಾರದು ಎನ್ನುವ ಉದ್ದೇಶದಿಂದ ಮನಮೋಹನ್‌ಸಿಂಗ್ ಅವರ ಅವಧಿಯಲ್ಲಿ ಆಹಾರ ಭದ್ರತಾ ಕಾಯ್ದೆಯನ್ನು ಜಾರಿಗೊಳಿಸಲಾಯಿತು. ವಾಜಪೇಯಿ ಸಹ ಆಹಾರ ವ್ಯವಸ್ಥೆಯನ್ನು ಭದ್ರಪಡಿಸಲು ಶ್ರಮಿಸಿದ್ದರು ಎಂದು ಹೇಳಿದರು.
ಸಿದ್ದರಾಮಯ್ಯ ಅವರು ಈ ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ಅನ್ನಭಾಗ್ಯ ಯೋಜನೆ ಜಾರಿಗೊಳಿಸಿ ಪ್ರತಿಯೊಬ್ಬರಿಗೂ 10 ಕೆ.ಜಿ. ಉಚಿತ ಅಕ್ಕಿ ವಿತರಣೆ ಮಾಡಿದ್ದರು. ಈಗಲೂ 10 ಕೆ.ಜಿ. ಅಕ್ಕಿ ನೀಡುವ ಗುರಿ ಇದ್ದರೂ, ಕೇಂದ್ರ ಸರ್ಕಾರ ಹೆಚ್ಚುವರಿ ಅಕ್ಕಿ ನೀಡುತ್ತಿಲ್ಲ. ಹಾಗಾಗಿ, 5 ಕೆ.ಜಿ. ಅಕ್ಕಿ ಬದಲಾಗಿ ಹಣ ನೀಡುತ್ತಿದ್ದೇವೆ. ಶೀಘ್ರ 10 ಕೆಜಿ ಅಕ್ಕಿ ವಿತರಣೆ ಮಾಡಲು ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಇದಕ್ಕಾಗಿ ಆಂಧ್ರಪ್ರದೇಶ, ತೆಲಂಗಾಣ, ಛತ್ತೀಸ್‌ಗಢ ರಾಜ್ಯಗಳಿಂದ ಅಕ್ಕಿ ಪಡೆಯಲು ಮಾತುಕತೆ ನಡೆಯುತ್ತಿದೆ ಎಂದು ತಿಳಿಸಿದರು.
ಸಂಸದ ಪ್ರತಾಪ್ ಸಿಂಹ ಮಾತನಾಡಿ, ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದ ಸಂದರ್ಭ ಅಂತ್ಯೋದಯ ಅನ್ನ ಯೋಜನೆ ಮೂಲಕ ಪಡಿತರ ವ್ಯವಸ್ಥೆ ಜಾರಿಗೆ ತಂದು ವಲಸೆ ಕಾರ್ಮಿಕರಿಗೆ ಅನುಕೂಲ ಮಾಡಿಕೊಟ್ಟರು. ಕೇಂದ್ರ ಸರ್ಕಾರ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಪಡಿತರಚೀಟಿ ಹೊಂದಿರುವ ವ್ಯಕ್ತಿಗೆ 5 ಕೆ.ಜಿ. ಅಕ್ಕಿ ನೀಡುತ್ತಿದೆ. ಆದರೆ ರಾಜ್ಯ ಸರ್ಕಾರ 3 ಕೆಜಿ ಮಾತ್ರ ನೀಡುತ್ತಿದೆ. ಆದ್ದರಿಂದ ಉಳಿದ 2 ಕೆಜಿ ಸೇರಿಸಿ ಭರವಸೆ ನೀಡಿದ್ದಂತೆ ಒಟ್ಟು 10 ಕೆ.ಜಿ ನೀಡುವಂತೆ ಮನವಿ ಮಾಡಿದರು.
ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಶಾಸಕ ಕೆ. ಹರೀಶ್‌ಗೌಡ, ಕೇಂದ್ರ ಸರ್ಕಾರದ ಆಹಾರ ವಿತರಣಾ ಇಲಾಖೆಯ ಹಿರಿಯ ಸಲಹೆಗಾರರಾದ ನಂದಿತಾ ಮಿಶ್ರ, ಆಹಾರ ಇಲಾಖೆಯ ಕಾರ್ಯದರ್ಶಿ ಡಾ.ಜೆ.ಸಿ. ಪ್ರಕಾಶ್, ಆಯುಕ್ತೆ ಕನಗವಲ್ಲಿ, ಅಪರ ನಿರ್ದೇಶಕ ಜ್ಞಾನೇಂದ್ರಕುಮಾರ್ ಗಂಗ್ವಾರ್, ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ, ಆಹಾರ ಮತ್ತು ನಾಗರಿಕ ಸಬರಾಜು ಇಲಾಖೆ ಉಪ ನಿರ್ದೇಶಕಿ ಕುಮುದಾ ಇತರರು ಇದ್ದರು.