ಮಂಗಳೂರು: ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಬೆಂಗಳೂರಿನಿಂದ ಮಂಗಳೂರಿಗೆ ಆಗಮಿಸಿದ ಓರ್ವ ಪ್ರಯಾಣಿಕನಲ್ಲಿ ಕರೊನಾ ಸೋಂಕು ದೃಢಪಟ್ಟಿದೆ.
ಈ ಹಿನ್ನೆಲೆಯಲ್ಲಿ ಸೋಂಕು ಬಾಧಿತ ವ್ಯಕ್ತಿ ಮಾರ್ಚ್ 21ರಂದು ಸಾಯಂಕಾಲ 4.30ಕ್ಕೆ ಬೆಂಗಳೂರು ಮೆಜೆಸ್ಟಿಕ್‌ನಿಂದ ಪ್ರಯಾಣ ಆರಂಭಿಸಿದ ಕೆಎ 19 ಎಫ್ 3329 ಬಸ್‌ನಲ್ಲಿ ಪ್ರಯಾಣಿಸಿದ ಎಲ್ಲ 55 ಪ್ರಯಾಣಿಕರು ಸರ್ಕಾರ ನಿಗದಿಪಡಿಸಿದ ರೀತಿ ವೈದ್ಯಕೀಯ ತಪಾಸಣೆಗೆ ಒಳಗಾಗುವಂತೆ ಕೆಎಸ್‌ಆರ್‌ಟಿಸಿ ತನ್ನ ಟ್ವಿಟರ್ ಖಾತೆಯಲ್ಲಿ ಮನವಿ ಮಾಡಿಕೊಂಡಿದೆ.
ಸೋಂಕು ಬಾಧಿತ ವ್ಯಕ್ತಿ ಉಪ್ಪಿನಂಗಡಿಯಲ್ಲಿ ಇಳಿದಿದ್ದ. ಈ ಬಸ್‌ನ ಚಾಲಕ ಹಾಗೂ ನಿರ್ವಾಹಕರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದೆ. ಬಸ್‌ನಲ್ಲಿ ಪ್ರಯಾಣಿಸಿದವರು ಯಾರೂ ತಮ್ಮನ್ನು ಸಂಪರ್ಕಿಸಿಲ್ಲ ಎಂದು ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣ ಅಧಿಕಾರಿ ಎಚ್.ಎಸ್.ಅರುಣ್ ವಿಜಯವಾಣಿಗೆ ತಿಳಿಸಿದ್ದಾರೆ.
ಸೋಂಕಿತನ ದಿನಚರಿ: ಕರೊನಾ ಸೋಂಕಿತ 21 ವರ್ಷದ ವ್ಯಕ್ತಿ ದುಬೈಯಿಂದ ಹೊರಟು ಮಾರ್ಚ್ 21ರಂದು ಬೆಳಗ್ಗೆ 8.30ಕ್ಕೆ ಬೆಂಗಳೂರು ವಿಮಾನ ನಿಲ್ದಾಣ ತಲುಪಿ, ಬಿಎಂಟಿಸಿ ಬಸ್ ಮೂಲಕ ಮೆಜೆಸ್ಟಿಕ್ ಬಸ್ ನಿಲ್ದಾಣಕ್ಕೆ ಪ್ರಯಾಣ. ಮಧ್ಯಾಹ್ನ 2ಗಂಟೆಗೆ ಮೆಜೆಸ್ಟಿಕ್‌ನಲ್ಲಿ ಊಟ ಮುಗಿಸಿದ್ದಾರೆ. ಮೆಜೆಸ್ಟಿಕ್ ನಿಲ್ದಾಣದಿಂದ ಸಾಯಂಕಾಲ 4.30 ಕ್ಕೆ ಮಂಗಳೂರಿಗೆ ತೆರಳುವ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣ. ಮಾರ್ಚ್ 22ರಂದು ಮುಂಜಾನೆ ಸುಮಾರು ಮೂರು ಗಂಟೆಗೆ ಉಪ್ಪಿನಂಗಡಿಯಲ್ಲಿ ಇಳಿದು ಆಟೋ ಮೂಲಕ ಮನೆ ತಲುಪಿದ್ದಾರೆ. ಸೋಂಕಿತ ಬಸ್ ಪ್ರಯಾಣದ ನಡುವೆ ಇತರ ಪ್ರಯಾಣಿಕರ ಜತೆ ಕುಣಿಗಲ್ನಲ್ಲಿ ಚಹಾ ಕುಡಿದಿದ್ದಾರೆ.
ಎಲ್ಲರ ಕ್ವಾರಂಟೈನ್: ಕರೊನಾ ಸೋಂಕಿತ ಪ್ರಯಾಣಿಸಿದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಸಿದ ಎಲ್ಲ ಪ್ರಯಾಣಿಕರು, ಅವರು ಪ್ರಯಾಣಿಸಿದ ಆಟೋ ಚಾಲಕ 28 ದಿನ ಕ್ವಾರಂಟೈನ್ (ಮನೆ ನಿಗಾವಣೆ)ನಲ್ಲಿ ಇರುವಂತೆ ಜಿಲ್ಲಾಡಳಿತ ಸೂಚಿಸಿದೆ. ಇವರ ಆರೋಗ್ಯದಲ್ಲಿ ಯಾವುದೇ ವ್ಯತ್ಯಾಸ ಕಂಡುಬಂದಲ್ಲಿ ತಕ್ಷಣ ಆರೋಗ್ಯ ಇಲಾಖೆ ನೆರವು ಪಡೆಯುವಂತೆ ತಿಳಿಸಲಾಗಿದೆ.