ಮೈಸೂರು: ಉರಿಯುತ್ತಿದ್ದ ಸ್ಥಿತಿಯಲ್ಲಿ ಯುವತಿಯ ಶವ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮತ್ತೊಬ್ಬ ಆರೋಪಿಯನ್ನು ಬಂಧಿಸಿದ್ದಾರೆ. ಚಾಮಲಪುರ ಹುಂಡಿಯ ಪ್ರಸನ್ನ ಕುಮಾರ್ ಬಂಧಿತ.
ಅಕ್ಟೋಬರ್ 8ರಂದು ಪಿರಿಯಾಪಟ್ಟಣ ತಾಲೂಕಿನ ಕೆಲ್ಲೂರು ರಸ್ತೆ ಬದಿಯಲ್ಲಿ ಉರಿಯುತ್ತಿದ್ದ ಸ್ಥಿತಿಯಲ್ಲಿ ಯುವತಿಯ ಶವ ಪತ್ತೆಯಾಗಿದ್ದು, ಸ್ಥಳೀಯರನ್ನು ದಿಗ್ಭ್ರಮೆಗೊಳಿಸಿತ್ತು. ದೇಹ ಬಹುತೇಕ ಸುಟ್ಟು ಕರಕಲಾಗಿದ್ದರೂ, ಯುವತಿ ಧರಿಸಿದ್ದ ಕಾಲು ಗೆಜ್ಜೆ ಆಧರಿಸಿ ನಡೆಸಿದ ತನಿಖೆಯಿಂದ ಆಕೆ ನಂಜನಗೂಡು ತಾಲೂಕಿನ ಹುಲ್ಲಹಳ್ಳಿ ಗ್ರಾಮದ ಭಾಗ್ಯ (18 ) ಎಂಬುದನ್ನು ಪೊಲೀಸರು ಪತ್ತೆ ಹಚ್ಚಿದ್ದರು.
ಈ ಸುಳಿವಿನ ಮೇರೆಗೆ ಪೊಲೀಸರು ಈಗಾಗಲೇ ಪ್ರಮುಖ ಆರೋಪಿ ಸಿದ್ದರಾಜು ಎಂಬಾತನನ್ನು ಬಂಧಿಸಿದ್ದರು. ಸಿದ್ದರಾಜು ಹಾಗೂ ಭಾಗ್ಯ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಭಾಗ್ಯ ತನ್ನನ್ನು ಮದುವೆಯಾಗು ಎಂದು ಒತ್ತಾಯಿಸಿದ್ದಕ್ಕೆ ಸಿದ್ದರಾಜು ಆಕೆಯನ್ನು ಕೊಲೆ ಮಾಡಿ, ಶವಕ್ಕೆ ಬೆಂಕಿ ಇಟ್ಟಿದ್ದ. ಈತನ ಕೃತ್ಯಕ್ಕೆ ಸ್ನೇಹಿತ ಪ್ರಸನ್ನಕುಮಾರ್ ನೆರವಾಗಿದ್ದ.
ಪೊಲೀಸರು ಪ್ರಕರಣದ ತನಿಖೆಗಿಳಿಯುತ್ತಿದ್ದಂತೆ ಆರೋಪಿ ಪ್ರಸನ್ನಕುಮಾರ್ ತಲೆಮರೆಸಿಕೊಂಡಿದ್ದ. ಆದರೆ ಸೂಕ್ತ ತನಿಖೆ ಮೇರೆಗೆ ಆರೋಪಿಯ ಜಾಡು ಹಿಡಿದ ಪಿರಿಯಾಪಟ್ಟಣ ಪೊಲೀಸರು ಪ್ರಸನ್ನ ಕುಮಾರ್ನನ್ನೂ ಬಂಧಿಸಿದ್ದಾರೆ.