ದೇವದುರ್ಗ: ವಿಶ್ವ ಕಾರ್ಮಿಕರ ದಿನಾಚರಣೆ ಅಂಗವಾಗಿ ಮೇ ಒಂದು ತಿಂಗಳ ಪೂರ್ತಿ ಉದ್ಯೋಗ ಖಾತ್ರಿ ಯೋಜನೆಯಡಿ ದುಡಿಯೋಣ ಬಾ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ತಾಪಂ ಇಒ ಬಸವರಾಜ ಹಟ್ಟಿ ಹೇಳಿದರು.
ತಾಲೂಕಿನ ಗಾಣಧಾಳ ಗ್ರಾಮದಲ್ಲಿ ಗುರುವಾರ ಆಯೋಜಿಸಿದ್ದ ವಿಶ್ವ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಶ್ರಮಿಕ ವರ್ಗದ ಪರಿಶ್ರಮ ಜಗತ್ತಿಗೆ ಸಾರಲು ಕಾರ್ಮಿಕರ ದಿನ ಆಚರಿಸಲಾಗುತ್ತಿದೆ. ಮೇ 1ರಿಂದ 31ರವರೆಗೆ ಖಾತ್ರಿ ಯೋಜನೆಯಡಿ ದುಡಿಯೋಣ ಬಾ ಎನ್ನುವ ಅಭಿಯಾನ ಮೂಲಕ ನಿರಂತರ ಉದ್ಯೋಗ ನೀಡಲಾಗುವುದು.ಕೂಲಿಕಾರರಿಗೆ ನರೇಗಾ ಯೋಜನೆಯಡಿ ಕೆಲಸ ನೀಡಲಾಗುವುದು ಎಂದರು.
ಕೂಲಿಕಾರರು ಗುಳೆ ಹೋಗದೆ ಇದ್ದೂರಲ್ಲಿ ನರೇಗಾ ಕೆಲಸ ಪಡೆದುಕೊಳ್ಳಬೇಕು. ಯೋಜನೆಯಡಿ ಹೆಣ್ಣು ಮತ್ತು ಗಂಡುಗೆ ಸಮಾನ ಕೂಲಿ 370ರೂ. ನೀಡಲಾಗುತ್ತಿದೆ. ಬಿಸಿಲಿನ ತಾಪಮಾನ ಹೆಚ್ಚಿರುವ ಕಾರಣ ಕೆಲಸ ಪ್ರಮಾಣದಲ್ಲಿ ಶೇ.30 ರಿಯಾಯಿತಿ ಇದೆ. ಸಾಮಾಜಿಕ ಭದ್ರತೆ ಕಲ್ಪಿಸಲು ಯೋಜನೆಯಡಿ 65 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು, ಅಂಗವಿಕಲರು ಹಾಗೂ ಗರ್ಭಿಣಿಯರಿಗೆ ಶೇ.50 ಕೆಲಸ ಮಾಡಿದರೆ ಪೂರ್ತಿ ಕೂಲಿ ನೀಡಲಾಗುವುದು. ಜನರು ಯೋಜನೆ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಪಿಡಿಒ ರಂಗಪ್ಪ, ಮುಖಂಡರಾದ ಆಂಜನೇಯ, ರಾಮಣ್ಣ, ಶಿವರಾಜ, ಬೂದಿಬಸವ, ನಾಗರಾಜ, ಶಿವಪ್ಪ, ರಮೇಶ, ಶಂಕ್ರಪ್ಪ ಇತರರಿದ್ದರು.