ಚಿಕ್ಕಬಳ್ಳಾಪುರ: ಆತ ಆಕೆ ಮೇಲೆ ಹಲ್ಲೆ ಮಾಡಿದ್ದಲ್ಲದೆ ಜುಟ್ಟು ಹಿಡಿದು ಎಳೆದಾಡಿದ್ದಾನೆ. ಅಷ್ಟೇ ಅಲ್ಲ, ಆ ಕುರಿತ ವಿಡಿಯೋ ವೈರಲ್ ಆಗುತ್ತಿದ್ದಂತೆ ಪರಾರಿಯಾಗಿ ತಲೆಮರೆಸಿಕೊಂಡಿದ್ದಾನೆ. ಹೀಗೊಂದು ಪ್ರಕರಣ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಡೆದಿದೆ.
ವೆಂಕಟಲಕ್ಷ್ಮಮ್ಮ ಹಲ್ಲೆಗೊಳಗಾದ ಮಹಿಳೆ. ಡ್ರೈವರ್ ಗೋಪಾಲ್ ಎಂಬಾತ ಹಲ್ಲೆ ಮಾಡಿ ಪರಾರಿಯಾಗಿರುವ ಆರೋಪಿ. ವೆಂಕಟಲಕ್ಷ್ಮಮ್ಮ ಮತ್ತು ಚೈತ್ರಾ ಎಂಬಾಕೆಯ ನಡುವೆ ನಡೆದ ಗಲಾಟೆಯ ಕಾರಣದಿಂದಾಗಿ ಈ ಹಲ್ಲೆ ನಡೆದಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಓಂಟೂರು ಗ್ರಾಮದಲ್ಲಿ ವೆಂಕಟಲಕ್ಷ್ಮಮ್ಮ ಹಾಗೂ ಚೈತ್ರ ಎಂಬಾಕೆ ನಡುವೆ ಗಲಾಟೆ ನಡೆದಿತ್ತು. ಗಲಾಟೆ ಬಳಿಕ ಗ್ರಾಮದ ಮುಖಂಡರ ನೇತೃತ್ವದಲ್ಲಿ ರಾಜಿಯೂ ನಡೆದಿತ್ತು.
ಅದಾಗ್ಯೂ ಗೋಪಾಲ್ ತನ್ನ ಪುತ್ರಿ ಚೈತ್ರಾ ಜತೆ ಗಲಾಟೆ ಮಾಡಿದ್ದ ವೆಂಕಟಲಕ್ಷ್ಮಮ್ಮಗೆ ಫೋನ್ ಮಾಡಿ ದಬಾಯಿಸಿದ್ದಲ್ಲದೆ, ದೊಣ್ಣೆಯಿಂದ ಹಲ್ಲೆ ಮಾಡಿದ್ದಾನೆ. ಬಳಿಕ ಆಕೆಯ ಜುಟ್ಟು ಹಿಡಿದು ಎಳೆದಾಡಿದ್ದಾನೆ. ಒಂದು ವಾರದ ಹಿಂದೆ ನಡೆದಿರುವ ಈ ಪ್ರಕರಣದ ವಿಡಿಯೋ ವೈರಲ್ ಆಗಿದ್ದು, ದಿಬ್ಬೂರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದಾಖಲಾಗಿರುವ ದೂರಿನ ಮೇರೆಗೆ ತನಿಖೆಗೆ ಇಳಿದಿರುವ ಪೊಲೀಸರು ಗೋಪಾಲ್ ಸಹೋದರನನ್ನು ವಶಕ್ಕೆ ಪಡೆದಿದ್ದಾರೆ. ಪ್ರಕರಣದ ಕುರಿತು ಎಸ್ಐ ಪಾಪಣ್ಣ ತನಿಖೆ ಮುಂದುವರಿಸಿದ್ದು, ಗೋಪಾಲ್ ಪತ್ತೆಗೆ ಬಲೆ ಬೀಸಲಾಗಿದೆ.