ಮೈಸೂರು: ಆಹಾರ ಭದ್ರತೆ ಪ್ರತಿಯೊಂದು ದೇಶಕ್ಕೂ ತುಂಬಾ ಅವಶ್ಯಕವಾಗಿದ್ದು, ಈ ನಿಟ್ಟಿನಲ್ಲಿ ಆಹಾರ ಸಂಶೋಧನಾ ಕ್ಷೇತ್ರದಲ್ಲಿ ಹೆಚ್ಚು ಸಂಶೋಧನೆ ಕೈಗೊಳ್ಳುವ ಅವಶ್ಯಕತೆ ಇದೆ ಎಂದು ಕೇಂದ್ರೀಯ ಆಹಾರ ತಂತ್ರಜ್ಞಾನ ಸಂಶೋಧನಾಲಯ (ಸಿಎಸ್‌ಐಆರ್) ಮಹಾ ನಿರ್ದೇಶಕಿ ಡಾ.ಎನ್. ಕಲೈಸೆಲ್ವಿ ಅಭಿಪ್ರಾಯಪಟ್ಟರು.
ಸಿಎಫ್‌ಟಿಆರ್‌ಐ ಜು.3 ರಿಂದ 7ರವರೆಗೆ ಹಮ್ಮಿಕೊಂಡಿರುವ ‘ಒನ್ ವೀಕ್ ಒನ್ ಲ್ಯಾಬ್’ ಕಾರ್ಯಕ್ರಮದ ಕರ್ಟನ್ ರೈಸರ್ ಅನಾವರಣಗೊಳಿಸುವ ಕಾರ್ಯಕ್ರಮದಲ್ಲಿ ಮಾತನಾಡಿ, ಆಹಾರ ಸಂಶೋಧನಾ ಕ್ಷೇತ್ರದಲ್ಲಿ ಎಲ್ಲ ಕಾಲಕ್ಕೂ ಅನ್ವಯ ಆಗುವ ಹಾಗೂ ಸುಸ್ಥಿರ ತಂತ್ರಜ್ಞಾನ ಅಭಿವೃದ್ಧಿ ಪಡಿಸುವ ಅವಶ್ಯಕತೆ ಇದೆ. ಇಂತಹ ತಂತ್ರಜ್ಞಾನಗಳನ್ನು ಅಭಿವೃದ್ಧಿ ಪಡಿಸುವ ಮೂಲಕ ದೇಶಕ್ಕೆ ಕೊಡುಗೆ ನೀಡುವ ಕಾರ್ಯವನ್ನು ಸಂಶೋಧನಾ ವಿದ್ಯಾರ್ಥಿಗಳು ಮಾಡಬೇಕು ಎಂದು ಕರೆ ನೀಡಿದರು.
ಜನರ ಆಹಾರದ ಅಭಿರುಚಿಗಳು ವರ್ಷದಿಂದ ವರ್ಷಕ್ಕೆ ಬದಲಾಗುತ್ತಲೇ ಇರುತ್ತದೆ. ಈ ಬದಲಾವಣೆಗೆ ಪೂರಕವಾದ ಆಹಾರ ತಂತ್ರಜ್ಞಾನ ಹಾಗೂ ಹೊಸ ರೆಸಿಪಿಗಳನ್ನು ಸಿದ್ಧಪಡಿಸಬೇಕು. ಅಲ್ಲದೆ, ಹೊಸ ತಲೆಮಾರಿನ ಹಾಗೂ ಮುಂದಿನ ತಲೆಮಾರಿನ ಆಹಾರ ಅಭಿರುಚಿಗಳನ್ನು ತಿಳಿದುಕೊಂಡು ಅದಕ್ಕೆ ಪೂರಕವಾಗಿ ಸಂಶೋಧನೆಗಳನ್ನು ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.
ಎಸ್‌ಐಆರ್-ಸಿಎಫ್‌ಟಿಆರ್‌ಐ ಕಳೆದ ಎಂಟು ದಶಕಗಳಿಂದ ಆಹಾರ ಸಂಶೋಧನಾ ಕ್ಷೇತ್ರದಲ್ಲಿ ಸಾಕಷ್ಟು ಹಾದಿಯನ್ನು ಕ್ರಮಿಸಿದ್ದು, ಹಲವು ಗಣನೀಯ ಕೊಡುಗೆಗಳನ್ನು ನೀಡಿದೆ. ಇಲ್ಲಿನ ತಂತ್ರಜ್ಞಾನಗಳು ಪ್ರತಿಯೊಂದು ಜನರಿಗೂ ತಲುಪಿದೆ. ಇದೀಗ ಸಂಸ್ಥೆಯ ಮೇಲೆ ನಿರೀಕ್ಷೆಗಳು ಸಹ ಹೆಚ್ಚಿದ್ದು, ನಿರೀಕ್ಷೆಗೆ ಪೂರಕವಾಗಿ ಹೆಚ್ಚು ಸಂಶೋಧನೆಗಳು ಆಗಬೇಕು ಎಂದರು.
ಸಿಎಫ್‌ಟಿಆರ್‌ಐ ನಿರ್ದೇಶಕಿ ಶ್ರೀದೇವಿ ಅನ್ನಪೂರ್ಣ ಸಿಂಗ್, ಎಫ್‌ಟಿಆರ್‌ಐ ಹಿರಿಯ ವಿಜ್ಞಾನಿ ಡಾ.ಕೆ.ಎನ್. ರಸ್ತೋಗಿ ಇದ್ದರು.