ಗುಂಡ್ಲುಪೇಟೆ ತಾಲೂಕಿನ ಲಕ್ಕೂರು ಗೇಟ್ ಬಳಿ ಬಸ್ ಹಾಗೂ ಟಾಟಾ ಏಸ್ ನಡುವೆ ಡಿಕ್ಕಿ ಸಂಭವಿಸಿ ಗಾಯಾಳುಗಳು ಹೊರಗೆ ಬಿದ್ದಿದ್ದಾರೆ.  
ಜಿಲ್ಲೆ

ಬಸ್ ಡಿಕ್ಕಿಯಾಗಿ ಒಬ್ಬ ಸಾವು, ಐವರು ಗಾಯ

ಗುಂಡ್ಲುಪೇಟೆ: ಚಿಕ್ಕಲ್ಲೂರು ಜಾತ್ರೆಗೆ ಜನರನ್ನು ಕರೆದೊಯ್ಯುತ್ತಿದ್ದ ಟಾಟಾ ಏಸ್ ಹಾಗೂ ಸಾರಿಗೆ ಬಸ್ ನಡುವೆ ತಾಲೂಕಿನ ಲಕ್ಕೂರು ಗೇಟ್ ಸಮೀಪ ಡಿಕ್ಕಿ ಸಂಭವಿಸಿ ಒಬ್ಬ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.

ಹಂಗಳ ಗ್ರಾಮದ ಸಿದ್ದರಾಜು(32) ಮೃತರು. ಹಂಗಳ ಗ್ರಾಮದಿಂದ ಚಿಕ್ಕಲ್ಲೂರಿಗೆ ಸುಮಾರು 20 ಜನರು ಎರಡು ಟಾಟಾ ಏಸ್ ವಾಹನಗಳಲ್ಲಿ ಪ್ರಯಾಣಿಸುತ್ತಿದ್ದರು. ಟಾಟಾ ಏಸ್ ಲಕ್ಕೂರು ಗೇಟ್ ಸಮೀಪ ಎದುರಿನಿಂದ ಬರುತ್ತಿದ್ದ ಸಾರಿಗೆ ಬಸ್ಸಿಗೆ ಡಿಕ್ಕಿಹೊಡೆದ ಪರಿಣಾಮ ಚಾಲಕ ಸಿದ್ದರಾಜು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಐವರು ತೀವ್ರ ಗಾಯಗೊಂಡಿದ್ದಾರೆ. ಡಿಕ್ಕಿ ಹೊಡೆದ ರಭಸಕ್ಕೆ ವಾಹನದಲ್ಲಿದ್ದ ಪಾತ್ರೆಗಳು, ಆಹಾರಧಾನ್ಯ ಹಾಗೂ ಪ್ರಯಾಣಿಕರು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದರಿಂದ ಈ ಮಾರ್ಗದಲ್ಲಿ ವಾಹನ ಸಂಚಾರ ಸಂಪೂರ್ಣ ಬಂದ್ ಆಗಿತ್ತು.

ಕೂಡಲೇ ಸ್ಥಳಕ್ಕೆ ಆಗಮಿಸಿದ ತೆರಕಣಾಂಬಿ ಪೊಲೀಸರು, ವಾಹನಗಳನ್ನು ಬದಲಿ ರಸ್ತೆಯಲ್ಲಿ ಸಂಚರಿಸುವಂತೆ ಮಾಡಿ ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ಕಳುಹಿಸಿದರು. ಸ್ಥಳಕ್ಕೆ ಡಿವೈಎಸ್‌ಪಿ ಲಕ್ಷ್ಮಯ್ಯ, ಸರ್ಕಲ್ ಇನ್ಸ್‌ಪೆಕ್ಟರ್ ವನರಾಜು ಹಾಗೂ ಸಬ್‌ಇನ್ಸ್‌ಪೆಕ್ಟರ್ ಈಶ್ವರ್ ಭೇಟಿ ನೀಡಿ ಪರಿಶೀಲಿಸಿದರು. ಈ ಬಗ್ಗೆ ತೆರಕಣಾಂಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.