ಜಿಲ್ಲೆ

ಕಾರಿನ ಮೇಲೆ ಲಾರಿ ಮಗುಚಿ ಓರ್ವ ಸಾವು

Dakshina Kannada

ಮಂಗಳೂರು: ಸುರತ್ಕಲ್ ಹೊನ್ನಕಟ್ಟೆ ಬಳಿ ನಿಂತಿದ್ದ ಕಾರಿನ ಮೇಲೆ ಲಾರಿ ಮಗುಚಿಬಿದ್ದು, ಕಾರಿನಲ್ಲಿದ್ದ ಕುಳಾಯಿ ಗೋಕುಲನಗರ ನಿವಾಸಿ ಲೋಕನಾಥ ಎಂಬುವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಲೋಕನಾಥ ಅವರು ಶುಕ್ರವಾರ ಮಧ್ಯಾಹ್ನ ರಾಷ್ಟ್ರೀಯ ಹೆದ್ದಾರಿ ದಾಟಲು ಹೊನ್ನಕಟ್ಟೆ ಸಿಗ್ನಲ್ ಬಳಿ ರಸ್ತೆ ಬದಿ ತಮ್ಮ ಓಮ್ನಿ ಕಾರು ನಿಲ್ಲಿಸಿದ್ದು, ಈ ವೇಳೆ ಹಿಂದಿನಿಂದ ಬಂದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಕಾರಿನ ಮೇಲೆ ಮಗುಚಿ ಬಿದ್ದಿದೆ. ಕಾರಿನೊಳಗಿದ್ದ ಲೋಕನಾಥ ಒಳಗೆ ಸಿಲುಕಿಕೊಂಡು ಮೃತಪಟ್ಟಿದ್ದಾರೆ. ಕಾರಿನ ಮುಂಭಾಗದಲ್ಲಿದ್ದ ದ್ವಿಚಕ್ರ ವಾಹನಕ್ಕೂ ಹಾನಿಯಾಗಿದ್ದು, ಸವಾರ ಸ್ಕೂಟರ್ ಬಿಟ್ಟು ಓಡಿದ ಹಿನ್ನೆಲೆಯಲ್ಲಿ ಬಚಾವಾಗಿದ್ದಾರೆ. ಮಂಗಳೂರು ಉತ್ತರ ಸಂಚಾರ ವಿಭಾಗದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.