ಜಿಲ್ಲೆ

ಪೊಲೀಸ್ ಕಾರ್ಯವೈಖರಿ ತಿಳಿದುಕೊಳ್ಳಲಿ: ಜಿಲ್ಲಾ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಸಲಹೆ

ಕೆ.ಎನ್.ರಾಘವೇಂದ್ರ

ಮಂಡ್ಯ: ಪೊಲೀಸ್ ಠಾಣೆಗಳ ಮಾಹಿತಿಯನ್ನು ವಿದ್ಯಾರ್ಥಿ ದಿಸೆಯಲ್ಲಿಯೇ ತಿಳಿದುಕೊಳ್ಳುವುದರ ಜತೆಗೆ ಕಾರ್ಯವೈಖರಿ ಬಗ್ಗೆಯೂ ಪರಿಚಯ ಮಾಡಿಕೊಳ್ಳಿ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಸಲಹೆ ನೀಡಿದರು.

ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅಚೀವರ್ಸ್ ಇಂಟರ್ ನ್ಯಾಷನಲ್ ಸ್ಕೂಲ್, ಅನನ್ಯ ಹಾರ್ಟ್ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಿದ್ದ ಪೊಲೀಸ್ ಇಲಾಖೆ ಪರಿಚಯ ಕುರಿತಂತೆ ಶಾಲಾ ಮಕ್ಕಳಿಗೆ ಒಂದು ದಿನದ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಮಂಡ್ಯ ನಗರದಲ್ಲಿ ಸಂಚಾರ, ಮಹಿಳಾ, ಸೆಂಟ್ರಲ್, ಗ್ರಾಮಾಂತರ, ಪೂರ್ವ ಮತ್ತು ಪಶ್ಚಿಮ ಪೊಲೀಸ್ ಠಾಣೆಗಳಿವೆ. ತಾಲೂಕಿನಲ್ಲಿ ಶಿವಳ್ಳಿ, ಬಸರಾಳು ಹಾಗೂ ಕೆರಗೋಡು ಪೊಲೀಸ್ ಠಾಣೆಗಳಿವೆ. ಹೀಗೆ ಮಂಡ್ಯ ಸೇರಿದಂತೆ ಏಳು ತಾಲೂಕಿನಲ್ಲಿಯೂ ಆಯಾ ವ್ಯಾಪ್ತಿಯಲ್ಲಿ ಪೊಲೀಸ್ ಠಾಣೆಗಳಿವೆ. ಕಾನ್‌ಸ್ಟೆಬಲ್, ಹೆಡ್‌ಕಾನ್‌ಸ್ಟೆಬಲ್, ಎಎಸ್‌ಐ, ಪಿಎಸ್‌ಐ, ಸಿಪಿಐ, ಡಿವೈಎಸ್‌ಪಿ, ಎಎಸ್‌ಪಿ, ಎಸ್ಪಿ, ಎಸಿಪಿ, ಕಮಿಷನರ್ ಸೇರಿದಂತೆ ಹೀಗೆ ಹಲವು ಹುದ್ದೆಗಳು ಪೊಲೀಸ್ ಇಲಾಖೆಯಲ್ಲಿ ಇವೆ ಎಂದು ವಿವರಿಸಿದರು.

ಇಲಾಖೆಯಲ್ಲಿ ಶಿಸ್ತು ಹೆಚ್ಚಿರುತ್ತದೆ. ಮೇಲಧಿಕಾರಿಗಳ ಜತೆ ಯಾವ ರೀತಿ ನಡೆದುಕೊಳ್ಳುವುದು ಮತ್ತು ರಾಜಕಾರಣಿಗಳು ಹಾಗೂ ಸಾರ್ವಜನಿಕರ ರಕ್ಷಣೆ ಸೇರಿದಂತೆ ಹಲವು ಬಗೆಯ ಜವಾಬ್ದಾರಿಗಳಿವೆ. ಪೊಲೀಸ್ ಅಧಿಕಾರಿಗಳ ಕೆಲಸಗಳಿಗೆ ತಕ್ಕಂತೆ ಆಯಾ ವ್ಯಾಪ್ತಿಯಲ್ಲಿ ಕೆಲಸ ನಿರ್ವಹಿಸುವ ಹೊಣೆಗಾರಿಕೆ ಅಥವಾ ಸಂದರ್ಭಕ್ಕೆ ತಕ್ಕಂತೆ ಸಿಬ್ಬಂದಿ ಬಳಸಿ ಕೆಲಸ ಮಾಡಲಾಗುವುದು. ಅಪರಾಧ ಪ್ರಕರಣ ಸೇರಿದಂತೆ ಇತರೆ ಕೃತ್ಯಗಳ ತಡೆಗೆ ಯಾವ ಕಾನೂನು ಪಾಲನೆ ಮಾಡಬೇಕೆಂಬುದೇ ಮುಖ್ಯವಾಗಿರುತ್ತದೆ ಎಂದು ತಿಳಿಸಿದರು.

ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎ.ಇ.ಗಂಗಾಧರಸ್ವಾಮಿ, ಶಾಲೆ ಆಡಳಿತಾಧಿಕಾರಿ ರಾಮ್‌ಸಿಂಗ್, ಶಿಕ್ಷಕರಾದ ದರ್ಶನ್, ಶ್ವೇತಾ, ದೀಪಾ, ಪಂಚಲಿಂಗ, ಅನನ್ಯ ಹಾರ್ಟ್ ಸಂಸ್ಥೆ ಅಧ್ಯಕ್ಷ ಬಿ.ಎಸ್.ಅನುಪಮಾ ಭಾಗವಹಿಸಿದ್ದರು.