ಜಿಲ್ಲೆ

ರೈತರೊಂದಿಗೆ ಒಂದು ದಿನ, ಕೃಷಿ ಸಚಿವರ ವಿನೂತನ ಕಾರ್ಯಕ್ರಮ

ಮೃತ್ಯುಂಜಯ ಕಪಗಲ್

ಬೆಂಗಳೂರು: ರೈತರ ಸಮಸ್ಯೆಗಳ ಅಧ್ಯಯನ, ಬೇಡಿಕೆ ಹಾಗೂ ಅಹವಾಲು ಆಲಿಸಿ ಅನುಕೂಲತೆ ಕಲ್ಪಿಸುವ ಉದ್ದೇಶದಿಂದ 'ರೈತರೊಂದಿಗೆ ಒಂದು ದಿನ ' ವಿ‌ನೂತನ ಕಾರ್ಯಕ್ರಮವನ್ನು ಕೃಷಿ ಸಚಿವ ಬಿ.ಸಿ.ಪಾಟೀಲ್ ಹಮ್ಮಿಕೊಂಡಿದ್ದು, ತಮ್ಮ ಜನ್ಮ ದಿನವಾದ ನ.14ರಂದು ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕಿನ ಮಡುವಿನಕೋಡಿ ಗ್ರಾಮದಲ್ಲಿ ಈ ಕಾರ್ಯಕ್ರಮ ಪ್ರಾರಂಭಿಸಲಿದ್ದಾರೆ.

ವಿಕಾಸ ಸೌಧದಲ್ಲಿ ಗುರುವಾರ ಕರೆದ ಮಾಧ್ಯಮ ಗೋಷ್ಠಿಯಲ್ಲಿ ಬಿ.ಸಿ.ಪಾಟೀಲ್ ಈ ವಿಷಯ ತಿಳಿಸಿ, ಪ್ರತಿ ತಿಂಗಳು 2-3 ಜಿಲ್ಲೆಗಳ ತಲಾ 1 ಹಳ್ಳಿಯಲ್ಲಿ ವಾಸ್ತವ್ಯ ಹೂಡಲು ನಿರ್ಧರಿಸಿರುವೆ. ಎಲ್ಲ ಜಿಲ್ಲೆಗಳ ಅಧ್ಯಯನ ಪ್ರವಾಸದ ಬಳಿಕ ಸಮಗ್ರ ವರದಿಯನ್ನು ಮುಖ್ಯಮಂತ್ರಿಗೆ ಸಲ್ಲಿಸಲಾಗುವುದು ಎಂದರು.

ರೈತರ ಆತ್ಮಹತ್ಯೆಗೆ ನೈಜ ಕಾರಣ ತಿಳಿದು, ತಡೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವುದು, ಸುಸ್ಥಿರ ಕೃಷಿಗೆ ಉತ್ತೇಜನ, ಮಿಶ್ರಬೆಳೆ ಪದ್ಧತಿ ಬಗ್ಗೆ ಜಾಗೃತಿ, ಪ್ರಗತಿಪರ ರೈತರಿಗೆ ಸನ್ಮಾನ ಮುಂತಾದ ಚಟುವಟಿಕೆಗಳನ್ನು ಕಾರ್ಯಕ್ರಮ ಒಳಗೊಂಡಿದೆ ಎಂದು ಬಿ.ಸಿ.ಪಾಟೀಲ್ ವಿವರಿಸಿದರು.