ಜಿಲ್ಲೆ

1000 ರೂಪಾಯಿಗೆ ಒಂದು ಬೆಡ್, ಕಲ್ಯಾಣ ಕರ್ನಾಟಕಕ್ಕೆ 650 ಬೆಡ್ ರವಾನೆಗೆ ಡಿಕೆಶಿ ಹಸಿರು ನಿಶಾನೆ

Bengaluru Rural

ಬೆಂಗಳೂರು: ರಾಜ್ಯದಲ್ಲಿ ಕರೊನಾ ಸೋಂಕು ತೀವ್ರವಾಗಿ ಹರಡುತ್ತಿರುವ ಸಂದರ್ಭದಲ್ಲಿ ಆಸ್ಪತ್ರೆಗಳಲ್ಲಿ ಬೆಡ್‌ಗಳ ಕೊರತೆ ಉಂಟಾಗಿದ್ದು, ರೋಗಿಗಳ ಪ್ರಾಣಕ್ಕೂ ಸಂಚಕಾರ ಉಂಟಾಗಿದೆ.

ಇಂಥ ಸಂಕಷ್ಟ ಸನ್ನಿವೇಶದಲ್ಲಿ ಅತಿ ಕಡಿಮೆ ವೆಚ್ಚ, ಸುಲಭ ಸಾಗಣೆ, 350 ಕೆಜಿಯಷ್ಟು ಭಾರ ತಡೆಯಬಹುದಾದ ಶೇ.100 ನವೀಕರಿಸಬಹುದಾದ ಪರಿಸರಸ್ನೇಹಿ 650 ಬೆಡ್‌ಗಳನ್ನು (ಇಟ್ಟ್ಟಜಿಜಠಿಛಿ ಆಛಿ) ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ದೊಡ್ಡಬಳ್ಳಾಪುರದಿಂದ ಕಲ್ಯಾಣ ಕರ್ನಾಟಕಕ್ಕೆ ಸಾಗಿಸಲು ಶನಿವಾರ ಹಸಿರು ನಿಶಾನೆ ತೋರಿದರು.

ಹಾಸಿಗೆ, ದಿಂಬು ಎಲ್ಲ ಸೇರಿ ಬೆಡ್‌ವೊಂದಕ್ಕೆ 1000 ರೂಪಾಯಿಗೂ ಕಡಿಮೆ ವೆಚ್ಚ. ಇಂಥ ಬೆಡ್‌ಗಳನ್ನು ಮಾಜಿ ಸಚಿವ, ಶಾಸಕ ಪ್ರಿಯಾಂಕ್ ಖರ್ಗೆ ಅವರು ಗುಲ್ಬರ್ಗಾಕ್ಕೆ 550 ಹಾಗೂ ರಾಯಚೂರಿಗೆಂದು 100 ಬೆಡ್‌ಗಳನ್ನು ಇಲ್ಲಿನ ವ್ಯಾಡ್‌ಪ್ಯಾಕ್ ಸಂಸ್ಥೆಯಿಂದ ಖರೀದಿಸಿದ್ದು, ಡಿ.ಕೆ.ಶಿವಕುಮಾರ್, ಅವುಗಳನ್ನು ಖುದ್ದು ಪರಿಶೀಲನೆ ಮಾಡಿ ಕಳುಹಿಸಿಕೊಟ್ಟರು. ಮಾಜಿ ಸಚಿವ ಪ್ರಿಯಾಂಕ್ ಖರ್ಗೆ, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್, ಸ್ಥಳೀಯ ಶಾಸಕ ವೆಂಕಟರಮಣ ಹಾಜರಿದ್ದರು.

ಡಿ.ಕೆ.ಶಿವಕುಮಾರ್ ಅವರು ಪರಿಸರಸ್ನೇಹಿ ಬೆಡ್‌ಲಾಭದ ಬಗ್ಗೆ ವಿವರಿಸಿದರು. ಬೆಡ್‌ಗಳ ಗುಣಮಟ್ಟವನ್ನು ಖುದ್ದು ಪರಿಶೀಲಿಸಿದ್ದೇನೆ. ಇವುಗಳನ್ನು 5 ನಿಮಿಷದಲ್ಲಿ ಜೋಡಿಸಬಹುದು. ಅದೇ ರೀತಿ 5 ನಿಮಿಷದಲ್ಲಿ ಬಿಚ್ಚಬಹುದು. ಒಂದು ಕಡೆಯಿಂದ ಮತ್ತೊಂದು ಕಡೆಗೆ ಯಾವಾಗ ಬೇಕಾದರೂ ಸಾಗಿಸಬಹುದು. ಎಲ್ಲಕಿಂಥ ಮಿಗಿಲಾಗಿ ಮಡಚಿ ಒಂದೇ ಲಾರಿಯಲ್ಲಿ 650 ಬೆಡ್‌ಗಳನ್ನು ಸಾಗಿಸಬಹುದು. ರಾಜ್ಯ ಸರ್ಕಾರ ದಿನವೊಂದಕ್ಕೆ 850 ರೂಪಾಯಿ ದರದಲ್ಲಿ ಬಾಡಿಗೆಗೆ ಬೆಡ್‌ಗಳನ್ನು ಪಡೆಯಲು ಮುಂದಾಗಿರುವ ಹೊತ್ತಿನಲ್ಲಿ ಕೇವಲ 1000 ರೂಪಾಯಿಗೆ ಇದನ್ನು ಖರೀದಿಸಬಹುದಾಗಿರುವುದು ಲಾಭಕರ. ಜತೆಗೆ ಕರೊನಾ ಸೋಂಕಿತರ ದೃಷ್ಟಿಯಿಂದ ಹೆಚ್ಚು ಪ್ರಯೋಜನಕಾರಿ ಎಂದರು.

ರಾಜ್ಯದಲ್ಲಿ ರೋಗ ಲಕ್ಷಣ ಇರುವ ಸೋಂಕಿತರು ಹಾಗೂ ರೋಗ ಲಕ್ಷಣ ಇಲ್ಲದ ಸೋಂಕಿತರು ಎಂಬ ಅವಶ್ಯಕ ವಿಭಜನೆ ಇಲ್ಲದೆ ಎಲ್ಲರೂ ಒಂದೇ ಕಡೆ ದಾಖಲಾಗಿರುವುದರಿಂದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಒತ್ತಡ ಹೆಚ್ಚಾಗಿದೆ. ಸರ್ಕಾರ ಕೂಡ ಇಲ್ಲಿ ಎಡವಿದೆ. ಇಂಥ ಸಂದರ್ಭದಲ್ಲಿ ಈ ಹಾಸಿಗೆಗಳನ್ನು ಸ್ಟೇಡಿಯಂ, ಕಲ್ಯಾಣ ಮಂಟಪ, ಬಯಲು ಪ್ರದೇಶ ಆಸ್ಪತ್ರೆಗಳಲ್ಲಿ ವ್ಯವಸ್ಥೆ ಮಾಡುವುದರಿಂದ ರೋಗ ಲಕ್ಷಣ ಇಲ್ಲದವರಿಗೆ ಇಂಥ ಕಡೆ ಚಿಕಿತ್ಸೆ ನೀಡಬಹುದು. ಇದರಿಂದ ಉಸಿರಾಟದ ತೊಂದರೆ ಮತ್ತಿತರ ಗಂಭೀರ ರೋಗ ಲಕ್ಷಣದಿಂದ ನರಳುತ್ತಿರುವವರು ಹಾಗೂ ವಯಸ್ಸಾದ ಸೋಂಕಿತರಿಗೆ ವೆಂಟಿಲೇಟರ್‌ಯುಕ್ತ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ಬಿದ್ದಿರುವ ಒತ್ತಡ ನಿವಾರಿಸಬಹುದಾಗಿದೆ.ಕಡಿಮೆ ದರದಲ್ಲಿ ಸಿಗುವ ಈ ಬೆಡ್‌ಗಳನ್ನು ನಮ್ಮ ಸರ್ಕಾರ ಕೂಡ ಖರೀದಿಸಬಹುದು ಎಂದರು.

ತೆಲಂಗಾಣ ಸರ್ಕಾರ ಈಗಾಗಲೇ 5000ಕ್ಕೂ ಹೆಚ್ಚು ಹಾಸಿಗೆಗಳನ್ನು ಖರೀದಿಸಿದ್ದು, ದೆಹಲಿಯಲ್ಲೂ ಇದೇ ಮಾದರಿ ಹಾಸಿಗೆ ಬಳಸಲಾಗುತ್ತಿದೆ. ತುರ್ತು ಸಂದರ್ಭದಲ್ಲಿ ಬಳಸಲು ಇಂತಹ ಗುಣಮಟ್ಟದ ಹಾಸಿಗೆ ತಯಾರಿಸುತ್ತಿರುವ ವ್ಯಾಡ್‌ಪ್ಯಾಕ್ ಸಂಸ್ಥೆಗೆ ರಾಜ್ಯದ ಜನತೆ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ. ನಮ್ಮ ಪಕ್ಷದ ವತಿಯಿಂದ ರಾಜ್ಯ ಸರ್ಕಾರಕ್ಕೂ ಒಂದಷ್ಟು ಹಾಸಿಗೆಗಳನ್ನು ಕೊಡುಗೆ ನೀಡುವ ಯೋಚನೆಯಿದೆ ಎಂದರು.

ರಾಜ್ಯ ಸರ್ಕಾರ ಕರೊನಾ ಸಲಕರಣೆಗಳ ವಿಚಾರದಲ್ಲಿ ಮಾಡಿರುವ ಭ್ರಷ್ಟಾಚಾರದ ಬಗ್ಗೆ ವಿಧಾನಸಭೆ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಲೆಕ್ಕ ಕೇಳಿದ್ದಾರೆ. ನಾನು ಮಾಧ್ಯಮಗಳಲ್ಲಿ ಬಂದಿರುವ ವರದಿ ಆಧರಿಸಿ ಉತ್ತರ ಕೇಳಿದ್ದೇನೆ. ಸರ್ಕಾರದ ಈ ಅಕ್ರಮ ವಿರುದ್ಧದ ಹೋರಾಟವನ್ನು ಪಕ್ಷದಿಂದ ರಾಜ್ಯಾದ್ಯಂತ ಹಮ್ಮಿಕೊಳ್ಳಲಾಗುವುದು ಎಂದರು.