ಜಿಲ್ಲೆ

ಒಬ್ಬನ ಬಂಧನ, 102 ಕೆಜಿ ಗಂಧದ ತುಂಡು, ಕಾರು ವಶಕ್ಕೆ

ಬಸವರಾಜ ವೀರಪ್ಪ ಗರಗ

ಬಂಕಾಪುರ: ಪಟ್ಟಣದ ಹಲವೆಡೆ ಗಂಧದ ಮರಗಳನ್ನು ಕತ್ತರಿಸಿ ಸಾಗಾಟ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಟ್ಟಣದ ಪಿಎಸ್​ಐ ನಿಂಗರಾಜ ಕರಕಣ್ಣವರ ನೇತೃತ್ವದ ತಂಡ ಒಬ್ಬನನ್ನು ಬಂಧಿಸಿ 102 ಕೆಜಿ ಗಂಧದ ತುಂಡುಗಳು, ಒಂದು ಕಾರು ಹಾಗೂ ಉಪಕರಣಗಳನ್ನು ವಶಪಡಿಸಿಕೊಂಡಿದ್ದಾರೆ.

ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ಸಂಡಗ್ರಾಮದ ನಿವಾಸಿ ಸೈಯದ್ ಇಸ್ರಾರ್ ತಂದೆ ಸೈಯದ್ ಕರೀಂ (27) ಬಂಧಿತ ಆರೋಪಿ. ಈತ ಹಾವೇರಿ, ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆಗಳ ಹಲವು ಠಾಣೆಗಳಲ್ಲಿ 20ಕ್ಕೂ ಅಧಿಕ ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಇತ್ತೀಚೆಗೆ ಜೈಲಿನಿಂದ ಹೊರಬಂದಿದ್ದ ಎಂದು ತಿಳಿದು ಬಂದಿದೆ.

ಡಿ. 3ರಂದು ಪಟ್ಟಣದಲ್ಲಿ 12ಕ್ಕೂ ಅಧಿಕ ಶ್ರೀಗಂಧದ ಮರಗಳನ್ನು ಕಳ್ಳರು ಕಡಿದು ಸಾಗಿಸಿದ್ದರು. ಇದಲ್ಲದೆ ಕಳೆದ ಎರಡ್ಮೂರು ವರ್ಷಗಳಿಂದ ಪಟ್ಟಣದಲ್ಲಿ ಗಂಧದ ಮರಗಳ್ಳತನ ಪ್ರಕರಣಗಳು ಆಗೊಮ್ಮೆ ಈಗೊಮ್ಮೆ ನಡೆಯುತ್ತಲೇ ಇದ್ದವು.

ಈ ಕುರಿತು ವಿಜಯವಾಣಿ ಪತ್ರಿಕೆ ಡಿ. 18ರಂದು ‘ಶ್ರೀಗಂಧದ ಮರ ಕಳ್ಳರ ಪಾಲು’ ಶೀರ್ಷಿಕೆಯಡಿ ವಿಶೇಷ ವರದಿ ಮಾಡಿತ್ತು. ವರದಿಯಿಂದ ಎಚ್ಚೆತ್ತ ಪೊಲೀಸ್ ಇಲಾಖೆ ವಿಶೇಷ ತಂಡ ರಚಿಸಿ ಎರಡು ವಾರದ ಒಳಗಾಗಿ ಕಳ್ಳನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಎಸ್ಪಿ ಅಂಶುಕುಮಾರ, ಎಎಸ್​ಪಿ ಸಿ. ಗೋಪಾಲ ಮಾರ್ಗದರ್ಶನದಲ್ಲಿ ಪಿಎಸ್​ಐ ನಿಂಗರಾಜ ಕರಕಣ್ಣವರ ನೇತೃತ್ವದಲ್ಲಿ ಪಿಎಸ್​ಐ ಬಿ.ಜಿ.ದೊಡಮನಿ ಸಿಬ್ಬಂದಿ ಬಿ.ಎನ್. ಅಗಸಿಮನಿ, ಎ.ಕೆ. ನದಾಫ, ಅಸ್ಗರಅಲಿ ನದಾಫ, ಗೋವಿಂದ ಲಮಾಣಿ, ಸುರೇಶ ದೇವಸೂರ, ಎನ್.ಎಂ.ಪೂಜಾರ, ಮಲ್ಲೇಶ ಮೇಟಿ, ಸಂತೋಷ ಭಜಂತ್ರಿ, ಜಿಬಿವುಲ್ಲಾ ದೊಡ್ಡಮನಿ, ತಾಂತ್ರಿಕ ಸಿಬ್ಬಂದಿ ಮಾರುತಿ ಹಾಲಬಾವಿ, ಸತೀಶ ಮಾರಕಟ್ಟಿ ಕಾರ್ಯಾಚರಣೆಯಲ್ಲಿದ್ದರು.