ಆಯನೂರು: ಹೊಸಳ್ಳಿ ಏತ ನೀರಾವರಿ ಯೋಜನೆಯಡಿ ಪೈಪ್‌ಲೈನ್ ಹಾಕುವಲ್ಲಿ ಅಧಿಕಾರಿಗಳು ತಾರತಮ್ಯ ಮಾಡಿದ್ದು ಇದರಿಂದಾಗಿ ದೊಡ್ಡದಾನವಂದಿ ಕೆರೆಯಿಂದ ಚಿಕ್ಕದಾನವಂದಿ ಕೆರೆವರೆಗಿನ 180 ಎಕರೆ ಜಮೀನಿಗೆ ತೊಂದರೆಯಾಗಿದೆ ಎಂದು ಸೋಮವಾರ ನೀರಾವರಿ ಇಲಾಖೆ ಎಇಇ ಅರುಣ್‌ಕುಮಾರ್ ಎದುರು ರೈತರು ಆಕ್ರೋಶ ವ್ಯಕ್ತಪಡಿಸಿದರು.
ದೊಡ್ಡದಾನವಂದಿ ಗ್ರಾಮದ ವೀರಶೆಟ್ಟಿ ಕೆರೆಗೆ ಒಂದೂವರೆ ಇಂಚು ಪೈಪ್‌ಲೈನ್ ಹಾಕಲಾಗಿದೆ. ಕೆರೆ ತುಂಬಿಸಲು ಇಟ್ಟಿರುವ ವಾಲ್ವ್‌ನಲ್ಲಿ ನೀರು ಬರುತ್ತಿಲ್ಲ. ಇದರಿಂದ ನೂರಾರು ರೈತರು ಸಮಸ್ಯೆಗೆ ಒಳಗಾಗುವಂತಾಗಿದೆ. ಕೆರೆ ತುಂಬಿಸಲು ಜೂನ್ ತಿಂಗಳಲ್ಲೇ ನೀರು ಬಿಟ್ಟಿದ್ದು ವೀರಶೆಟ್ಟಿ ಕೆರೆಗೆ ನೀರು ಬರದೆ ಕೆರೆ ತುಂಬಿಲ್ಲ. ಹಲವು ಬಾರಿ ರೈತರು ಶಾಸಕರು ಮತ್ತು ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಮೂರು ತಿಂಗಳ ಹಿಂದೆಯೇ ಪೈಪ್ ಬದಲಾಯಿಸಿಕೊಡುವುದಾಗಿ ಇಂಜಿನಿಯರ್ ಹೇಳಿದ್ದರೂ ಇದುವರೆಗೂ ಪ್ರಯೋಜನವಾಗಿಲ್ಲ. ಜೋಳದ ಬೆಳೆ ಸುಟ್ಟು ಹೋಗಿದ್ದು ಭತ್ತದ ಬೆಳೆಯನ್ನಾದರೂ ಉಳಿಸಿಕೊಳ್ಳಲು ನೀರು ಬಿಡುವಂತೆ ಮನವಿ ಮಾಡಿದರು.
ಮೊದಲು ಸ್ಥಳೀಯ ಶಾಸಕರ ಗಮನಕ್ಕೆ ತರಲಾಗಿತ್ತು. ಸಮಸ್ಯೆಯ ಗಂಭೀರತೆ ಅರಿತ ಶಾಸಕರು 5 ಇಂಚು ಪೈಪ್ ಹಾಕುವಂತೆ ಅಧಿಕಾರಿಗಳಿಗೆ ತಿಳಿಸಿದ್ದರು. ಇಂಜಿನಿಯರ್ ಸ್ಥಳಕ್ಕೆ ಬಂದು ಹೋಗಿದ್ದು ಬಿಟ್ಟರೆ ಯಾವುದೇ ಕೆಲಸ ನಡೆಸಿಲ್ಲ. ಕೆಲವು ರೈತರು ಸಂಸದ ಬಿ. ವೈ.ರಾಘವೇಂದ್ರ ಅವರನ್ನು ಭೇಟಿ ಮಾಡಿ ಸಮಸ್ಯೆಯನ್ನು ತಿಳಿಸಿದ್ದರು. ಸ್ಪಂದಿಸಿದ ಸಂಸದರು ಅಧಿಕಾರಿಗಳಿಗೆ ಸಮಸ್ಯೆ ಬಗೆಹರಿಸಿಕೊಡುವಂತೆ ತಿಳಿಸಿದ್ದರು. ದೊಡ್ಡದಾನವಂದಿ ಕೆರೆಗೂ 5 ಇಂಚು ಪೈಪ್ ಹಾಕಬೇಕು. ಜತೆಗೆ ಈ ಭಾಗದಲ್ಲಿರುವ ನೀರಿನ ಟ್ಯಾಂಕ್‌ನಿಂದ ಅಕ್ರಮವಾಗಿ ನೀರನ್ನು ಮೋಟಾರ್ ಇರಿಸಿ ಕೆಲ ರೈತರು ನೀರು ತೆಗೆದುಕೊಳ್ಳುತ್ತಿದ್ದಾರೆ. ಇವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಎಇಇ ಅರುಣ್‌ಕುಮಾರ, ಈ ಯೋಜನೆ ನಿರ್ವಹಣೆಯನ್ನು ಏಜೆನ್ಸಿಗೆ ನೀಡಲಾಗಿದೆ. ಟ್ಯಾಂಕ್‌ಗಳಲ್ಲಿ ಅನಧಿಕೃತವಾಗಿ ಮೋಟಾರ್ ಇಳಿಸಿ ನೀರು ತೆಗೆದುಕೊಳ್ಳುವಂತಿಲ್ಲ. ಯೋಜನೆಯಲ್ಲಿ ಈ ಕೆರೆಗೆ ವಾಲ್ ಹಾಕುವಂತೆ ಇರಲಿಲ್ಲ. ಆದರೆ ರೈತರ ಅನುಕೂಲಕ್ಕೆ ವಾಲ್ವ್ ಹಾಕಿದ್ದೇವೆ. ಮುಂದಿನ ದಿನಗಳಲ್ಲಿ ರೈತರಿಗೆ ಅನುಕೂಲ ಮಾಡಕೊಡುವುದಾಗಿ ಹೇಳಿದರು.
ಬಿಜೆಪಿ ರಾಜ್ಯ ಉಪಾಧ್ಯಕ್ಷ ಆಯನೂರು ಶಿವಾನಂದಪ್ಪ, ರೈತರಾದ ಕೃಷ್ಣಮೂರ್ತಿ, ಬಲರಾಮಪ್ಪ, ಚಂದ್ರಪ್ಪ, ಪರಶುರಾಮ, ಕೆ.ಚಂದ್ರಪ್ಪ, ಬಿ.ಸಂತೋಷ್, ಮೋಹನಪ್ಪ, ಮಲ್ಲೇಶಪ್ಪ, ಸಂತೋಷಕುಮಾರ್, ಕೋಟೋಜಿ ರಾವ್, ಋಷಿ ಇತರರಿದ್ದರು.