ಜಿಲ್ಲೆ

ಒಂದೂವರೆ ಎಕರೆ ಕಾಫಿ ತೋಟ ಬೆಂಕಿಗಾಹುತಿ

ಪ್ರಸಿನ್ ಕೆ.ಆರ್

ಸೋಮವಾರಪೇಟೆ: ಸೂಕ್ತ ನಿರ್ವಹಣೆಯಿಲ್ಲದ ವಿದ್ಯುತ್ ಟ್ರಾನ್ಸ್‌ಫಾರ್ಮರ್‌ನ ತಂತಿ ತುಂಡಾಗಿ ಬಿದ್ದು ಬೆಂಕಿ ಹೊತ್ತಿಕೊಂಡ ಪರಿಣಾಮ ಒಂದೂವರೆ ಎಕರೆಯಷ್ಟು ಕಾಫಿ ತೋಟ ಸಂಪೂರ್ಣ ಸುಟ್ಟ ಭಸ್ಮವಾಗಿರುವ ಪ್ರಕರಣ ಬಿಳಿಗೇರಿ ಗ್ರಾಮದಲ್ಲಿ ಇತ್ತೀಚೆಗೆ ನಡೆದಿದೆ.

ಬಿಳಿಗೇರಿ ಗ್ರಾಮದ ಕೃಷಿಕ ಬಿ.ಬಿ.ಕರುಂಬಯ್ಯ ಎಂಬುವರು ಬೆಳೆದಿದ್ದ 8 ವರ್ಷದ ಅರೇಬಿಕಾ ಕಾಫಿ ಗಿಡ, ಒಂದು ಸಾವಿರ ಕಾಳುಮೆಣಸು ಬಳ್ಳಿಗಳು, 500 ರಷ್ಟು ಕಿತ್ತಳೆ ಮರಗಳು, 150 ಬಾಳೆಗಿಡಗಳು ಸಂಪೂರ್ಣ ನಾಶವಾಗಿದೆ. ಇದರಿಂದ ಲಕ್ಷಾಂತರ ರೂ. ನಷ್ಟವಾಗಿದೆ. ಕೂಡಲೇ ಪರಿಹಾರ ನೀಡಬೇಕೆಂದು ತಹಸೀಲ್ದಾರ್ ಮತ್ತು ಸೆಸ್ಕ್ ಇಲಾಖೆಗೆ ತೋಟದ ಮಾಲೀಕ ಮನವಿ ಪತ್ರ ನೀಡಿ ಆಗ್ರಹಿಸಿದ್ದಾರೆ.

ಘಟನಾ ಸ್ಥಳಕ್ಕೆ ಸೆಸ್ಕ್ ಇ.ಇ. ಅಮಿತ್, ಎಇಇ ಮಂಜುನಾಥ್, ರವಿ, ಜೆಇ ಕುಮಾರ್ ಅವರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಪ್ರತಿವರ್ಷ ಟ್ರಾನ್ಸ್‌ಫಾರ್ಮರ್‌ನಲ್ಲಿ ತಂತಿಗಳು ಸ್ಪರ್ಶಗೊಂಡು ಬೆಂಕಿ ಹೊತ್ತಿಕೊಂಡು ಅಲ್ಪಸ್ವಲ್ಪ ಹಾನಿಯಾಗುತ್ತಿದ್ದು, ಟ್ರಾನ್ಸ್‌ಫಾರ್ಮರ್ ಸರಿಪಡಿಸುವಂತೆ ಸೆಸ್ಕ್ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಕ್ರಮಕೈಗೊಂಡಿಲ್ಲ. ಅವರ ನಿರ್ಲಕ್ಷ್ಯದಿಂದ ದೊಡ್ಡಮಟ್ಟದ ಹಾನಿಯಾಗಿದೆ ಎಂದು ಕೃಷಿಕ ಕರುಂಬಯ್ಯ ದೂರಿದರು.