ಕಾಸರಗೋಡು: ಜಿಲ್ಲೆಯ ನೀಲೇಶ್ವರ ಸಮೀಪದ ಎಡೈಯಿಲಕ್ಕಾಡ್ ಕಾವ್(ವನ)ನಲ್ಲಿ ಕೋತಿಗಳು ಓಣಂ ಹಬ್ಬದೂಟ ಉಂಡು ಖುಷಿಪಟ್ಟವು!
ನವೋದಯ ಗ್ರಂಥಾಲಯ ಬಾಲವೇದಿ ನೇತೃತ್ವದಲ್ಲಿ ವಾನರಗಳಿಗೆ ಹಬ್ಬದ ಕೊನೆಯ ದಿನದ ಭೋಜನ ಸಿದ್ಧಪಡಿಸಲಾಗಿತ್ತು.
15ನೇ ವರ್ಷದ ಔತಣ ಕೂಟದ ನೆನಪಿಗಾಗಿ 15 ಖಾದ್ಯಗಳನ್ನು ಹಣ್ಣು-ತರಕಾರಿಗಳ ಸಹಿತ ವಾನರ ಕೂಟಕ್ಕೆ ನೀಡಲಾಯಿತು. 80ರ ಹರೆಯದ ಮಾಣಿಕಮ್ಮ ಉಪ್ಪು ಬೆರೆಸದ ಸಪ್ಪೆ ಅನ್ನ ಬಡಿಸುತ್ತಿದ್ದಂತೆ ಕೋತಿಗಳ ಹಿಂಡು ಓಣಂ ಸದ್ಯ ಸೇವಿಸಲು ದಾಂಗುಡಿಯಿಟ್ಟವು. ಬಾಳೆ ಎಲೆಗಳಲ್ಲಿ ಬೀಟ್ ರೂಟ್ ಮತ್ತು ಹಣ್ಣುಗಳನ್ನು ಜೋಡಿಸಲಾಗಿತ್ತು.
ಸ್ಟೀಲ್ ಗ್ಲಾಸ್‌ಗಳಲ್ಲಿ ನೀರು ಇಡಲಾಗಿತ್ತು. ಹಲಸು, ಅನಾನಸು, ಬಾಳೆಹಣ್ಣು, ಕುಂಬಳಕಾಯಿ, ಸಿಹಿಕುಂಬಳ, ಪೇರಳೆ, ಟೊಮ್ಯಾಟೊ, ಕ್ಯಾರೆಟ್, ಬೀಟ್ರೂಟ್, ಸೌತೆಕಾಯಿ ಮತ್ತು ಮುಳ್ಳುಸೌತೆಗಳಿಂದ ಸಿದ್ಧಪಡಿಸಿದ ಖಾದ್ಯಗಳಿದ್ದವು.
ವನವನ್ನು ಎಲೆ, ಕುಂಕುಮ ಮತ್ತಿತರ ಹೂವುಗಳಿಂದ ಅಲಂಕರಿಸಲಾಗಿತ್ತು. 11 ಎಕರೆ ವಿಸ್ತೀರ್ಣದ ಎಡೈಯಿಲಕ್ಕಾಡ್ ಕಾವ್‌ನಲ್ಲಿ 40ರಷ್ಟು ಮಂಗಗಳು ವಾಸಿಸುತ್ತಿವೆ. ಇದು ದೇವಸ್ಥಾನದ ಒಡೆತನದ ವನವಾಗಿದ್ದು, ನವೋದಯ ಗ್ರಂಥಾಲಯದ ಕಾರ್ಯಕರ್ತರು ಇದರ ಸಂರಕ್ಷಣೆಯ ಹೊಣೆಹೊತ್ತಿದ್ದಾರೆ.