ಜಿಲ್ಲೆ

ನಾಳೆ ಸಂಭ್ರಮದ ಓಣಂ ಆಚರಣೆ : ಮಾರುಕಟ್ಟೆಗಳಲ್ಲಿ ಜನಸಂದಣಿ : ಭರ್ಜರಿ ಹೂವಿನ ವ್ಯಾಪಾರ

ಸೌಮ್ಯ ಆರ್

ವಿಜಯವಾಣಿ ಸುದ್ದಿಜಾಲ ಕಾಸರಗೋಡು

ಕೃಷಿ ಸಂಸ್ಕೃತಿಯ ಪ್ರತೀಕವಾಗಿರುವ ಓಣಂ ಹಬ್ಬ ಸೆ.5ರಂದು ನಡೆಯಲಿದೆ. ಹಬ್ಬದ ಅಂಗವಾಗಿ ಮಾರುಕಟ್ಟೆಗಳಲ್ಲಿ ಜನಸಂದಣಿ ಕಂಡುಬಂದಿತ್ತು. ನಾಡಿನೆಲ್ಲೆಡೆ ಹೂವಿನ ವ್ಯಾಪಾರ ಭರದಿಂದ ಸಾಗುತ್ತಿದೆ. ಕುಟುಂಬಶ್ರೀ ಸೇರಿದಂತೆ ವಿವಿಧ ಸಂಘಟನೆಗಳು ಬೆಳೆಸಿರುವ ಹೂವಿನ ಹೊರತಾಗಿಯೂ ಇತರ ರಾಜ್ಯಗಳಿಂದ ಭಾರಿ ಪ್ರಮಾಣದಲ್ಲಿ ಹೂವಿನ ವ್ಯಾಪಾರಿಗಳು ಜಿಲ್ಲೆಗೆ ಆಗಮಿಸಿದ್ದಾರೆ.

ಆದರ್ಶ ರಾಜ ಮಹಾಬಲಿ ವರ್ಷಕ್ಕೊಂದು ಬಾರಿ ತಾನು ಆಳುತ್ತಿದ್ದ ಭೂಮಿ, ಪ್ರಜೆಗಳು ಹಾಗೂ ಕೃಷಿಯನ್ನು ನೋಡಿಕೊಂಡು ಹೋಗುವ ಅವಕಾಶವನ್ನು ವಿಷ್ಣುವಿನಿಂದ ಪಡೆದ ಪ್ರತೀಕವಾಗಿ ಓಣಂ ಆಚರಿಸಲಾಗುತ್ತಿದ್ದು, 5ರಂದು ತಿರುವೋಣಂ ಆಚರಣೆಯೊಂದಿಗೆ ಜನತೆ ಸಂಭ್ರಮಿಸಲಿದ್ದಾರೆ.

ಮಲಯಾಳಿಗರ ಮಾತಿನಂತೆ, ‘ಅತ್ತಂ ಪತ್ತ್ ಪೊನ್ನೋಣಂ’ ಅಂದರೆ ‘ಅತ್ತಂ’ನಿಂದ(ಆ.27) ಆರಂಭಗೊಂಡು ಹತ್ತನೇ ದಿನ(ಸೆ.5)ದಂದು ತಿರುವೋಣಂ ಆಚರಿಸುವುದು ವಾಡಿಕೆ. ಆ.27ರ ನಂತರ ಪ್ರತಿಯೊಂದು ದಿನವನ್ನೂ ಒಂದೊಂದು ಐತಿಹ್ಯದೊಂದಿಗೆ ಓಣಂ ಆಚರಿಸಿಕೊಂಡು ಬರಲಾಗುತ್ತದೆ. ಓಣಂ ಹಬ್ಬದ ಕೊನೆಯ ನಾಲ್ಕು ದಿನಗಳನ್ನು ಮಹಾಬಲಿ ತನ್ನ ಪ್ರಜೆಗಳ ಯೋಗಕ್ಷೇಮ ವಿಚಾರಿಸಲು ಸಂಚಾರಕ್ಕಾಗಿ ಮೀಸಲಿರಿಸುತ್ತಾನೆ ಎಂಬುದು ಐತಿಹ್ಯ.

ತಿರುವೋಣಂ ದಿನದಂದು ಬೆಳಗ್ಗೆ ಬೇಗನೆ ಎದ್ದು, ಶುಚಿರ್ಭೂತರಾಗಿ ಮನೆ ಎದುರು ರಂಗೋಲಿ ಬಿಡಿಸಿ, ಹೊಸ ಬಟ್ಟೆ ಧರಿಸಿ ದೇವಳಕ್ಕೆ ಭೇಟಿ ನೀಡಿ ಮಧ್ಯಾಹ್ನ ಓಣಂ ಔತಣಕೂಟದಲ್ಲಿ ಪಾಲ್ಗೊಳ್ಳುತ್ತಾರೆ. ಮಧ್ಯಾಹ್ನ ನಂತರ ವಿವಿಧ ಸಂಘ, ಸಂಸ್ಥೆಗಳಿಂದ ಕ್ರೀಡಾಕೂಟ, ತಿರುವಾದಿರ, ಹುಲಿವೇಷಧಾರಿಗಳ ಅಬ್ಬರದ ಕುಣಿತದೊಂದಿಗೆ ಓಣಂ ರಂಗೇರುತ್ತದೆ. ನವವಿವಾಹಿತರಿಗೆ ಹಾಗೂ ಮೊದಲ ಓಣಂ ಆಚರಿಸುವ ಎಳೆಯ ಕಂದಮ್ಮಗಳಿಗೆ ಓಣಂ ಉತ್ಸವದಂದು ವಿಶೇಷ ಪರಿಗಣನೆ ನೀಡಲಾಗುತ್ತದೆ.