ರಾಯಚೂರು ಜಿಲ್ಲೆಯಲ್ಲಿ ಜೂನ್ 12ರಂದು ನಡೆಯುವ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆಯ ಹಿನ್ನೆಲೆಯ ನಾನಾ ಕಾರ್ಯಕ್ರಮಗಳಿಗೆ ಅಗತ್ಯ ಸಿದ್ಧತೆಯನ್ನು ಕೈಗೊಳ್ಳಬೇಕೆಂದು ಎಡಿಸಿ ಶಿವಾನಂದ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ವಿಶ್ವ ಬಾಲ ಕಾರ್ಮಿಕ ಪದ್ಧತಿಯ ವಿರೋಧಿ ದಿನಾಚರಣೆ ಪೂರ್ವಭಾವಿ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜೂನ್ 12ರಂದು ಜಿಲ್ಲಾ ಕೇಂದ್ರ ಸೇರಿದಂತೆ ಎಲ್ಲಾ ತಾಲೂಕುಗಳಲ್ಲಿ ಸಹ ವಿಶ್ವ ಬಾಲ ಕಾರ್ಮಿಕ ಪದ್ಧತಿಯ ವಿರೋಧಿ ದಿನವನ್ನು ಆಚರಣೆ ಮಾಡಬೇಕು. ಆಯಾ ತಾಲೂಕುಗಳಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ಸ್ಥಳೀಯ ತಾಲೂಕು, ಹೋಬಳಿ ಮತ್ತು ಗ್ರಾಮಮಟ್ಟದ ಅಧಿಕಾರಿಗಳು, ಸ್ವಯಂ ಸೇವಾ ಸಂಸ್ಥೆಯ ಪ್ರತಿನಿಧಿಗಳ ಸಹಕಾರೊಂದಿಗೆ ಶಿಕ್ಷಣ ಇಲಾಖೆಯಿಂದ ಸ್ಥಳೀಯ ಸರ್ಕಾರಿ ಶಾಲೆಯ 9 ಹಾಗೂ 10ನೇ ತರಗತಿಯ ಮಕ್ಕಳಿಂದ ಜಿಲ್ಲೆಯಾದ್ಯಂತ ಎಲ್ಲ ಕಡೆಗೆ ಪ್ರಭಾತ ಪೇರಿ ನಡೆಸಿ ಮಕ್ಕಳನ್ನು ಶಾಲೆಗೆ ಸೇರಿಸುವಂತೆ, ಮಕ್ಕಳನ್ನು ದುಡಿಯಲು ಹಚ್ಚಬಾರದು ಎಂದು ಜನಜಾಗೃತಿ ಮೂಡಿಸಬೇಕು.
ಇದಕ್ಕೆ ಆಯಾ ತಹಸೀಲ್ಧಾರರು ಈಗಿನಿಂದಲೇ ಆಯಾ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ವಿಷಯ ತಿಳಿಸಿ ಬಿಇಓ ಅವರ ಮೂಲಕ ಎಲ್ಲ ಶಾಲೆಗಳಿಗೆ ಪತ್ರ ಬರೆಯಿಸಿ ಎಲ್ಲ ಸರ್ಕಾರಿ ಶಾಲೆಗಳಲ್ಲಿ ಪ್ರಭಾತಪೇರಿ ನಡೆಸಲು ಸಿದ್ಧತೆಯನ್ನು ಮಾಡಿಕೊಳ್ಳಬೇಕು. ಬರೀ ಜಾಗೃತಿ ಮೂಡಿಸಿದರಷ್ಟೇ ಸಾಲದು ಸಂಬಂಧಿಸಿದ ಅಧಿಕಾರಿಗಳು ಅಥವಾ ತಹಸೀಲ್ದಾರರು ದಿನಾಚರಣೆಯ ದಿನದಂದು ಆಯಾ ಕಡೆಗಳಲ್ಲಿ ಸಂಚರಿಸಿ ಆಕಸ್ಮಿಕ ಭೇಟಿ ನೀಡಿ ಬಾಲ ಕಾರ್ಮಿಕರನ್ನು ರಕ್ಷಣೆ ಮಾಡಿದಲ್ಲಿ ದಿನಾಚರಣೆ ವಿಶೇಷ ಅರ್ಥ ಬರಲಿದೆ ಎಂದು ಅಪರ ಜಿಲ್ಲಾಧಿಕಾರಿಗಳು ಸಲಹೆ ಮಾಡಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಬಿ.ರಾಜಶೇಖರ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಮಕ್ಕಳ ರಕ್ಷಣಾಧಿಕಾರಿ ಅಮರೇಶ ಹರಿವಿ, ಸರ್ವೋದಯ ಸಂಸ್ಥೆಯ ಮುಖ್ಯಸ್ಥ ಅಶೋಕ ಕಾಮತ್ , ಹಿಂದುಳಿದ ವರ್ಗಗಳ ಇಲಾಖೆಯ ಕಚೇರಿ ಮೇಲ್ವಚಾರಕ ಮಹಾಂತೇಶ ಕುದರಿ, ಪುಷ್ಟಲತಾ, ಅನ್ನಪೂರ್ಣ ಸೇರಿದಂತೆ ಇತರರು ಇದ್ದರು.