ಕಂಪ್ಲಿ ತಾಲೂಕಿನ ಮೆಟ್ರಿಯಲ್ಲಿ ಜೋಕುಮಾರನನ್ನು ಇಟ್ಟು ಹಾಡುತ್ತಿರುವ ರಾಮಸಾಗರದ ಗಂಗಾಮತಸ್ಥ ಸಮುದಾಯದ ಹಂಪಮ್ಮ, ಬಿ.ಹುಲಿಗೆಮ್ಮ, ಸಜ್ಜೆ ಹುಲಿಗೆಮ್ಮ, ಸಜ್ಜೆ ನೀಲಮ್ಮ, ಸಜ್ಜೆ ಲಕ್ಷ್ಮೀ ಇತರರು. 
ಜಿಲ್ಲೆ

ಹುಣ್ಣಿಮೆತನಕ ಜೋಕುಮಾರನಿಗೆ ಪೂಜೆ

ಕಂಪ್ಲಿ: ಜನಪದ ಆಚರಣೆಯಲ್ಲಿ ಜೋಕುಮಾರಸ್ವಾಮಿ ಆಚರಣೆಗೆ ವಿಶಿಷ್ಟ ಸ್ಥಾನವಿದೆ. ತಾಲೂಕಿನ ಗಂಗಾಮತಸ್ಥ ಸಮುದಾಯದ ಮಹಿಳೆಯರು ಜೋಕುಮಾರನನ್ನು ಹೊತ್ತು ಮೆರೆಸಿ ಜನಪದ ಆಚರಣೆಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವಲ್ಲಿ ನಿರತರಾಗಿದ್ದಾರೆ. ಸೆ.7ರಂದು ಜೋಕುಮಾರ ಹುಣ್ಣಿಮೆಯತನಕ ಜೋಕುಮಾರನ ಪೂಜೆ ನಡೆಯುತ್ತದೆ.

ಜೋಕ, ಎಳೆ ಗೌರಿ ದಂಪತಿಗೆ ಬೆಳೆದು ನಿಂತ ಏಳು ದಿನಗಳ ಅಲ್ಪಾಯು ಜೋಕುಮಾರನೆಂಬ ಮಗ ಜನಿಸುತ್ತಾನೆ. ಬರಗಾಲ ಬಿದ್ದು ಬೆಳೆ ಒಣಗುತ್ತಿದ್ದುದನ್ನು ಕಂಡ ಜೋಕಮಾರ ತನ್ನ ಮೇಲು ಹೊದಿಕೆಯನ್ನು ಬೀಸಿ ಮಳೆ ತರಿಸುತ್ತಾನೆ. ಬೆಳೆ ಹಸಿರಾಗಿ, ಕೆರೆ-ಕಟ್ಟೆಗಳು ತುಂಬುತ್ತವೆ. ಈತ ಒಬ್ಬ ಯುವತಿಯನ್ನು ಪ್ರೀತಿಸುತ್ತಾನೆ. ಆ ಯುವತಿಯ ತಂದೆ ಸಿಟ್ಟಿನಿಂದ ಜೋಕುಮಾರನ ತಲೆ ಕತ್ತರಿಸಿ ನದಿಗೆ ಎಸೆಯುತ್ತಾನೆ.

ಈ ತಲೆ ಗಂಗಾಮತಸ್ಥರಿಗೆ ಸಿಗುತ್ತದೆ. ಬೆಳೆ ಕಾಪಾಡಿದ ಜೋಕುಮಾರನೆಂದು ಗುರುತಿಸಿ ಪೂಜೆ ಸಲ್ಲಿಸಿ ದೈವವನ್ನಾಗಿ ಪರಿಗಣಿಸಿದ್ದರಿಂದ ಇಂದಿಗೂ ಜೋಕುಮಾರನ ಆಚರಣೆ ಇದೆ. ಜೋಕುಮಾರ ಹುಣ್ಣಿಮೆಯಂದು ಸ್ಮಶಾನದಲ್ಲಿ ಜೋಕುಮಾರನ ಅಂತ್ಯಕ್ರಿಯೆ ವಿಧಿವಿಧಾನಗಳನ್ವಯ ನಡೆಯುತ್ತದೆ. ಹನ್ನೊಂದು ದಿನ ಸಂಗ್ರಹಿಸಿದ ದವಸ- ಧಾನ್ಯಗಳಿಂದ ಅಡುಗೆ ಮಾಡಿ ನೈವೇದ್ಯ ಅರ್ಪಿಸಲಾಗುತ್ತದೆ.

ಸದ್ಯ ಜೋಕುಮಾರಸ್ವಾಮಿ ಆಚರಣೆ ಗ್ರಾಮೀಣ ಭಾಗದಲ್ಲಿ ಮಾತ್ರ ಇದೆ. 11ದಿನ ಜೋಕುಮಾರಸ್ವಾಮಿ ಹೊತ್ತು ಮೆರೆದ ನಮಗೆ ಸರಿಯಾದ ಹಣವಾಗಲಿ, ದವಸ- ಧಾನ್ಯವಾಗಲಿ ಸಿಗುತ್ತಿಲ್ಲ. ಆಚರಣೆ ಬಿಡಬಾರದೆಂದು ನಡೆಸಿಕೊಂಡು ಹೋಗುತ್ತಿದ್ದೇವೆ. ಸರ್ಕಾರ ಜನಪದ ಆಚರಣೆಗೆ ಪ್ರೋತ್ಸಾಹಧನ ನೀಡುವಂತಾಗಬೇಕು ಎಂದು ರಾಮಸಾಗರದ ಹಂಪಮ್ಮ ಹೇಳುತ್ತಾರೆ.