ಜಿಲ್ಲೆ

4ನೇ ದಿನವೂ ಬೆಂಗಳೂರು ನಗರದಲ್ಲಿ 40ರ ಗಡಿ ದಾಟಿದ ಉಷ್ಣಾಂಶ

ಬೆಂಗಳೂರು: ರಾಜಧಾನಿಯಲ್ಲಿ ಸತತ 4ನೇ ದಿನವೂ ಉಷ್ಣಾಂಶ 40ರ ಗಡಿ ದಾಟಿದೆ. ಮೇ 1ರಂದು 41.3, ಮೇ 2 ರಂದು 41.1, ಮೇ 3ರಂದು 40.9 ಹಾಗೂ ಮೇ 4ರಂದು 40 ಡಿ.ಸೆ.ಉಷ್ಣಾಂಶ ದಾಖಲಾಗಿದೆ.

ಸತತ ಎರಡು ದಿನವೂ ಮಳೆ ಸುರಿದರೂ,ಮೋಡ ಕವಿದ ವಾತಾವರಣ ಇದ್ದರೂ ಉಷ್ಣಾಂಶ ತಗಿಲ್ಲ. ವಾಡಿಕೆಯಂತೆ 34 ಡಿ.ಸೆ.ಉಷ್ಣಾಂಶ ದಾಖಲಾಗಿತ್ತು.ವಾಡಿಕೆಗಿಂತ 6 ಡಿ.ಸೆ.ಅಧಿಕ ದಾಖಲಾಗುತ್ತಿದ್ದು, ಇದರಿಂದಾಗಿ ಬಿಸಿಲಿನ ಧಗೆ ಇನ್ನಷ್ಟು ಹೆಚ್ಚುವಂತಾಗಿದೆ. ಈ ಬಾರಿ ನಗರದಲ್ಲಿ ಗರಿಷ್ಠ ತಾಪಮಾನದಲ್ಲಿ ಗಣನೀಯವಾಗಿ ಏರಿಕೆಯಾಗಿದೆ. ಬುಧವಾರ 41.3 ಡಿ.ಸೆ.ತಾಪಮಾನ ವರದಿಯಾಗಿತ್ತು. ಈ ಮೂಲಕ ಹಿಂದಿನ ಎಲ್ಲ ದಾಖಲೆಗಳು ಮುರಿದಂತಾಗಿದೆ.

2017ರಲ್ಲಿ 39.6, 2018ರಲ್ಲಿ 38.1, 2019ರಲ್ಲಿ 39.9, 2020ರಲ್ಲಿ 38.9, 2021ರಲ್ಲಿ 38.9, 2022ರಲ್ಲಿ 39.7 ಡಿ.ಸೆ.ಉಷ್ಣಾಂಶ ದಾಖಲಾಗಿತ್ತು. ಈವರೆಗೆ ದಾಖಲಾದ ಅತ್ಯಾಧಿಕ ತಾಪಮಾನ ಇದಾಗಿತ್ತು. ವರ್ಷದಿಂದ ವರ್ಷಕ್ಕೆ ನಗರದಲ್ಲಿ ತಾಪಮಾನ ಹೆಚ್ಚಳವಾಗುತ್ತಿದೆ. ಬೇಸಿಗೆಗಾಲ ಅಂದರೆ ಮಾರ್ಚ್​ನಿಂದ ಆರಂಭವಾಗಿ ಮೇ ತಿಂಗಳವರೆಗೆ ಇರುತ್ತದೆ. ಆದರೆ, ಈ ಬಾರಿ ನಗರದಲ್ಲಿ ವಾಡಿಕೆಗಿಂತ ಮುನ್ನ ಬೇಸಿಗೆ ಶುರುವಾಗಿತ್ತು. ಸಾಮನ್ಯವಾಗಿ ಮಾರ್ಚ್​ ಬಳಿಕ ಬಿಸಿಲು ಬೇಗೆ ಹೆಚ್ಚಾಗುತ್ತಿತ್ತು. ಫೆಬ್ರವರಿಯಲ್ಲೇ ಸುಡು ಬಿಸಿಲು ಕಾಣಿಸಿಕೊಂಡಿತ್ತು. ಏಪ್ರಿಲ್​ನಲ್ಲಿ ಹೆಚ್ಚಾಗುತ್ತಿದ್ದ ಉಷ್ಣಾಂಶ ಮಾರ್ಚ್​ನಲ್ಲಿ ಅಧಿಕವಾಗಿತ್ತು. ಏಪ್ರಿಲ್​ನಲ್ಲಿಯೂ 38ರ ಅಸುಪಾಸಿನಲ್ಲಿ ಉಷ್ಣಾಂಶ ದಾಖಲಾಗಿತ್ತು. ಪ್ರಸಕ್ತ ತಿಂಗಳು ಉಷ್ಣಾಂಶ 40ರ ಗಡಿ ದಾಟಿದೆ. ಕಳೆದ ವರ್ಷ ತೀವ್ರ ಮಳೆ ಅಭಾವ, ಗಾಳಿಯಲ್ಲಿ ತೇವಾಂಶ ಕುಂಠಿತ ಸೇರಿ ವಿವಿಧ ಕಾರಣಗಳಿಂದ ಉತ್ತರ ಕರ್ನಾಟಕದ ಮಾದರಿ ಉರಿ ಬಿಸಿಲು ಕಾಣಿಸಿಕೊಂಡಿದೆ.